ಕುಶಾಲನಗರ, ಅ. ೧೮: ನಿವೃತ್ತ ನೌಕರರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಮಡಿಕೇರಿ ಅಧ್ಯಕ್ಷರಾದ ಬಿ.ಬಿ. ಮಾದಮಯ್ಯ ಕರೆ ನೀಡಿದರು.
ಅವರು ಕುಶಾಲನಗರ ತಾಲೂಕು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ನಿವೃತ್ತ ನೌಕರರ ಹಲವು ಬೇಡಿಕೆಗಳು ಸರ್ಕಾರದ ಮುಂದಿದ್ದು ವಿಶೇಷ ಆದ್ಯತೆ ನೀಡಿ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.
ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷರಾದ ಎಂ.ಬಿ. ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಸಂಘದ ಸ್ಥಾಪಕ ಸದಸ್ಯರಾದ ಎಂ.ಹೆಚ್. ನಜೀರ್ ಅಹ್ಮದ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಳೆದ ಮಹಾಸಭೆಯ ವರದಿ ವಾಚನ, ಹೊಸ ಸದಸ್ಯರ ಪರಿಚಯ, ಲೆಕ್ಕ ಪರಿಶೋಧನಾ ವರದಿ ಅಂಗೀಕರಿಸಲಾಯಿತು.
ಸಂಘದ ಹಿರಿಯ ಸದಸ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಆಡಳಿತ ಮಂಡಳಿಯ ಮಾಜಿ ಪದಾಧಿಕಾರಿಗಳಾದ ರಾಘವಯ್ಯ, ನಾಣಯ್ಯ, ಅಬ್ರಹಾಂ ದಿವಾಕರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಖಜಾಂಚಿ ವಿ.ಆರ್. ಹೆಗಡೆ ಪ್ರಾರ್ಥಿಸಿದರು, ಕಾರ್ಯದರ್ಶಿ ಜಿ. ಕೆಂಚಪ್ಪ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಎನ್. ರಾಜಪ್ಪ ವಂದಿಸಿದರು.