ವೀರಾಜಪೇಟೆ, ಅ. ೧೯: ಬಾಳುಗೋಡಿನ ಕೊಡವ ಸಮಾಜ ಒಕ್ಕೂಟಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೇಟಿ ನೀಡಿದರು.
ಕೊಡವ ಸಮಾಜ ಒಕ್ಕೂಟ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಕೋರಿಕೆ ಮೇರೆಗೆ ಭೇಟಿ ನೀಡಿದ ಶಾಸಕರು, ಅಲ್ಲಿ ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಕೊಡವ ಸಮಾಜದ ಪದಾಧಿಕಾರಿಗಳು ಇಲ್ಲಿಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಹಾಗಾಗಿ ತಾನು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆ ಅನುದಾನದಲ್ಲಿ, ಬಾಳುಗೋಡು ಕೊಡವ ಸಮಾಜದ ವಿವಿಧ ಅಭಿವೃದ್ಧಿ ಹಾಗೂ ನಿರ್ಮಾಣ ಕಾಮಗಾರಿಗಳಿಗೆ ರೂ. ೬ ಕೋಟಿ ಮೊತ್ತ ಒದಗಿಸಲಾಗಿತ್ತು. ಇದರಲ್ಲಿ ಮೈದಾನಗಳ ಅಭಿವೃದ್ಧಿ, ಪ್ರೇಕ್ಷಕರ ಗ್ಯಾಲರಿ, ತಡೆಗೋಡೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಒಳಗೊಂಡಿತ್ತು. ಇಂದು ಈ ಎಲ್ಲಾ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಕಾಮಗಾರಿಯ ಗುಣಮಟ್ಟ ತೃಪ್ತಿ ತಂದಿದೆ ಹಾಗೂ ಈ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು. ಕೊಡವ ಸಮಾಜದ ಪದಾಧಿಕಾರಿಗಳ ಮೇಲು ಸ್ತುವಾರಿ ಯಲ್ಲಿ ಸರ್ಕಾರ ನೀಡಿದ ಅನುದಾನದ ಸಂಪೂರ್ಣ ಸದ್ಬಳಕೆ ಆಗುತ್ತಿರುವುದನ್ನು ಮನಗಂಡು ಸಂತೋಷ ವ್ಯಕ್ತಪಡಿಸಿದ ಶಾಸಕರು, ಕ್ಷೇತ್ರದ ಎಲ್ಲರೂ ಈ ಕಾಮಗಾರಿಯಂತೆ ಎಲ್ಲಾ ಕಾಮಗಾರಿಗಳಲ್ಲೂ ಸರಕಾರದ ಅನುದಾನ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ಇಲ್ಲಿಯ ಹಾಕಿ ಮೈದಾನ ಅತ್ಯಂತ ಗುಣಮಟ್ಟದಲ್ಲಿದ್ದು, ಕೊಡಗಿನ ಕ್ರೀಡಾಪಟುಗಳ ಭವಿಷ್ಯಕ್ಕೆ ಇದು ಉತ್ತಮ ಕೊಡುಗೆಯಾಗಲಿದೆ ಎಂದರು.
ಬಳಿಕ ಮಾತನಾಡಿದ ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ವಿಷ್ಣು ಕಾರ್ಯಪ್ಪ, ಶಾಸಕ ಎ.ಎಸ್. ಪೊನ್ನಣ್ಣ ಅವರು, ತಮ್ಮನ್ನು ಹಾಗೂ ಸಮಾಜದ ಪದಾಧಿಕಾರಿಗಳನ್ನು ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿ, ರೂ. ೧೦ ಕೋಟಿ ಅನುದಾನ ಒದಗಿಸಿದ್ದನ್ನು ಸ್ಮರಿಸಿಕೊಂಡರು. ರೂ. ೧೦ ಕೋಟಿ ಅನುದಾನದಲ್ಲಿ, ರೂ. ೬ ಕೋಟಿ ಬಾಳುಗೋಡು ಕೊಡವ ಸಮಾಜದ ಅಭಿವೃದ್ಧಿಗೆ, ರೂ. ೩ ಕೋಟಿಯನ್ನು ೩೦ ಕೊಡವ ಸಮಾಜಗಳಿಗೆ ತಲಾ ರೂ. ೧೦ ಲಕ್ಷದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ರೂ. ೧ ಕೋಟಿ ಭಾಗಮಂಡಲ ಕೊಡವ ಸಮಾಜಕ್ಕೆ ಮೀಸಲಿರಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಗಿರೀಶ್, ಮನು, ಸೋಮಣ್ಣ, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.