ವೀರಾಜಪೇಟೆ, ಅ. ೧೮: ತ್ಯಾಗ, ಸೇವೆ, ಸಾಧನೆ, ಆತ್ಮೋನ್ನತಿಗೆ ಹೆದ್ದಾರಿ. ಸ್ವಾಮಿ ವಿವೇಕಾನಂದರು ಸೇರಿದಂತೆ ವಿವಿಧ ಶರಣರ ಜೀವನ ಶೈಲಿಯನ್ನು ಸರಳ ರೀತಿಯಲ್ಲಿ ಇಂದಿನ ಯುವ ಜನತೆಗೆ ಅರ್ಥೈಸಿ ಸರ್ವರು ಸತ್ಸಂಗದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ನಿರಂತರ ಕಾರ್ಯವನ್ನು ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಉಡುಪಿಯ ಡಿವೈನ್ ಪಾರ್ಕ್ ಟ್ರಸ್ಟ್ ಸೇವಕರಾದ ಸುಂದರ್ ಗೌಡ ಹೇಳಿದರು.
ವೀರಾಜಪೇಟೆಯ ವಿವೇಕ ಜಾಗೃತ ಬಳಗದ ವತಿಯಿಂದ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಆತ್ಮೋನ್ನತಿ ಶಿಬಿರದಲ್ಲಿ ಮಾತನಾಡಿದ ಅವರು, ವಿವೇಕದ ಜೀವನ ವಿಧಾನವೇ ಬದುಕಿನ ಯಶಸ್ಸಾಗಿದ್ದು, ಸಾಹಿತ್ಯ ಸಂಸ್ಕöÈತಿಯ ಓದು ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತಾರಗೊಳಿಸುತ್ತದೆ. ವೇದ ಉಪನಿಷತ್ತು, ಭಗವದ್ಗೀತೆಯಾದಿ ಧಾರ್ಮಿಕ ಕಾವ್ಯಗಳು ನಮ್ಮ ಮನಸ್ಸನ್ನು ವಿಕಾರದಿಂದ ಬಿಡಿಸಿ ಸಕಾರಾತ್ಮಕ ನಡೆಗೆ ಸಹಕಾರಿಯಾಗಿವೆ.
ಒಳ್ಳೆಯದನ್ನು ಓದುವ, ಅರಿಯುವ, ಅಳವಡಿಸಿಕೊಳ್ಳುವ, ನಡೆ-ನುಡಿಗೆ ಸಾಕಾರವಾಗಿ ಸ್ವೀಕರಿಸುವ ಮನಸ್ಸು ಬೇಕಾಗುತ್ತದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮನುಷ್ಯ ಮೃಗವಾಗುತ್ತಿರುವ ಸಂದರ್ಭದಲ್ಲಿ ಧರ್ಮ ಮಾರ್ಗ ಮಾತ್ರ ಪರಿವರ್ತನೆ ತರಬಲ್ಲದು ಎಂದರು.
ಡಿವೈನ್ ಪಾರ್ಕ್ ಟ್ರಸ್ಟ್ ಸೇವಕರಾದ ಉಷಾ ಕಿರಣ ಶೆಟ್ಟಿ ಮಾತನಾಡಿ, ಮಕ್ಕಳಲ್ಲಿ ಮೊದಲು ಓದುವ ಹವ್ಯಾಸ ಬೆಳೆಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಹಿರಿಯರ ವಾಣಿಯನ್ನು ಪಾಲಕರಾದವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳನ್ನು ಸುಸಂಸ್ಕöÈತವಾಗಿ ಬೆಳೆಸುವುದೇ ಒಂದು ಸಾಹಸವಾಗಿದೆ ಎಂಬ ಅರಿವು ನಮಗಿರಲಿ ಎಂದರು.
ನೀತಿ ಪಾಠಗಳಿಲ್ಲದ ಇಂದಿನ ಶಿಕ್ಷಣ ಯಾಂತ್ರಿಕ ಹಾಗೂ ಭಾವನಾತ್ಮಕ ಸಂಬAಧಗಳಿಲ್ಲದ ಕೃತಕ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ವಿಷಾದದ ಸಂಗತಿ. ಮನೆ, ಕುಟುಂಬ, ದೇವರು, ಧರ್ಮದ ಕಲ್ಪನೆಗಳೇ ದೂರವಾಗಿ ಕೇವಲ ಹಣವನ್ನು ಬಾಚುವ ತಂತ್ರಗಳನ್ನು ಕಲಿಸುವ ಶಿಕ್ಷಣ ಈಗ ಕಾಣುತ್ತಿರುವುದು ಭವಿಷ್ಯದಲ್ಲಿ ಸಾಮಾಜಿಕ ದುರಂತಕ್ಕೆ ಸಾಕ್ಷಿಯಾಗುತ್ತದೆ ಎಂದರಲ್ಲದೆ ಭಕ್ತಿ ಸಾಗರದಲ್ಲಿ ನೆನಸಿ ಭವರೋಗದಿಂದ ವಿಮುಕ್ತಿಗೆ ಬೇಕಾಗುವ ಸಾಧನೆಗಳು ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಬೇಕಾದ ಸೇವಾಚತುರತೆಯ ಬಗ್ಗೆ ತಿಳಿಸಿ ಆತ್ಮೋನ್ನತಿಗೆ ಬೇಕಾಗುವ ಬಂಧನ, ಸ್ಮರಣ, ಮನನ, ಗಮನಗಳ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ರಾಜಶೇಖರ್, ಶಶಿಕಲಾ ಭಾಸ್ಕರ್, ಲೋಕೇಶ್ ಹೆಚ್.ಡಿ. ಸೇರಿದಂತೆ ಬಳಗದ ಎಲ್ಲಾ ಕಾರ್ಯಕರ್ತರು ಹಾಜರಿದ್ದರು. ಬಳಿಕ ಬಳಗದ ವತಿಯಿಂದ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.