ಪೊನ್ನಂಪೇಟೆ, ಅ. ೧೮: ಪೊನ್ನಂಪೇಟೆ ತಾಲೂಕಿನ ಕುಂದ ಬೆಟ್ಟದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕೊಡಗಿನ ಮೊದಲ ಬೋಡ್ ನಮ್ಮೆ ಬೊಟ್ಟಿಯತ್ ನಾಡ್ ಕುಂದ ಹಾಗೂ ಮುಗುಟಗೇರಿ ಗ್ರಾಮದಲ್ಲಿ ವಿಜೃಂಭಣೆಯಿAದ ನಡೆಯಿತು.
ಕುಂದತ್ ಬೊಟ್ಟ್ಲ್ ನೇಂದ ಕುದುರೆ... ಪಾರಣ ಮಾನಿಲ್ ಅಳ್‌ಂಜ ಕುದುರೆ.. ಎಂಬ ಬೋಡ್ ನಮ್ಮೆಯ ಜಾನಪದ ಹಾಡಿನಂತೆ ಬೊಟ್ಟಿಯತ್ ನಾಡಿನ ಕುಂದಾ ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಕಳೆದ ಶನಿವಾರ ಕೊಡಗಿನ ಮೊದಲ ಬೋಡ್ ನಮ್ಮೆಗೆ ಕಟ್ಟ್ ಬೀಳುವ ಮೂಲಕ ಊರಿನಲ್ಲಿ ಹಬ್ಬದ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗಿತ್ತು.
ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ನೇತೃತ್ವದಲ್ಲಿ ನಡೆದ ಈ ಹಬ್ಬದಲ್ಲಿ ಇಲ್ಲಿನ ಅಂಬಲದಲ್ಲಿ ಹಬ್ಬದ ಕಟ್ಟುಪಾಡುಗಳನ್ನು ತಿಳಿಸಿ ಬೋಡ್ ನಮ್ಮೆಯ ಸಾಂಪ್ರದಾಯಿಕ ಹಾಡು ಹೇಳುತ್ತಾ ಡೋಲು ಬಾರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ವರ್ಷಂಪ್ರತಿ ಕಾವೇರಿ ತೀರ್ಥೋದ್ಭವ ದಿನ ಹಾಗೂ ಮರು ದಿವಸ ಇಲ್ಲಿ ಬೋಡ್ ನಮ್ಮೆ ನಡೆಯುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿದ್ದು, ತೀರ್ಥೋದ್ಭವ ಸಮಯ, ಇಲ್ಲಿನ ಹಬ್ಬವನ್ನು ನಿಶ್ಚಯ ಮಾಡುತ್ತದೆ. ಈ ಬಾರಿ ತಾ. ೧೭ ರಂದು ಸಾಂಪ್ರದಾಯಿಕ ಮನೆಕಳಿ ಹಾಗೂ ತಾ.೧೮ ರಂದು ಸಾಂಪ್ರದಾಯಿಕ ಕುದುರೆ ಹಬ್ಬ ಹಾಗೂ ಬೆಟ್ಟ ಹತ್ತುವ ಕಾರ್ಯಕ್ರಮ ನಡೆಯಿತು. ಕಾವೇರಿ ತೀರ್ಥೋದ್ಭವದ ಬಳಿಕ ಕಾವೇರಿ ಪವಿತ್ರ ತೀರ್ಥವನ್ನು ತಂದು ಬೆಟ್ಟದ ಮೇಲಿರುವ ಬೊಟ್ಲಪ್ಪನಿಗೆ ಅರ್ಪಿಸುವ ಮೂಲಕ ವಿವಿಧ ಆಚರಣೆಗಳು ನಡೆದವು.
ತಾ. ೧೮ ರಂದು ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ಬಲ್ಯಮನೆಯಿಂದ ಕೃತಕವಾಗಿ ತಯಾರಿಸಲಾದ ತಲಾ ಒಂದೊAದು ಕುದುರೆಯನ್ನು ಶೃಂಗರಿಸಿ, ಮಧ್ಯಾಹ್ನ ಇಲ್ಲಿನ ಈಶ್ವರ ದೇವಸ್ಥಾನದ ಸಮೀಪದ ಅಂಬಲದಲ್ಲಿ ಸೇರಿ ಹತ್ತಿರದ ಕುಂದಾ ಬೆಟ್ಟವನ್ನು ಹತ್ತಲು ಚಾಲನೆ ನೀಡಲಾಯಿತು. ಮನೆಯಪಂಡ ಕುಟುಂಬಕ್ಕೆ ಸೂತಕವಿದ್ದ ಕಾರಣ ಸಣ್ಣುವಂಡ ಕುಟುಂಬ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿತು. ನಂತರ ಬೆಟ್ಟದ ತಪ್ಪಲಿನಿಂದ ಕುದುರೆ ಹಾಗೂ ಭಕ್ತರು ಕಡಿದಾದ ದಾರಿಯ ಮಧ್ಯದ ಬೆಟ್ಟವನ್ನು ಕೆಲವೇ ಸಮಯದಲ್ಲಿ ಆಯಾಸವಿಲ್ಲದೆ ಏರಿ ಅಲ್ಲಿನ ಬೊಟ್ಲಪ್ಪ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಗ್ರಾಮಸ್ಥರು ಸೇರಿದಂತೆ ನೆರೆ ಊರಿನವರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು