ಮಡಿಕೇರಿ, ಅ. ೧೮ : ಸ್ವಚ್ಛ ಕೊಡಗು ಸುಂದರ ಕೊಡಗು ಪರಿಕಲ್ಪನೆಯಡಿ ಇತ್ತೀಚೆಗಷ್ಟೇ ಇಡೀ ಕೊಡಗು ಜಿಲ್ಲೆ ಸ್ವಚ್ಛಂದವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಸೇರಿ ರಸ್ತೆ ಬದಿಯ ಕಸ ಹೆಕ್ಕಿ ಸ್ವಚ್ಛಗೊಳಿಸಿದರು.

ಪ್ರಸಿದ್ಧ ಪ್ರವಾಸಿ ತಾಣ ಅಬ್ಬಿಫಾಲ್ಸ್, ಮಾಂದಲಪಟ್ಟಿ ನೋಡಲೆಂದು ಬಸ್‌ನಲ್ಲಿ ಬಂದಿದ್ದ ಪ್ರವಾಸಿಗರು, ಅಲ್ಲಿಂದ ಹಿಂತಿರುಗುವಾಗ ತಾವು ತಿಂದು ಕುಡಿದ ಬಾಟಲ್, ಪ್ಲಾಸ್ಟಿಕ್‌ಗಳನ್ನು ನೇರ ಬಸ್ಸಿನಿಂದ ಹೊರಕ್ಕೆ ಎಸೆದಿದ್ದಾರೆ. ಬಸ್‌ನ ಹಿಂಭಾಗದಲ್ಲಿ ಬೈಕ್‌ನಲ್ಲಿ ಚಲಿಸುತ್ತಿದ್ದ ದೇವಸ್ತೂರು ಗ್ರಾಮದ ಹರೀಶ್ ಚಂಗಪ್ಪ ಪ್ರವಾಸಿಗರ ಈ ಕೃತ್ಯಕ್ಕೆ ಕೋಪಗೊಂಡರು. ತಕ್ಷಣ ಬಸ್ ಅನ್ನು ಅಡ್ಡಗಟ್ಟಿದ ಅವರು, ಪ್ರವಾಸಗರನ್ನು ತರಾಟೆಗೆ ತೆಗೆದುಕೊಂಡರು. ಅವರಿಂದಲೇ ಕಸವನ್ನೆಲ್ಲಾ ಹೆಕ್ಕಿಸಿ ಬಸ್‌ಗೆ ತುಂಬಿಸಿ ಕಳುಹಿಸಿದರು. ಈ ವೇಳೆ ಮಾತನಾಡಿದ ಹರೀಶ್ ಚಂಗಪ್ಪ, ಕೊಡಗು ಕಸ ಎಸೆಯುವ ಜಾಗವಲ್ಲ, ಇಲ್ಲಿನ ಸುಂದರ ಪರಿಸರವನ್ನು ಹಾಳು ಮಾಡದೆ, ಕಸವನ್ನು ಬುಟ್ಟಿಗೆ ಹಾಕುವಂತೆ ಮನವಿ ಮಾಡಿದ್ದಾರೆ.