ಮಡಿಕೇರಿ, ಅ. ೧೭: ಆಟೋ ಚಾಲಕಿಯಾಗಬೇಕೆನ್ನುವ ಹಂಬಲ ವ್ಯಕ್ತಪಡಿಸಿದ ಮಹಿಳೆಗೆ ಹಿರಿಯ ಆಟೋ ಚಾಲಕಿ ಸುಜಾತ ಎಂಬವರು ಆಟೋ ಚಾಲನೆ ತರಬೇತಿ ನೀಡಿದ್ದಾರೆ. ಶ್ರದ್ಧೆಯಿಂದ ತರಬೇತಿ ಪಡೆದು ಸಾಲ ಮಾಡಿ ಆಟೋ ಖರೀದಿಸಿ ಬರಡಿ ಗ್ರಾಮದ ಶ್ರೀವಳ್ಳಿಯಲ್ಲಿ ವೃತ್ತಿ ಆರಂಭಿಸಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಸುಜಾತ ಅವರ ಆಟೋದಲ್ಲಿ ಬರಡಿ ಗ್ರಾಮದಿಂದ ಸಿದ್ದಾಪುರಕ್ಕೆ ಪ್ರಯಾಣಿಸುತ್ತಿದ್ದ ಕಾರ್ಮಿಕ ಮಹಿಳೆ ಶ್ರೀವಳ್ಳಿ ಕೆಲವು ದಿನಗಳ ನಂತರ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ತಾವು ಕೈಗೊಳ್ಳುತ್ತಿದ್ದ ತೋಟ ಕೆಲಸ ನಿರ್ವಹಿಸಲು ಸಾಧ್ಯವಾಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಚಾಲಕಿ ಸುಜಾತಾ ಶ್ರೀವಳ್ಳಿ ಅವರಿಗೆ ಧೈರ್ಯ ತುಂಬಿ ಆಟೋ ಚಾಲನೆ ತರಬೇತಿ ನೀಡಿದರು. ಸ್ಥಳೀಯ ಆಟೋ ಚಾಲಕರು ಸೇರಿದಂತೆ ಮನೆ ಮಂದಿಯ ಪ್ರೋತ್ಸಾಹದಿಂದ ಯಶಸ್ಸು ಕಂಡರು. ಕಳೆದ ಒಂದು ತಿಂಗಳಿAದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಬೆಳಿಗ್ಗೆನಿಂದ ಸಂಜೆ ೬ ಗಂಟೆ ತನಕ ಸೇವೆ ನೀಡುವ ಮಹಿಳೆಯ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಟೋ ಬಾಡಿಗೆಯಿಂದ ಕುಟುಂಬ ಜೀವನ ನಡೆಸುವಂತಾಗಿದ್ದು ಗ್ರಾಮದವರು ಸಹಕಾರ ನೀಡಿದ್ದಾರೆ ಎಂದರು. ಹಿರಿಯ ಆಟೋ ಚಾಲಕಿ ಸುಜಾತ ಮಾತನಾಡಿ, ನಾನು ಹತ್ತು ವರ್ಷಗಳಿಂದ ಸಿದ್ದಾಪುರ, ನೆಲ್ಲಿಹುದಿಕೇರಿ ಗ್ರಾಮದಲ್ಲಿ ಆಟೋ ಚಾಲನೆ ಮಾಡುತ್ತಿದ್ದೇನೆ. ನನ್ನ ಗೆಳತಿ ಶ್ರೀವಳ್ಳಿ ಅವರಿಗೆ ತರಬೇತಿ ನೀಡಿ ಅವರು ಇದೀಗ ಆಟೋ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.

- ಎಸ್.ಎಂ. ಮುಬಾರಕ್