ದಕ್ಷಿಣ ಭಾರತದ ಕಾವೇರಿ ನದಿಯ ಪುಣ್ಯಭೂಮಿ ಕೊಡಗಿನ ತಲಕಾವೇರಿಯಲ್ಲಿ ಜೀವನದಿ ಕಾವೇರಿ ಅಕ್ಷಯ ತೀರ್ಥರೂಪಿಣಿಯಾಗಿ ಒಲಿದು ಬರುವ ಪವಿತ್ರ ದಿನದ ಸಾಂಪ್ರದಾಯಿಕ ಆಚರಣೆಯೇ “ಕಾವೇರಿ ತುಲಾ ಸಂಕ್ರಮಣ” ಹಾಗೂ “ಕಾವೇರಿ ಚಂಗ್ರಾAದಿ”.
ವರ್ಷದ ಅಕ್ಟೋಬರ್ ತಿಂಗಳ ತುಲಾ (ಮಾಸ) ಸಂಕ್ರಮಣದAದು ನಡೆಯುವ ಕಾವೇರಿಮಾತೆಯ ಉತ್ಸವದ ಸಾಂಪ್ರದಾಯಿಕ ಆಚರಣೆಯಾಗಿದೆ. ದೇವಾಲಯದ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಅರ್ಚಕರು ತೀರ್ಥೋದ್ಭವದ ದಿನದ ಲಗ್ನ ಹಾಗೂ ಮೂಹೂರ್ತದ ದಿನವನ್ನು ತಿಳಿಸಿದಂತೆ ಸೂರ್ಯನು ತುಲಾ ರಾಶಿಗೆ ಸೇರುವ ಸಮಯದಲ್ಲೇ ಕೊಡವರ ಕುಲದೇವಿ ಕೊಡಗಿನ ಆರಾಧ್ಯದೈವ ಕಾವೇರಿಯು ತನ್ನ ಉಗಮಸ್ಥಾನ ತಲಕಾವೇರಿಯ ಕುಂಡಿಕೆಯಿAದ ಪವಿತ್ರ ಜಲ ಮೇಲುಕ್ಕಿ ಬರುವ ಕ್ಷಣವೇ ಪವಿತ್ರ ತೀರ್ಥೋದ್ಭವ.
ಪುರಾಣ ಕಾಲದ ಸತ್ಯ ಘಟನೆ..
ಶ್ರೀ ಕಾವೇರಿ ಮಾತೆಯು ಮಹರ್ಷಿ ಅಗಸ್ತö್ಯರ ಪತ್ನಿ. ಕವೇರ ಮುನಿಯ ಸಾಕುಮಗಳು, ಬಹ್ಮದೇವರ ಮಾನಸ ಪುತ್ರಿ ಲೋಪಾಮುದ್ರೆ ಎನ್ನುವುದು ಈಕೆಯ ಪೂರ್ವನಾಮ. ಮಕ್ಕಳಿಲ್ಲವೆಂಬ ಕೊರಗಿನಿಂದ ಸಂತಾನ ಪ್ರಾಪ್ತಿಗಾಗಿ ಕವೇರ ಮುನಿಯು ಎಸಗಿದ ತಪಸ್ಸಿಗೆ ಒಲಿದ ಬ್ರಹ್ಮನು ಪ್ರಾಚೀನ ಕರ್ಮಫಲದಂತೆ ಕವೇರ ಮುನಿಗೆ ಈ ಜನ್ಮದಲ್ಲಿ ಸಂತಾನ ಭಾಗ್ಯವಿಲ್ಲವೆಂದು ಹೇಳಿ ತನ್ನ ಮಾನಸ ಪುತ್ರಿಯಾದ ಲೋಪಾಮುದ್ರೆಯನ್ನು ದತ್ತು ಪುತ್ರಿಯಾಗಿ ಸ್ವೀಕರಿಸುವಂತೆ ಹೇಳಿ ಅನುಗ್ರಹಿಸಿದರಂತೆ, ಕವೇರಮುನಿಯ ಸಾಕು ಮಗಳಾದ ಲೋಪಾಮುದ್ರೆಯು ಶ್ರೀ ಕಾವೇರಿ ಮಾತೆ ಎಂಬ ಹೆಸರಿನಲ್ಲಿ ವಿಖ್ಯಾತಳಾದಳು.
ಉತ್ತರ ಭಾರತದಿಂದ ದಕ್ಷಿಣ ದೇಶಕ್ಕೆ ಆಗಮಿಸಿದ ಅಗಸ್ತö್ಯ ಮಹರ್ಷಿಗಳು ಕವೇರ ಮುನಿಗಳ ಬಳಿ ಬಂದಾಗ ದಿವ್ಯಾಂಶ ಸಂಭೂತೆಯಾದ ಕಾವೇರಿಯನ್ನು ನೋಡಿ ತ್ರಿಕಾಲ ಜ್ಞಾನಿಗಳಾದ ಅವರು ಕಾವೇರಿಯ ಜೀವನೋದ್ದೇಶವನ್ನು ಗ್ರಹಿಸಿಕೊಂಡರು. ಅದರಂತೆ ಅಗಸ್ತö್ಯ ಮಹರ್ಷಿಗಳು ಕಾವೇರಿಯನ್ನು ವಿವಾಹವಾಗಲು ಬಯಸಿದ್ದು ಅವರ ಅಭಿಲಾಷೆಗೆ ಕಾವೇರಿಯು ಒಪ್ಪಿ ತನ್ನನ್ನು ಯಾವ ಕಾಲಕ್ಕೂ ಒಂದು ಕ್ಷಣವೂ ಬಿಟ್ಟು ಇರಕೂಡದು. ಒಂದುವೇಳೆ ಬಿಟ್ಟು ಹೋದದ್ದೇಯಾದರೆ ತತ್ಕ್ಷಣವೇ ತಾನು ನದಿಯಾಗಿ ರೂಪ ತಳೆದು ಸಮುದ್ರದ ಕಡೆಹೊರಟು ಹೋಗುತ್ತೇನೆಂದಳು. ಅದರಂತೆ ಅಗಸ್ತö್ಯ ಮಹರ್ಷಿಗಳು ಒಪ್ಪಿ ಋಷ್ಯಾಶ್ರಮದ ಪವಿತ್ರ ನೆಲೆಯಲ್ಲಿ ಶ್ರೀ ಅಗಸ್ತö್ಯ -ಕಾವೇರಿಯ ವಿವಾಹವು ಬಹಳ ವೈಭವದಿಂದ ನೆರವೇರಿತು.
ದಿನಕಳೆದಂತೆ ಒಂದು ದಿನ ಅಗಸ್ತö್ಯ ಮಹಋಷಿಗಳು ಬ್ರಾಹ್ಮೀ ಮುಹೂರ್ತದಲ್ಲಿ ಬಹ್ಮಗಿರಿಯ ತಪ್ಪಲಿನ ಕನಕಜೆಗೆ ಸ್ನಾನ ಸಂಧ್ಯಾವAದನೆಗೆ ತೆರಳುವ ಮುನ್ನ ಕಾವೇರಿಯನ್ನು ಜಲರೂಪಿಯಾಗಿ ಪರಿವರ್ತಿಸಿ ತನ್ನ ಕಮಂಡಲುವಿನಲ್ಲಿ ಸೇರಿಸಿ, ಶಿಷ್ಯರಿಗೆ ಜಾಗ್ರತೆಯಿಂದ ಕಾಯ್ದುಕೊಳ್ಳಿ ಎಂದು ಹೇಳಿ ಕಮಂಡಲುವನ್ನು ಬ್ರಹ್ಮಕುಂಡಿಕೆಯಲ್ಲಿಟ್ಟು ತೆರಳಿದರು.
ಆ ಸಮಯದಲ್ಲಿ ಜಲರೂಪಿಣಿಯಾಗಿದ್ದ ಕಾವೇರಿಯು ಮೇಲುಕ್ಕಿ ಬ್ರಹ್ಮಕುಂಡಿಕೆಗೆ ಹರಿದು ನದಿರೂಪಿಯಾಗಿ ಮುಂದೆ ಹರಿದಾಗ ಶಿಷ್ಯರು ತಡೆಯಲು ಮುಂದಾದಾಗ ಕಾವೇರಿಯು ಗುಪ್ತ ಗಾಮಿನಿಯಾಗಿ ಮುಂದೆ ಸಾಗಿದಳು. ಅತ್ತ ಅಗಸ್ತö್ಯ ಮಹರ್ಷಿಗಳಿಗೆ ತಮ್ಮ ದಿವ್ಯದೃಷ್ಟಿ ಮೂಲಕ ಈ ವಿಚಾರ ತಿಳಿದು ಧಾವಿಸಿ ಬಂದು ಕಾವೇರಿಯನ್ನು ನದಿಯಾಗಿ ಹೋಗುವುದು ಬೇಡವೆಂದು ಕೇಳಿಕೊಂಡರು. ಆಗ ಕಾವೇರಿಯು ತಾನು ತನ್ನ ಶರೀರದ ಒಂದAಶದಲ್ಲಿ ನದಿಯಾಗಿ ತೆರಳಿ ಲೋಕ ಕಲ್ಯಾಣಕ್ಕಾಗಿಯೂ, ಉಳಿದೊಂದAಶ ಪತ್ನಿಯಾಗಿ ಉಳಿಯುವೆನೆಂದು ಅಗಸ್ತö್ಯ ಮಹರ್ಷಿಗೆ ಸಮಾಧಾನ ಹೇಳಿ ತನ್ನ ದಿವ್ಯವತಾರ ಲೀಲಾ ಕಾರ್ಯವನ್ನು ಮುಂದುವರಿಸಿ ನದಿಯಾಗಿ ಹರಿದು ಪುಣ್ಯಕ್ಷೇತ್ರವಾದ ಭಾಗಮಂಡಲದ ಕನ್ನಿಕಾ, ಸುಜ್ಯೋತಿ ನದಿಗಳು ಕಾವೇರಿಯೊಡನೆ ಸಂಗಮವಾಗಿ ಸಂಗಮ ಕ್ಷೇತ್ರವಾಗಿ ರೂಪುಗೊಂಡಿತು. ಎಲ್ಲಿಯ ತನಕ ನೀವು ನನ್ನನ್ನು ನಂಬಿ ಆರಾಧಿಸುತ್ತೀರೋ ಅಲ್ಲಿತನಕ ನಾಡಿಗೆಲ್ಲ ಮಾತೆಯಾಗಿ ಸಮಸ್ತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆಂದು ಭಾಷೆ ನೀಡಿ ಶ್ರೀ ಕಾವೇರಿ ಮಾತೆಯು ನದಿಯಾಗಿ ಮುಂದೆ ಹರಿಯ ತೊಡಗಿದಳು.
ಮತ್ತೊಂದು ಪುರಾಣಕಥೆ...
ವಿಷ್ಣುಮಾಯಾ ಎಂಬ ಬ್ರಹ್ಮನ ಮಗಳನ್ನು ಕವೇರಮುನಿ ಸಾಕಿ ಕೊಂಡಿದ್ದರAತೆ ವಿಷ್ಣುವಿನ ಆಜ್ಞೆಯಂತೆ ಈ ಕನ್ಯೆಯು ದೇಹರೂಪಿಯಾಗಿ ಲೋಪಮುದ್ರಾ ಎಂಬ ಹೆಸರಿನಿಂದ ಅಗಸ್ತö್ಯ ಸತಿಯೂ, ನದಿರೂಪಿಯಾಗಿ ಕಾವೇರಿಯಾದಳು. ದಕ್ಷಿಣದಲ್ಲಿ ಜಲ ಕ್ಷಾಮವಿದೆಯೆಂದು ಸುದ್ದಿ ತಿಳಿದ ಅಗಸ್ತö್ಯನು ತನ್ನ ಪತ್ನಿಯ ಜೊತೆ ಸಹ್ಯಾದ್ರಿಯ ತಪ್ಪಲ ಬ್ರಹ್ಮಗಿರಿಗೆ ಬಂದಾಗ ಜೋರಾದ ಗಾಳಿಬೀಸಿ ಕಮಂಡಲು ಉರುಳಿ ಅದರಲ್ಲಿ ಜಲರೂಪಿಯಾಗಿದ್ದ ಕಾವೇರಿಯು ನದಿಯಾಗಿ ಹರಿದಳೆಂದು ಹೇಳಿದರೆ ಮತ್ತೊಂದು ಕಥೆಯಲ್ಲಿ ಶೂರಪದ್ಮನೆಂಬ ಅಸುರನು ತನ್ನ ವಿಶೇಷ ಶಕ್ತಿಯಿಂದ ಮಳೆ ಬೀಳುವುದನ್ನು ತಡೆದನಂತೆ. ಇದರಿಂದ ದಕ್ಷಿಣ ಭಾರತದಲ್ಲಿ ಹಾಹಾಕಾರವಾಗಲು ಇಂದ್ರನ ಪ್ರಾರ್ಥನೆಯಂತೆ ಗಣೇಶನು ಕಾಗೆಯ ರೂಪ ತಳೆದು ಕವೇರ ಋಷಿಯ ಕಮಂಡಲುವನ್ನು ಕೆಡವಿ ಕಾವೇರಿಯ ಉಗಮಕ್ಕೆ ಕಾರಣನಾದನೆಂದು ಹೇಳುತ್ತಾರೆ. ಕೊಡಗಿನ ಕಾವೇರಿ ಪುರಾಣದಲ್ಲಿನ ಕಾವೇರಿ ಮಾತೆ ಕಥೆಯನ್ನು ಕೊಡವ ಹಾಡಿನಲ್ಲಿ ಸವಿವರವಾಗಿ ರಚಿಸಲಾಗಿದೆ.
ಕಾವೇರಿ ಮಾತೆಯು ಕೊಡಗಿನ ತಲಕಾವೇರಿ, ಭಾಗಮಂಡಲದಲ್ಲಿ ನದಿಯಾಗಿ ಹರಿದು ಬಲಮುರಿಗೆ ಬರುವಾಗ ಒಮ್ಮೆ ತನ್ನ ಪ್ರವಾಹದ ದಿಕ್ಕನ್ನು ಬದಲಾಯಿಸುತ್ತಾಳಂತೆ. ಆ ಸಮಯದಲ್ಲಿ ಅಲ್ಲಿ ಇದ್ದ ಕೊಡವ ಮಹಿಳೆಯ ಸೀರೆಯ ಮುಂದೆ ಇದ್ದ ನೆರಿಗೆಯು ನೀರಿನ ರಭಸಕ್ಕೆ ಹಿಂದಕ್ಕೆ ತಿರುಗಿತಂತೆ. ಅಲ್ಲಿಂದ ಕೊಡವ ಮಹಿಳೆಯು ಸೀರೆ ಉಡುವಾಗ ನೆರಿಗೆಯನ್ನು ಹಿಂದಕ್ಕೆ ಹಾಕುವ ಬಗ್ಗೆ ಪ್ರತೀತಿ ಇದೆಯೆನ್ನುತ್ತಾರೆ.
ಕೊಡವರು ಕಾವೇರಿ ಮಾತೆಯನ್ನು ಕುಲದೇವಿ ಎಂದು ಪೂಜಿಸುತ್ತಾ ಬರುತ್ತಿದ್ದು, ಕೊಡಗಿನವರು ಆರಾಧ್ಯ ದೇವಿಯೆಂದು ನಂಬಿದ್ದ ಉಗಮ ಸ್ಥಾನವಾದ ಪವಿತ್ರನೆಲೆ ತಲಕಾವೇರಿಯಲ್ಲಿ ವರ್ಷದ ಹಲವು ಬಾರಿ ವಿಶೇಷ ಪೂಜಾದಿ ಉತ್ಸವಗಳನ್ನು ನಡೆಸಿಕೊಂಡು ಬರುತ್ತಿರುವರು.
ಪ್ರತೀ ವರ್ಷದ ಅಕ್ಟೋಬರ್ ತಿಂಗಳ ತುಲಾ (ಸಂಕ್ರಮಣ) ಮಾಸದಲ್ಲಿ ಕಾವೇರಿ ಜಾತ್ರೆಯು ನಡೆಯಲಿದ್ದು ಜ್ಯೋತಿಷ್ಯ ಶಾಸ್ತçದ ರೀತಿ ನಿಶ್ಚಿತವಾದ ತುಲಾ ಮುಹೂರ್ತದಲ್ಲೇ ಕುಂಡಿಕೆಯಿAದ ತೀರ್ಥೋದ್ಭವವಾಗುವುದೇ ವಿಶೇಷ ಮುರ್ಹೂತ ಸಮಯವು ಸಮೀಪಿಸಿದಂತೆ ಅರ್ಚಕರು ಶ್ರೀ ಕಾವೇರಿ ಕುಂಡಿಕೆಯಲ್ಲಿ ಶ್ರೀ ಕಾವೇರಿ ಮಾತೆಗೆ ಮಂಗಳ ಘೋಷಗಳ ನಡುವೆ ಮಹಾ ಸಂಕಲ್ಪಪೂಜೆ,
ಸಹಸ್ರ ನಾಮಾರ್ಚನೆ, ಮಹಾಪೂಜೆ, ಮಂತ್ರೋಕ್ತವಾಗಿ ವಿಧಿ ಪೂರ್ವಕವಾಗಿ ಮಹಾಮಂಗಳಾರತಿ ಮಾಡುವ ಮೂಲಕ ಕೃಪಾಶೀರ್ವಾದವನ್ನು ಕೋರುತ್ತಾರೆ. ಆ ಹೊತ್ತಿಗಾಗಲೇ ತೀರ್ಥ ಕುಂಡಿಕೆಯಿAದ ಪವಿತ್ರ ಜಲವು ಮೇಲುಕ್ಕಿ ಬರುತ್ತದೆ.
ವಿಸ್ಮಯಕಾರಿ ಪವಿತ್ರ ತೀರ್ಥ ಕುಂಡಿಕೆ...
ಅರ್ಚಕರು ಜಲರೂಪಿಣಿ ಕಾವೇರಿಯ ಕುಂಡಿಕೆಗೆ ಆರತಿಯನ್ನು ಬೆಳಗಿ ಪುಣ್ಯ ತೀರ್ಥವನ್ನು ಕುಂಡಿಕೆಯಿAದ ತೆಗೆದು ನೆರೆದಿದ್ದ ಭಕ್ತಸಮೂಹದ ಮುಂದೆ ಎರಚುತ್ತಿದ್ದಂತೆ ಭಕ್ತಸಮೂಹ ಜೈ... ಜೈ... ಮಾತಾ... ಕಾವೇರಿ ಮಾತಾ... ಕಾವೇರಮ್ಮೆ ಉಕ್ಕಿಬಾ... ಭಕ್ತ ಜನಸಾಗರದ ಉದ್ಘೋಷಗಳ ನಡುವೆ ತೀರ್ಥೋದ್ಬವವನ್ನು ಕಣ್ತುಂಬಿಕೊಳ್ಳುತ್ತಾರೆ. ಕುಂಡಿಕೆಯಿAದ ಅದೆಷ್ಟೋ ತೀರ್ಥ ತೆಗೆದರೂ ಪವಿತ್ರ ಕುಂಡಿಕೆಯಲ್ಲಿ ತೀರ್ಥ ಕಡಿಮೆಯಾಗುವುದೇ ಇಲ್ಲ.
ತಲಕಾವೇರಿಯಲ್ಲಿ ತೀರ್ಥೋದ್ಭವ ಹಾಗೂ ಅಕ್ಷಯ ತೀರ್ಥ ಪ್ರತಿವರ್ಷ ಕಂಡುಬರುವ ದೈವಿಕ ಪವಾಡದ ವಿಸ್ಮಯಕಾರಿ ದೃಶ್ಯವೆಂದೇ ಹೇಳಲಾಗುತ್ತಿದೆ. ಇದರಲ್ಲಿ ಪ್ರಕೃತಿಯ ರಹಸ್ಯ ಅಡಗಿದೆ. ಸಾವಿರ ಕೊಡದಲ್ಲಿ ನೀರು ತೆಗೆದರೂ ಪುಟ್ಟ ಕುಂಡಿಕೆಯಲ್ಲಿ ತೀರ್ಥ ಬತ್ತುವುದೇ ಇಲ್ಲ.
ಕೆಲವು ವರ್ಷಗಳಿಂದ ಕೊಡವ ಜನಾಂಗದ ಹಾಡುಗಾರರು ದುಡಿಕೊಟ್ಟ್ ಹಾಡಿನೊಂದಿಗೆ ತಲಕಾವೇರಿಗೆ ಬಂದು ಕಾವೇರಿ ಮಾತೆಯ ಹಾಡನ್ನು ತೀರ್ಥೋದ್ಭವದವರೆಗೆ ಹಾಡಿದರೆ ಕೊಡವ ಯುವಕರ ತಂಡ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲದ ಕೂಡಲ ಸಂಗಮದಲ್ಲಿ ಮಿಂದು ಭಗಂಡೇಶ್ವರನ ಸನ್ನಿದಿಯಲ್ಲಿ ಪೂಜೆಸಲ್ಲಿಸಿ ದುಡಿಕೊಟ್ಟಿನ ಹಾಡಿನೊಂದಿಗೆ ಪಾದಯಾತ್ರೆಯ ಮೂಲಕ ತಲಕಾವೇರಿಗೆ ತಲುಪಿ ಪುಣ್ಯ ತೀರ್ಥವನ್ನು ವಿವಿಧೆಡೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲಿದ್ದಾರೆ.
ಕಾವೇರಿ ಜಾತ್ರೆಯಲ್ಲಿ ಸಾವಿರಗಟ್ಟಲೆ ಕೊಡವರ ಕುಲದೇವರೆಂದು ನಂಬಿರುವ ಹೆಚ್ಚಿನ ಕೊಡವರು, ಕೊಡಗಿನ ಮೂಲ ಜನಾಂಗ ಹಾಗೂ ಹೊರ ಜಿಲ್ಲೆಗಳ ಭಕ್ತಸಮೂಹ ಸೇರಿ ಕಾವೇರಿ ತೀರ್ಥಸ್ಥಾನ, ಪೂಜಾ ಸೇವೆಗಳನೆಲ್ಲ ಪೂರೈಸಿ ತೀರ್ಥವನ್ನು ಮನೆಗಳಿಗೆ ತರುತ್ತಾರೆ.
ಪುರಾಣದಲ್ಲಿ ಹೇಳುವಂತೆ ಯಾರು ಕಾವೇರಿಯ ಪರಮ ಪವಿತ್ರವಾದ ತೀರ್ಥದಲ್ಲಿ ಸ್ನಾನ ಮಾಡುವರೋ ಅವರ ಜನ್ಮಾಂತರ ಪಾಪಗಳೆಲ್ಲ ನಾಶವಾಗುವುದು. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ತೀರ್ಥೋದ್ಭವÀದ ಸಮಯದಲ್ಲಿ ತೀರ್ಥಸ್ನಾನ ಮಾಡುವುದರಿಂದ ಆಶ್ವಮೇಧಯಾಗ ಫಲವು ಹಾಗೂ ಕಾವೇರಿ ಜಲದಲ್ಲಿ ಒಂದು ತಿಂಗಳು ಎಡೆಬಿಡದೆ ಸ್ನಾನ ಪೂಜಾದಿ ಕೈಂಕರ್ಯವನ್ನು ಮಾಡುವುದರಿಂದಲೂ ಪುಣ್ಯಗಳಿಸುತ್ತಾರೆಂಬ ಪುರಾತನ ಕಾಲದ ನಂಬಿಕೆಯೂ ಇದೆ.
ತಲಕಾವೇರಿಗೆ ಹೋಗಲು ಸಾಧ್ಯವಾಗದವರು ಹರಿಶ್ಚಂದ್ರ, ಬಲಮುರಿ ಹಾಗೂ ಗುಹ್ಯ ಮೊದಲಾದ ಸ್ಥಳಗಳಿಗೆ ಹೋಗಿ ಕಾವೇರಿ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುವರು.
ಬೊತ್ತ್ ಚುಚ್ಚುವುದು..
ಕಾವೇರಿ ಸಂಕ್ರಮಣದ ದಿನದ ಮುಂಚಿತವಾಗಿ “ಬೊತ್ತ್” ಎಂಬ ಒಂದು ತರಹದ ವಿಶಿಷ್ಟ ರೀತಿಯ (ಪೊಂಗ) ಮರದ ದಂಟನ್ನು ತರಲು ಕಾಡಿಗೆ ಹೋಗಿ ತಮಗೆ ಬೇಕಾದಷ್ಟು ಬೊತ್ತ್ ಹಾಗೂ ಅದಕ್ಕೆ ಸಂಬAಧಿಸಿದ ಬಳ್ಳಿಯನ್ನು ತರುತ್ತಾರೆ. ಅದನ್ನು ಸಿದ್ಧಪಡಿಸಿ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವದಕ್ಕೆ ಮುಂಚಿತ ದಿನ ತಮ್ಮ ತಮ ಗದ್ದೆ, ಮನೆ, ಬಾವಿ, ದನದಕೊಟ್ಟಿಗೆ, ಹಟ್ಟಿ, ಕೆರೆಗಳಲ್ಲೆಲ್ಲ ಒಂದೊAದು ಬೊತ್ತನ್ನು ಚುಚ್ಚಿ ಅದಕ್ಕೆ ತೆಕ್ಕೆಯಂತೆ ಮಾಡಿದ ಬಳ್ಳಿಯನ್ನು ತುದಿಗೆ ಸಿಲುಕಿಸುತ್ತಾರೆ. ಕೆಲವೊಂದು ಕಡೆಗಳಲ್ಲಿ ಬಿದಿರನ್ನು ಒಡೆದ ಎರಡು ತುಂಡುಗಳನ್ನು ಕತ್ತರಿರೂಪದಲ್ಲಿ ನಿಲ್ಲಿಸಿ ಬಳ್ಳಿಗಳನ್ನು ಹಾಕಿದರೆ. ಕೆಲವೆಡೆ ಕಾಂಡಗಳನ್ನು ಚುಚ್ಚುವ ಕ್ರಮವಿದೆ ಹಾಗೂ ಮತ್ತೆ ಕೆಲವೆಡೆ ಬೊತ್ತನ್ನೇ ಚುಚ್ಚುವುದಿಲ್ಲ.
ಈ ಬೊತ್ತು ಚುಚ್ಚುವ ಬಗ್ಗೆ ಹಿರಿಯರು ಹೇಳುವ ಪ್ರಕಾರ ದ್ವಾಪರ ಯುಗದಲ್ಲಿ ಪಾಂಡವರು ವನವಾಸಕ್ಕೆ ಹೋಗುವ ಸಮಯದಲ್ಲಿ ಕಾವೇರಿ ಮಾತೆಗೆ ನೀಡಿದ ಜಾಗವನ್ನು ಕಾವೇರಿ ಸಂಕ್ರಮಣದ ಸಮಯದಲ್ಲಿ ಹಿಂದಿರುಗಿ ಬರುವಾಗ ವಾಪಾಸು ಕೇಳಿದರಂತೆ. ಆ ಸಮಯದಲ್ಲಿ ಕೊಡವರು ಜಾಗವನ್ನೆಲ್ಲ ಉಳುಮೆಮಾಡಿ ಬೊತ್ತುಚುಚ್ಚಿ ಜಾಗವನ್ನು ತಮ್ಮದಾಗಿಸಿಕೊಂಡಿದ್ದರ ಫಲವಾಗಿ ಬೊತ್ತ್ ಚುಚ್ಚುವ ಸಂಪ್ರದಾಯವಿದೆ ಎನ್ನುವರು. ಮತ್ತೆ ಕೆಲವರ ಪ್ರಕಾರ ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಗುರುತಿಗಾಗಿ ತಮ್ಮ ಕೈಗೆ ಸಿಕ್ಕ ಗಿಡಮರ ಬಳ್ಳಿಗಳನ್ನು ಚುಚ್ಚಿದರಂತೆ. ಅದೇ ಬೊತ್ತ್ ಎಂದೆನಿಸಿಕೊAಡಿತೆನ್ನುವರು. ಹಿಂದೊಮ್ಮೆ ಬೊತ್ತ್ತರಲು ಹೋದ ಕೆಲಸದವನ್ನು ಹುಲಿ ಹಿಡಿದುರಿಂದ ಆ ಊರಿನವರು ಬೊತ್ತಿನ ಬದಲಾಗಿ ಕಾಂಡವನ್ನು ಚುಚ್ಚುತ್ತಾರೆಂಬ ಬಗ್ಗೆ ಹೇಳಲಾಗುತ್ತಿದೆ.
ಕಣಿ ಪೂಜೊ..
ಉತ್ಸವದ ಮುಂಚಿತವಾಗಿ ಪತ್ತಾಯಕ್ಕೆ ಅಕ್ಕಿ ಹಾಕುವ ಸಂಪ್ರದಾಯ, ಅಜ್ಞಾ ಮೂಹೂರ್ತ ನೆರವೇರಲಿದ್ದು, ಅಕ್ಷಯಪಾತ್ರೆ ಇರಿಸುವುದು, ಭಂಡಾರ ತರುವ ಸಂಪ್ರದಾಯವಿದೆ. ತೀರ್ಥೋದ್ಭವವಾದ ಮಾರನೆಯ ದಿನ ಕಣಿಪೂಜೊ ಎಂಬ ಸಾಂಪ್ರದಾಯಿಕ ಕೈಂಕರ್ಯವಿದೆ.
ಬೆಳಿಗ್ಗೆ ಮನೆಯವರೆಲ್ಲ ಮನೆಯನ್ನು ಶುಭ್ರಗೊಳಿಸಿ ಸ್ನಾನ ಮಾಡಿ ಮನೆಯ ಮುತ್ತೆöÊದೆಯರು ನೆಲ್ಲಕ್ಕಿಬೊಳ್ಚ (ದೀಪ) ಬೆಳಗಿ ರೇಷ್ಮೆ ವಸ್ತçವನ್ನಿಟ್ಟು ಸೌತೆಕಾಯಿ ಅಥವ ತರಕಾರಿಯೊಂದಕ್ಕೆ ತಲೆಕಾಲು ಮಾಡಿ ಹೂವಿನಿಂದ ಶೃಂಗರಿಸಿ ಅದಕ್ಕೆ ಆಭರಣವನ್ನು ತೊಡಿಸಿ ಕಾವೇರಿ ಮಾತೆಯ ಪ್ರತೀಕವನ್ನು ಮಾಡಿ ಅದಕ್ಕೆ ಮೂರು ಎಲೆಮೂರು ಅಡಿಕೆಯನ್ನಿಟ್ಟು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟರೆ ಮತ್ತೆ ಕೆಲವರು ಮನೆಗಳಲ್ಲಿ ಕಾವೇರಿ ಮಾತೆಯ ಫೋಟೋಕ್ಕೆ ಹೂವನ್ನಿಟ್ಟು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಅಂದು ಬೆಳಿಗಿನ ಜಾವ ಬೊತ್ತ್ ಪುಟ್ಟ್ ಬೆಪ್ಪ ಪದ್ಧತಿಯಂತೆ ಮನೆಯ ಗಂಡಸರು ಕೊಡಿಬಾಳೆಲೆ(ಬಾಳೆಲೆಯ ತುದಿಭಾಗ)ಯಲ್ಲಿ ದೋಸೆಹಿಟ್ಟನ್ನು ಗದ್ದೆಯಲ್ಲಿಟ್ಟಂತ ಬೊತ್ತಿನ ಮೇಲೆ ಇಟ್ಟು ದೇವರನ್ನು ನೆನೆಯುವರು. ಆ ಸಮಯದಲ್ಲಿ ಆ ಮನೆಯ ಕಾರ್ಮಿಕವರ್ಗ ಇಟ್ಟಂತ ದೋಸೆ ಹಿಟ್ಟನ್ನು ಸೇವಿಸುವರು. ಅಂದು ಕುಟುಂಬದವರು ತಮ್ಮ ತಮ್ಮ ಕೈಮಡಕ್ಕೆ ತೆರಳಿ ಅಕ್ಕಿ ಹಾಕಿ ನಮಸ್ಕರಿಸಿ ಮನೆಗೆ ಬಂದು ಪೂಜಿಸಲ್ಪಟ್ಟ ಕಾವೇರಿ ಮಾತೆಗೂ ನೆಲ್ಲಕ್ಕಿದೀಪಕ್ಕೂ ಮನೆಯ ಮುಂದಿನ ಕನ್ನಿಕಂಬಕ್ಕೆ ಅಕ್ಕಿಹಾಕಿ ನಮಿಸಿ ಹಿರಿಯರ ಆರ್ಶೀವಾದ ಪಡೆಯುವ ಸಂಪ್ರದಾಯವಿದೆ.
ಈ ವರ್ಷ ಜೀವನದಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ಅ. ೧೭ ರಂದು ಮಕರ ಲಗ್ನದ ಶುಭ ಮುಹೂರ್ತ ಮಧ್ಯಾಹ್ನ ೧ ಗಂಟೆ ೪೪ ನಿಮಿಷಕ್ಕೆ ಕಾವೇರಿ ತುಲಾಸಂಕ್ರಮಣ ದಿನ ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಬಂದು ನಾಡಿನ ಸಮಸ್ತರಿಗೆ ಶಾಂತಿ, ಸೌಭಾಗ್ಯ ಹಾಗೂ ಸಮೃದ್ಧಿಯನ್ನು ನೀಡಲಿ.
- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ.