ಕಣಿವೆ, ಅ. ೧೪: ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಹಾಗೂ ಭೂಮಿಯಲ್ಲಿ ಸಮರ್ಪಕವಾದ ಬೆಳೆ ಇಲ್ಲದ ಕಾರಣ ನಷ್ಟದ ಮೇಲೆ ನಷ್ಟಕ್ಕೆ ಸಿಲುಕಿದ್ದ ಶುಂಠಿ ಬೆಳೆಗಾರರಿಗೆ ಈ ಬಾರಿಯ ದೀಪಾವಳಿ ಶುಕ್ರದೆಸೆ ನೀಡಿದೆ.
ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ದರ ದೊರಕುತ್ತಿರುವ ಹಿನ್ನೆಲೆಯಲ್ಲಿ ಬೆಳೆದ ಫಸಲಿಗೆ ರೋಗ ಬಾಧಿಸದಂತೆ ಸಾಕಷ್ಟು ಹಣ ವ್ಯಯಿಸಿ ರಾಸಾಯನಿಕ ಸಿಂಪಡಣೆ ಮಾಡಿ ಬಹಳಷ್ಟು ತಾಳ್ಮೆಯಿಂದ ಉಳಿಸಿಕೊಂಡಿದ್ದ ಕೆಲವೇ ಕೆಲವು ರೈತರಿಗೆ ಮಾತ್ರ ಶುಂಠಿ ಸಂತಸ ಹಾಗೂ ಸಂಭ್ರಮವನ್ನು ತಂದಿದೆ.
ಬಹಳಷ್ಟು ಮಂದಿ ಬೆಳೆಗಾರರು ಶುಂಠಿ ಬೆಳೆದ ಹೊಲದಲ್ಲಿಯೇ ವ್ಯಾಪಾರಿಗಳು ಖರೀದಿಸಿ ವಾಷಿಂಗ್‌ಗೆ ಒಳಪಡಿಸದೇ ನೇರವಾಗಿ ಚೀಲಕ್ಕೆ ತುಂಬಿ ಸಾಗಿಸುತ್ತಿರುವುದು ಕುಶಾಲನಗರ ತಾಲೂಕಿನ ಬಹುತೇಕ ಕಡೆ ಕಂಡು ಬರುತ್ತಿರುವ ಸಾಮಾನ್ಯ ಚಿತ್ರಣವಾಗಿದೆ.
೬೦ ಕೆಜಿ ತೂಕದ ಒಂದು ಚೀಲ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಇದೀಗ ೨೯೦೦ ಹಾಗೂ ೩೦೦೦ ರೂ ದೊರಕುತ್ತಿದೆ.
ಒಂದು ಎಕರೆ ಭೂಮಿಯಲ್ಲಿ ಸರಾಸರಿ ೨೫೦ ರಿಂದ ೩೦೦ ಚೀಲದಷ್ಟು ಫಸಲು ಬಂದರೆ ಎಕರೆಯೊಂದರಲ್ಲಿ ಕನಿಷ್ಟ ೯ ಲಕ್ಷ ಹಣ ಸಿಗುತ್ತಿದೆ. ಈ ಪೈಕಿ ಖರ್ಚು ಕಳೆದು ಬರೋಬ್ಬರಿ ೫ ಲಕ್ಷ ಹಣ ಉಳಿತಾಯವಾಗುತ್ತಿದೆ.
ಈಗ ಇರುವ ಶುಂಠಿಯ ದರ ದೀಪಾವಳಿ ಬಳಿಕ ಏರುಪೇರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಹಾಗಾಗಿ ಬೆಳೆಗಾರರು ಗಾಳಿ ಬಂದಾಗ ತೂರಿಕೋ ಎಂಬ ಗಾದೆ ಮಾತಿನಂತೆ ದೀಪಾವಳಿ ಒಳಗೆಯೇ ಶುಂಠಿ ಕಟಾವು ಮಾಡಿ ಈ ಬಾರಿಯ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲು ಒಳಗೊಳಗೆ ಯೋಜನೆ ರೂಪಿಸುತ್ತಿದ್ದಾರೆ.