ದಕ್ಷಿಣದ ಗಂಗೆ ಎಂದೇ ಕರೆಯಲ್ಪಡುವ ಕಾವೇರಿಯ ಉಗಮಸ್ಥಾನ ಕೊಡಗಿನ ತಲಕಾವೇರಿ.
ಕನ್ನಡ ನಾಡಿನ ಜೀವನದಿ ಎಂದು ಬಿಂಬಿತಳಾಗಿರುವ ಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉದ್ಬವಿಸಿ ಭಾಗಮಂಡಲ ತ್ರೀವೇಣಿ ಸಂಗಮದಲ್ಲಿ ಕನ್ನಿಕೆ ಹಾಗೂ ಗುಪ್ತಗಾಮಿನಿ ಸುಜ್ಯೋತಿ ಯನ್ನು ತನ್ನೊಡಳಲ್ಲಿ ಬರಸೆಳೆದು ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಸರಿಸಿ ತಮಿಳು ನಾಡಿನಾದ್ಯಂತ ಭೂರಮೆಯನ್ನು ತಣಿಸಿ ಪೂಂಪ್ ಹಾರ್ ಎಂಬ ಸ್ಥಳದಲ್ಲಿ ಬಂಗಾಳ ಕೊಲ್ಲಿ ಸಮುದ್ರದಲ್ಲಿ ವಿಲೀನಳಾಗುವ ಮೂಲಕ ತನ್ನ ಸಾರ್ಥಕತೆಯ ಪಯಣವನ್ನು ಕೊನೆಗಾಣಿಸುತ್ತಾಳೆ .ಕಾವೇರಿ ಹರಿಯುವ ದಂಡೆಯಲ್ಲಿ ನೂರಾರು ಪುಣ್ಯಕ್ಷೇತ್ರಗಳು ನೆಲೆ ನಿಂತಿವೆ. ಕೊಡಗಿನ ಕೊಡವರಿಗೆ ತಾಯಿ ಕಾವೇರಿ ಕುಲಮಾತೆಯಾದರೆ ಕೊಡಗಿನ ಜನತೆಗೆ ಕಾವೇರಿ ಆರಾಧ್ಯ ದೈವ. ವರ್ಷಕ್ಕೊಮ್ಮೆ ಅಕ್ಟೋಬರ್ ತಿಂಗಳಿನಲ್ಲಿ ತುಲಾ ಸಂಕ್ರಮಣದAದು ತಲಕಾವೇರಿಯ ಬ್ರಹ್ಮಕುಂಡಿಕೆ ಯಲ್ಲಿ ತಾಯಿ ಕಾವೇರಿ ತೀರ್ಥೋದ್ಭವದ ಮೂಲಕ ಭಕ್ತರಿಗೆ ದರ್ಶನ ನೀಡುವುದು ಪೌರಾಣಿಕ ಹಿನ್ನಲೆ. ಸಹಸ್ರಾರು ಭಕ್ತರು ಆ ಕ್ಷಣವನ್ನು ಕಣ್ತುಂಬಿಕೊAಡು ಕಾವೇರಿ ತೀರ್ಥವನ್ನು ಸಂಗ್ರಹಿಸಿ ಕಾವೇರಿ ಚಂಗ್ರಾದಿಯನ್ನು ಆಚರಿಸುತ್ತಾರೆ. ತುಲಾ ಸಂಕ್ರಮಣದ ದಿನದಂದು ಜರುಗುವ ತೀರ್ಥೊದ್ಭವದ ಕ್ಷಣಗಳನ್ನು ವೀಕ್ಷಣೆ ಮಾಡಲು ಬರುವ ಭಕ್ತರ ಸಂಖ್ಯೆ ಹಿಂದೆ ಅಷ್ಟೇನು ಇರಲಿಲ್ಲ. ದುರ್ಗಮ ಹಾದಿ, ಕಾಲ್ನಡಿಗೆಯಲ್ಲಿಯೇ ಕ್ರಮಿಸಬೇಕಾದ ಅನಿವಾರ್ಯ ಕಾರಣಗಳಿಂದ ಆ ದಿನಗಳಲ್ಲಿ ಐನೂರರಿಂದ ಸಾವಿರದವರೆಗೆ ಭಕ್ತರ ಸಂಖ್ಯೆ ಇರುತ್ತಿತ್ತು. ನಂತರ ತಲಕಾವೇರಿ ಅಭಿವೃದ್ಧಿ ಹೊಂದಿದ ಮೇಲೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿ ಸಹಸ್ರ, ಸಹಸ್ರ ಮಂದಿ ಭಕ್ತರು ತೀರ್ಥೋದ್ಭವ ದಿನದಂದು ಸೇರುತ್ತಾರೆ.
ತೀರ್ಥೊದ್ಭವದ ನಂತರದ ಒಂದು ತಿಂಗಳುಗಳ ಕಾಲ ಅಂದರೆ ಕಿರು ಸಂಕ್ರಮಣದವರೆಗೆ ಭಕ್ತರು ತಲಕಾವೇರಿಗೆ ಬಂದು ಪುಣ್ಯ ಸ್ಥಾನ ಮಾಡಿ ತೀರ್ಥ ಸಂಗ್ರಹಿಸಿ ಮನೆಗೆ ತೆರಳುವುದು ಪಾರಂಪರಿಕ ಸಂಪ್ರದಾಯ. ಸನ್ನಿಧಿಯಲ್ಲಿ ತೀರ್ಥ ಪ್ರಸಾದ ಹೊರತುಪಡಿಸಿ ದರೆ ಭೋಜನದ ವ್ಯವಸ್ಥೆ ಇರಲಿಲ್ಲ. ಕೆಲವರು ಮನೆಯಿಂದ ಬುತ್ತಿ ಕಟ್ಟಿಕೊಂಡು ತೀರ್ಥೊದ್ಭವದದಲ್ಲಿ ಪಾಲ್ಗೊಳ್ಳುತ್ತಿದ್ದರು. ತಮಿಳುನಾಡಿನ ಚೆಟ್ಟಿಯಾರ್ ಕುಟುಂಬ ಸಣ್ಣ ಪ್ರಮಾಣದಲ್ಲಿ ಉಪ್ಪಿಟ್ಟು ಸೇರಿದಂತೆ ಉಪಹಾರವನ್ನು ಪ್ರತಿವರ್ಷ ವಿತರಿಸುತ್ತಿತ್ತು.
ಬಾಲ್ಯದಿಂದಲೇ ಕಾವೇರಿ ತೀರ್ಥೊದ್ಭವದ ದಿನ ತಲಕಾವೇರಿಗೆ ಹೋಗಿ ಸೇವೆ ಮಾಡುತ್ತಿದ್ದ ಬೇಂಗ್‌ನಾಡ್ ಕೊಳಗದಾಳು ಗ್ರಾಮದ ಅಜ್ಜೀನಂಡ ತಮ್ಮು ಪೂವಯ್ಯ ಅವರು ತಲಕಾವೇರಿಯಲ್ಲಿ ಭಕ್ತರ ಸೇವೆಯನ್ನು ಗಮನಿಸುತ್ತಾ ಬಂದಿದ್ದರು. ಪ್ರತಿ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಿದರೆ ಹೇಗೆ ಎಂಬ ಪರಿಕಲ್ಪನೆ ಅವರ ಮಸ್ತಕದಲ್ಲಿ ಮೂಡಿದ ಪರಿಣಾಮ ತಾವು ಮತ್ತು ತಮ್ಮ ಆಪ್ತ ಬಳಗದ ಸದಸ್ಯರು ನಡೆಸುತ್ತಿದ್ದ ಕೊಡಗು ಏಕೀಕರಣ ರಂಗದ ಮೂಲಕ ನವೀನ ಪ್ರಯತ್ನಕ್ಕೆ ಚಾಲನೆ ನೀಡಿದರು. ೧೯೯೧ ರಲ್ಲಿ ದಾನಿಗಳಿಂದ ಧನದಾನ್ಯಗಳನ್ನು ಪಡೆದು ಇಪ್ಪತ್ತಕ್ಕೂ ಹೆಚ್ಚು ಸಂಗಡಿಗರಿAದ ತಲಕಾವೇರಿಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ಕೆ ನಾಂದಿ ಹಾಡಿದರು. ಆ ವರ್ಷ ಮೂರು ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ನಂತರ ನಡೆದಿದ್ದು ಇತಿಹಾಸ. ಪ್ರತಿವರ್ಷ ಕಾವೇರಿ ತೀರ್ಥೊದ್ಭವದ ದಿನದಿಂದ ಒಂದು ತಿಂಗಳಿನ ಕಾಲ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಪುಷ್ಕಳ ಭೋಜನವನ್ನು ತಮ್ಮ ಏಕೀಕರಣರಂಗ ನೀಡುತ್ತಾ ಬಂದಿದೆ. (೨೦೦೯ರವರೆಗೆ ತೀರ್ಥೊದ್ಭ ವದ ದಿನಕ್ಕೆ ಸೀಮಿತವಾಗಿದ್ದರೆ ೨೦೧೦ ರಿಂದ ಮೂವತ್ತು ದಿನಗಳವರೆಗೆ ವಿಸ್ತರಿಸಲಾಯಿತು). ಊಟ ಉಪಹಾರವೆಂದರೆ ಕೇವಲ ಅನ್ನ, ಸಾಂಬಾರ್ ಮಾತ್ರವಲ್ಲ, ಬೆಳಗ್ಗಿನ ಉಪಹಾರಕ್ಕೆ ಉಡುಪಿ ಹೊಟೇಲಿನ ತಿಂಡಿ ಪಟ್ಟಿ ಅಥವಾ ಹೊಟೇಲ್ ಮಾಣಿ ಆಕರ್ಷಕ ಶೈಲಿಯಲ್ಲಿ ವಟವಟ ವದರುವ ತಿಂಡಿಗಳ ಪಟ್ಟಿಯನ್ನೇ ನಾಚಿಸುವಂತೆ ವೈವಿಧ್ಯಮಯ ತಿಂಡಿಗಳನ್ನು ಸ್ವಯಂ ಸೇವಕರು ನಿಮಗೆ ಅಲ್ಲಿ ಉಣ ಬಡಿಸುತ್ತಾರೆ. ಶುಚಿ,ರುಚಿ, ಮತ್ತು ಶಿಸ್ತು ಯಾವುದೇ ಪಂಚತಾರ ಹೋಟೇಲಿಗೆ ಸೆಡ್ಡು ಹೊಡೆಯುವ ರೀತಿಯ ವಾತಾವರಣ ಅಲ್ಲಿ ಕಾಣಿಸುತ್ತದೆ. ಅಲ್ಲಿನ ಭೋಜನ ಮತ್ತು ಉಪಹಾರವನ್ನು ಸೇವಿಸದೆ ಯಾವುದೇ ಭಕ್ತರು ಬೆಟ್ಟ ಇಳಿಯುವುದಿಲ್ಲ. ಅಷ್ಟೊಂದು ವ್ಯವಸ್ಥಿತ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕೊಡಗು ಏಕೀಕರಣ ರಂಗದ ಸದಸ್ಯರು ನಿಭಾಯಿಸುತ್ತಾರೆ. ಕಳೆದ ವರ್ಷ ಒಟ್ಟು ೧ ಲಕ್ಷದ ೬೫ ಸಾವಿರಕ್ಕೂ ಅಧಿಕ ಭಕ್ತರು ಭೋಜನ ಸವಿದಿದ್ದರೆ ೪೮ ಸಾವಿರ ಮೀರಿದ ಭಕ್ತರು ಉಪಹಾರ ಸೇವಿಸಿದ್ದರು ಅಂದರೆ ಕೊಡಗು ಏಕೀಕರಣದ ರಂಗದ ಕಾಯಕದ ಮಹತ್ವದ ಅರಿವಾಗುತ್ತದೆ. ತುಲಾ ಸಂಕ್ರಮಣಕ್ಕೆ ವಾರ ಮುಂಚಿತವಾಗಿ ಕೊಡಗಿನ ಕನ್ನಡ ದಿನಪತ್ರಿಕೆಯಾದ “ಶಕ್ತಿ'' ಮತ್ತು ಕೊಡವ ವಾರಪತ್ರಿಕೆ ಬ್ರಹ್ಮಗಿರಿಯಲ್ಲಿ ಒಂದು ಜಾಹೀರಾತು ನೀಡಿ ಅಕ್ಕಿ, ತೆಂಗಿನಕಾಯಿ, ತರಕಾರಿ ಮತ್ತು ಧನ ಸಹಾಯ ಮಾಡುವವರು ಸಂಪರ್ಕಿಸಿ ಎಂದು ಆಯಾ ಪ್ರದೇಶಗಳ ಸ್ವಯಂ ಸೇವಕರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕೋರುತ್ತಾರೆ.
(ಕಳೆದ ಮೂರು ದಶಕಗಳ ಕಾಲದಿಂದ ಈ ಎರಡೂ ಪತ್ರಿಕೆಯವರು ಉಚಿತವಾಗಿ ಜಾಹೀರಾತು ನೀಡುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ)
ಅದೇನು ದೈವಾನುಗ್ರಹವೋ ಅಥವಾ ಭಕ್ತರ ಹಾರೈಕೆಯೋ ಎಂದೂ ಬರಿದಾಗಲಿಲ್ಲ ಕೊಡಗು ಏಕೀಕರಣ ರಂಗದ ಅಕ್ಷಯ ಪಾತ್ರೆ.
ಯಾವುದೇ ಸಂಘ ಸಂಸ್ಥೆಗಳ ದೇಣಿಗೆ ಇಲ್ಲದೆ, ಸರ್ಕಾರದ ಅನುದಾನ ವಿಲ್ಲದೆ ಭಕ್ತರು ನೀಡುವ ಸಹಾಯದಿಂದಲೇ ಸುಮಾರು ೨೦ ಲಕ್ಷ ರೂಗಳಿಗೂ ಮೀರಿದ ವೆಚ್ಚದಲ್ಲಿ ಕಾವೇರಿ ಸನ್ನಿಧಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಫಲಾನುಫೇಕ್ಷೆಯಿಲ್ಲದೆ, ಪ್ರತಿವರ್ಷ ತಿಂಗಳುಗಳ ಕಾಲ ಅನ್ನಸಂತರ್ಪಣೆ ನಡೆಸಿಕೊಂಡು ಬರುತ್ತಿರುವ ಕೊಡಗು ಏಕೀಕರಣ ರಂಗದ ಸತ್ಕಾರ್ಯಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.
ಭಕ್ತರ ಉದರ ಕ್ಷುಧೆಯನ್ನು ತಣಿಸಲು ಮೂವತ್ತು ದಿನಗಳ ಕಾಲ ರಂಗದ ಬಳಗದವರು ಅವಿರತ ಶ್ರಮ ವಹಿಸುತ್ತಾರೆ. ವೇಳಾಪಟ್ಟಿಯಂತೆ ಆಯಾ ದಿನಗಳ ಸೇವೆಗೆ ತಾವುಗಳೇ ನಿಯೋಜನೆ ಮಾಡಿಕೊಳ್ಳುತ್ತಾರೆ. ಪ್ರಸ್ತುತದ ವರ್ಷಗಳಲ್ಲಿ ಈ ಸೇವಾ ಕಾರ್ಯಕ್ಕೆ ಇತರ ಭಕ್ತಾದಿಗಳೂ ಕೈಜೋಡಿಸುತ್ತಾ ಬರುತ್ತಿದ್ದಾರೆ.ಅಲ್ಲಿಯೇ ತಂಗಿ ಕಾಯಕವನ್ನು ಕಠಿಣ ವೃತವಾಗಿ ಸ್ವೀಕರಿಸಿ ಸೇವೆ ಮಾಡುತ್ತಿರುವ ತಂಡದ ಸರ್ವ ಸದಸ್ಯರಿಗೆ ತಾಯಿ ಕಾವೇರಿ ಆಯಸ್ಸು ಮತ್ತು ಆರೋಗ್ಯ ಕರುಣಿಸಲಿ.
-ತೆನ್ನಿರ ಮೈನಾ., ಅಧ್ಯಕ್ಷರು
ರಾಜೀವ್ ಗಾಂಧಿ
ಪಂಚಾಯತ್ ರಾಜ್ ಸಂಘಟನೆ.