ಸೋಮವಾರಪೇಟೆ,ಅ.೧೪: ನಿನ್ನೆ ತಡರಾತ್ರಿ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ ಸಂದರ್ಭ ವಾಹನ ನಿಯಂತ್ರಣ ತಪ್ಪಿ ಗಾಯಗೊಂಡ ಗೋವಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಆಗ್ರಹಿಸಿದ್ದಾರೆ. ಇಲ್ಲಿನ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿರುವ ಗೋವಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ, ವೈದ್ಯರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಗಾಯಗೊಂಡಿರುವ ಗೋವಿಗೆ ಸ್ಥಳೀಯವಾಗಿ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳನ್ನು, ಔಷಧಿಗಳನ್ನು ನೀಡಲಾಗಿದೆ. ಆದರೆ ಜಾನುವಾರಿನ ಹಿಂಭಾಗದ ಕಾಲಿಗೆ ತೀವ್ರ ಪೆಟ್ಟಾಗಿರುವುದರಿಂದ ಅದು ಮೇಲೇಳುತ್ತಿಲ್ಲ ಎಂದು ವೈದ್ಯರು ತಿಳಿಸಿದರು.

ಸ್ಥಳೀಯವಾಗಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆಗಳು ಇಲ್ಲದೇ ಇರುವುದರಿಂದ ಹಾಸನಕ್ಕೆ ಸಾಗಿಸಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುತ್ತಿದೆ. ಈ ಸಂಬAಧಿತ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದು, ತಾ. ೧೫ರಂದು ಗಾಯಗೊಂಡಿರುವ ಗೋವನ್ನು ಹಾಸನಕ್ಕೆ ಕಳುಹಿಸಲು ಸಿದ್ಧತೆ ಕೈಗೊಳ್ಳಲಾಗಿದೆ.