ಗೋಣಿಕೊಪ್ಪ, ಅ. ೧೪: ಜಾತಿ, ಧರ್ಮ ರಾಜಕೀಯ ನುಸುಳದಂತೆ ಸೇವೆಯ ಮನೋಭಾವವನ್ನು ವಿಸ್ತರಿಸಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಕರೆ ನೀಡಿದರು.
ಇಲ್ಲಿನ ಖಾಸಗಿ ಸಭಾಂಗಣದಲ್ಲಿ ಪೊನ್ನಂಪೇಟೆ ರೆಡ್‌ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳ ಸಮಾಲೋಚನ ಸಭೆಯಲ್ಲಿ ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಸೇವೆ ಮಾಡುವುದೇ ಒಂದು ಹೆಮ್ಮೆಯ ವಿಚಾರ. ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಸಂಸ್ಥೆಯ ಸೇವೆಗಾಗಿ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಪಡೆದುಕೊಂಡ ಹೆಗ್ಗಳಿಕೆಯು ಇದೆ. ಇಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದೇ ಜೀವನದ ಉತ್ತಮ ನಡೆ ಎಂದು ಹೇಳಿದರು.
ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಆರೋಗ್ಯ ದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಸ್ಥೆಯ ಸದಸ್ಯರುಗಳು ಕಾರ್ಯನಿರ್ವಹಿಸಬೇಕು.
ರಕ್ತದಾನದಂತಹ ಮಹತ್ವ ಕಾರ್ಯಗಳನ್ನ ಮುನ್ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಯುವಕರಲ್ಲಿ ಸಂಸ್ಥೆಯ ಸೇವೆಗಳನ್ನು ಮನದಟ್ಟು ಮಾಡಿಕೊಡುವ ಮೂಲಕ ಸಂಸ್ಥೆಯ ಸದಸ್ಯತ್ವವನ್ನು ವಿಸ್ತಾರಗೊಳಿಸಿ ಜನಸಾಮಾನ್ಯರಿಗೆ ವ್ಯವಸ್ಥಿತ ಸೇವೆಯನ್ನು ಒದಗಿಸಲು ಕಟ್ಟಿ ಬದ್ಧರಾಗಬೇಕು ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ತಾಲೂಕಿನಲ್ಲಿ ರಕ್ತನಿಧಿ ಘಟಕ ಸ್ಥಾಪಿಸಲು ಸರ್ಕಾರದಿಂದ ನಿವೇಶನ ಒದಗಿಸಿಕೊಡುವ ವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ಪೊನ್ನಂಪೇಟೆ ತಾಲೂಕು ಸಭಾಪತಿ ಬಿ.ಎನ್. ಪ್ರಕಾಶ್ ನೇತೃತ್ವದ ತಂಡ ಸಲ್ಲಿಸಿದ ಮನವಿಗೆ ಪೂರಕವಾಗಿ ಸ್ಪಂದನಾತ್ಮಕ ನುಡಿಗಳನ್ನಾಡಿದ ಅವರು, ರಾಜ್ಯ ಸಂಸ್ಥೆಯಿAದ ಒದಗಿಸಿಕೊಡುವ ಎಲ್ಲ ಸೌಕರ್ಯಗಳನ್ನು ಮತ್ತು ನಿವೇಶನಕ್ಕೆ ಬೇಕಾದ ವ್ಯವಸ್ಥೆಗಳನ್ನ ಸರ್ಕಾರದ ಮೂಲಕ ನೀಡಲು ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದರು. ನಂತರ ಲೋಪಮುದ್ರಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿ ಅಮೃತ ನಾಣಯ್ಯ ಅವರೊಂದಿಗೆ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ರಕ್ತನಿಧಿ ಘಟಕ ಸ್ಥಾಪನೆಯ ಬಗ್ಗೆ ಚರ್ಚೆ ನಡೆಸಿದರು.
ತಾಲೂಕು ಉಪ ಸಭಾಪತಿ ಪಾರುವಂಗಡ ದಿಲನ್ ಚಂಗಪ್ಪ, ಕಾರ್ಯದರ್ಶಿ ಚಂದನ್ ಕಾಮತ್, ಕೋಶಾಧಿಕಾರಿ ರಾಜಶೇಖರ್, ಪದಾಧಿಕಾರಿಗಳಾದ ವಿಜಯನ್, ಪ್ರಮೋದ್ ಕಾಮತ್, ಸಂಜೀವ್, ಗಣೇಶ್ ರೈ, ನಾಯಂದಿರ ಶಿವಾಜಿ, ಜಗದೀಶ್ ಜೋಡುಬೀಟಿ, ಸತೀಶ್ ಸಿಂಗಿ, ಸೋಮಯ್ಯ, ಚೇತನ್, ಚೈತ್ರಾ ಚೇತನ್, ಶರತ್‌ಕಾಂತ್, ಸಪ್ತೇಶ್, ಆಂಟೋನಿ, ರವಿ ಸೇರಿದಂತೆ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.