ಮಡಿಕೇರಿ, ಅ. ೧೩: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಕುಟುಂಬದವರಿಗೆ ವಸತಿ ಹಾಗೂ ಜಾಗ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸಂಸ ವಿಭಾಗೀಯ ಸಂಚಾಲಕ ಎಸ್. ವೀರಭದ್ರಯ್ಯ; ಲೈನ್ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳು ವಸತಿ ಹಾಗೂ ಭೂರಹಿತರಾಗಿರುತ್ತಾರೆ. ಈ ಕುಟುಂಬಗಳಿಗೆ ವಸತಿ ಹೊಂದಿಕೊಳ್ಳಲು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಪೈಸಾರಿ ಜಾಗವನ್ನು ಗುರುತಿಸಿ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಹೆಸರಿನಲ್ಲಿರುತ್ತದೆ. ಅದರಲ್ಲೂ ಪೊನ್ನಂಪೇಟೆ ತಾಲೂಕಿನಲ್ಲಿ ಕಾಯ್ದಿರಿಸಲಾದ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಈ ಜಾಗದಲ್ಲಿ ಫಲಾನುಭವಿಗಳು ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಅವರುಗಳನ್ನು ಅಲ್ಲಿಂದ ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಉದ್ದೇಶಿತ ಜಾಗವನ್ನು ಖಾಸಗಿಯವರಿಗೆ ಬಡಾವಣೆ ನಿರ್ಮಾಣ ಮಾಡಲು ಬಿಟ್ಟುಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವಿಚಾರದ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಆದರೆ, ಈಗಿನ ಸರಕಾರ ಪರಿಶಿಷ್ಟರಿಗೆ ಅನ್ಯಾಯ ಮಾಡಿದೆ. ಭೂಮಿ ಲಭ್ಯವಿದ್ದರೂ ಇದುವರೆಗೆ ವಸತಿ ನೀಡಿಲ್ಲ. ಅಧಿಕಾರಿಗಳು ಮತ್ತೆ ಲೈನ್ಮನೆಗಳಿಗೆ ಹೋಗುವಂತೆ ಒತ್ತಾಯ ಹೇರುತ್ತಿದ್ದಾರೆ. ಕೂಡಲೇ ಸರಕಾರ ವಸತಿ ಹಾಗೂ ಭೂರಹಿತರಿಗೆ ಭೂಮಿ ಹಂಚಿಕೆ ಮಾಡಬೇಕು, ಪರಿಶಿಷ್ಟರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವ ತಹಶೀಲ್ದಾರ್ ಹಾಗೂ ಪರಿಶಿಷ್ಟ ಕಲ್ಯಾಣ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು. ಇನ್ನು ಮುಂದಕ್ಕೆ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದಲ್ಲಿ ಸಮಿತಿ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವದೆಂದು ಹೇಳಿದರು.
ಬಡವರಿಗೆ ಅನ್ಯಾಯ
ಪೊನ್ನಂಪೇಟೆ ತಾಲೂಕು ಸಂಚಾಲಕ ಹೆಚ್.ಆರ್. ಜಗದೀಶ್ ಮಾತನಾಡಿ; ಕುರ್ಚಿ ಗ್ರಾಮದಲ್ಲಿ ಐದು ಎಕರೆ ಜಾಗವನ್ನು ಹೋರಾಟದ ಮೂಲಕ ಗುರುತಿಸಲಾಗಿದ್ದು, ಅಲ್ಲಿ ೮೨ ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಗುಡಿಸಲು ತೆರವುಗೊಳಿಸಲು ಕಿರುಕುಳ ನೀಡುತ್ತಿದ್ದಾರೆ. ಪೊನ್ನಂಪೇಟೆ ಬಳಿಯ ಮತ್ತೂರುವಿನ ಗುಂಡತ್ಕೊಲ್ಲಿಯಲ್ಲಿ ೩.೩೦ ಎಕರೆ ಜಾಗದಲ್ಲಿ ಕಳೆದ ೪೦ ವರ್ಷಗಳಿಂದ ೨೦ ಕುಟುಂಬಗಳು ಗುಡಿಸಿಲಿನಲ್ಲಿಯೇ ವಾಸಿಸುತ್ತಿದ್ದಾರೆ. ಈ ಜಾಗದ ದಾಖಲೆಗಳನ್ನು ಸಂಬAಧಿಸಿದ ಅಧಿಕಾರಿಗಳಿಗೆ ನೀಡಲಾಗಿದ್ದರೂ ಇದೀಗ ಅಧಿಕಾರಿಗಳು ಈ ಜಾಗವನ್ನು ಖಾಸಗಿಯವರು ಮಂಜೂರು ಮಾಡಲು ಹವಣಿಸುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಖಾಸಗಿಯವರ ಸರಕಾರಿ ಜಾಗಕ್ಕೆ ಬೇಲಿ ಕೂಡ ಹಾಕಿದ್ದಾರೆ. ಇದನ್ನು ತೆರವುಗೊಳಿಸಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಅಧಿಕಾರಿಗಳು ಬಡವರಿಗೆ ತೊಂದರೆ ಕೊಟ್ಟರೆ ಜಿಲ್ಲಾದ್ಯಂತ ಪರಿಶಿಷ್ಟರನ್ನು ಸಂಘಟಿಸಿ ಹೋರಾಟ ಮಾಡುವದಾಗಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಂಘಟನಾ ಸಂಚಾಲಕ ಹೆಚ್.ಕೆ. ಗಣೇಶ್, ಪದಾಧಿಕಾರಿಗಳಾದ ವೈ.ಕೆ. ರವಿ, ಪಿ.ಕೆ. ಮಣಿ ಇದ್ದರು.