ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮನವಿ
ಮಡಿಕೇರಿ, ಅ. ೭: ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಮಿತಿ ಸದಸ್ಯರಾದ ಎಚ್.ಎಸ್. ಮುತ್ತಪ್ಪ, ಜಾಯ್ಸ್ ಮೆನೇಜಸ್, ಪಿ.ಪಿ. ಸುಕುಮಾರ, ಜೆ.ಎಲ್. ಜನಾರ್ಧನ, ಇತರರು ಸಭೆಯಲ್ಲಿ ಹಲವು ಮಾಹಿತಿ ನೀಡಿದರು. ಮುತ್ತಪ್ಪ ಅವರು ಮಾತನಾಡಿ, ಗರಗಂದೂರು ಬಳಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೊಳವೆ ಬಾವಿ ಕೊರೆಸುವಂತಾಗಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಾ.ಪಂ. ಇ.ಒ. ಅವರು ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದರು. ಮಡಿಕೇರಿ ನಗರದಲ್ಲಿ ಇದುವರೆಗೆ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಆಗಿಲ್ಲ. ಈ ಬಗ್ಗೆ ತಕ್ಷಣವೇ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಈ ಸಂಬAಧ ಜಾಗ ಗುರುತಿಸಲಾಗಿದ್ದು, ನಗರಸಭೆ ಪೌರಾಯುಕ್ತರ ಗಮನ ಸೆಳೆಯುವಂತೆ ಸಲಹೆ ಮಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಹಲವು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ. ಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ಐ.ಟಿ.ಡಿ.ಪಿ. ಇಲಾಖೆ ಅಧಿಕಾರಿ ಎಸ್. ಹೊನ್ನೇಗೌಡ, ಪೌರಾಯುಕ್ತ ಹೆಚ್.ಆರ್. ರಮೇಶ್, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ನಾಚಪ್ಪ, ಗಿರೀಶ್, ತಾ.ಪಂ. ಇಒಗಳಾದ ಪರಮೇಶ್, ಅಪ್ಪಣ್ಣ, ತಹಶೀಲ್ದಾರರಾದ ಕಿರಣ್ ಗೌರಯ್ಯ ಇತರರು ಇದ್ದರು.