ಬೆಂಗಳೂರು, ಅ. ೭: ಜಾತಿ ಗಣತಿ ದಿನಾಂಕ ವಿಸ್ತರಣೆಯಾದ ಹಿನ್ನೆಲೆ ಕರ್ನಾಟಕ ಸರ್ಕಾರವು ಶಾಲೆಗಳ ದಸರಾ ರಜೆಯನ್ನು ವಿಸ್ತರಣೆ ಮಾಡಿದೆ. ಈ ಮೂಲಕ ಅಕ್ಟೋಬರ್ ೭ಕ್ಕೆ ಮುಕ್ತಾಯವಾಗಬೇಕಿದ್ದ ರಜೆ ಅಕ್ಟೋಬರ್ ೧೮ ರವರೆಗೂ ವಿಸ್ತರಣೆಯಾಗಿದೆ. ಇನ್ನು ಶಾಲೆಗಳು ಪುನರಾರಂಭವಾಗುವುದು ಅಕ್ಟೋಬರ್ ೨೩ಕ್ಕೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಜಾತಿ ಗಣತಿ ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ಕೈಗೊಂಡಿದ್ದಾರೆ. ನಿಗದಿತ ಕಾಲಾವಧಿಯಲ್ಲಿ ಜಾತಿ ಗಣತಿ ಕಾರ್ಯ ಪೂರ್ಣಗೊಂಡಿಲ್ಲ. ಗಣತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ದಸರಾ ರಜೆಯನ್ನು ವಿಸ್ತರಣೆ ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ ೧೦ ದಿನಗಳ ಕಾಲಾವಕಾಶ ಕೇಳಿ ಮನವಿ ಮಾಡಿದ್ದಾರೆ. ಈ ಮನವಿ ಪುರಸ್ಕರಿಸಿ ೮ ಕರ್ತವ್ಯದ ದಿನಗಳ ರಜೆ ಘೋಷಿಸಲಾಗಿದೆ. ಜೊತೆಗೆ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ ತರಗತಿಯನ್ನು ನಡೆಸಿ ಸರಿದೂಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಿ.ಯು. ಉಪನ್ಯಾಸಕರಿಗೆ ವಿನಾಯಿತಿ
ಅಕ್ಟೋಬರ್ ೧೨ ರಿಂದ ದ್ವಿತೀಯ ಪಿ.ಯು. ಮಧ್ಯಂತರ ಪರೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆ ಕಾರ್ಯದಿಂದ ಪಿ.ಯು.ಸಿ. ಉಪನ್ಯಾಸಕರಿಗೆ ವಿನಾಯಿತಿ ನೀಡಲಾಗಿದೆ ಎಂದರು.
೧.೨ ಲಕ್ಷ ಶಿಕ್ಷಕರು ಸಮೀಕ್ಷೆಯಲ್ಲಿ
ಸೆಪ್ಟೆಂಬರ್ ೨ ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ. ಸಮೀಕ್ಷೆ ಇವತ್ತು ಮುಗಿಯಬೇಕಿತ್ತು. ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿಲ್ಲ. ಕೊಪ್ಪಳ ಶೇ. ೯೭ ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. ೬೭ ರಷ್ಟು ಆಗಿದೆ. ಹೀಗೆ ವ್ಯತ್ಯಾಸಗಳಿವೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚಿಸಿದೆ. ೧ ಲಕ್ಷ ೨೦ ಸಾವಿರ ಶಿಕ್ಷಕರು ಸೇರಿ ಒಂದು ಲಕ್ಷ ಅರವತ್ತು ಸಾವಿರ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ದೀಪಾವಳಿ ಹಬ್ಬದೊಳಗೆ ಪೂರ್ಣಕ್ಕೆ ಸೂಚನೆ
ಬೆಂಗಳೂರು ನಗರದಲ್ಲಿ ೬೭೦೦ ಜನ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ೪೬ ಲಕ್ಷ ಮನೆಗಳಿವೆ. ದಿನಕ್ಕೆ ೧೦ -೧೫ ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಬೆಂಗಳೂರಿನಲ್ಲಿ ನರಕ ಚರ್ತುದರ್ಶಿ ಒಳಗೆ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ. ಶಿಕ್ಷಕರು ಕೂಡ ಇಷ್ಟರೊಳಗೆ ಸಮೀಕ್ಷೆ ಮುಗಿಸುವ ಭರವಸೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.
ಮೃತ ಶಿಕ್ಷಕರಿಗೆ ರೂ. ೨೦ ಲಕ್ಷ ಪರಿಹಾರ
ಸಮೀಕ್ಷೆ ನಡೆಯುವಾಗ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ ರೂ. ೨೦ ಲಕ್ಷ ಪರಿಹಾರ ನೀಡಲಾಗುವುದು ಎಂದರು. ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದ, ಹಿಂದೇಟು ಹಾಕುವವರ ವಿರುದ್ಧ ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಗ್ರೇಟರ್ ಬೆಂಗಳೂರು ಏರಿಯಾದಲ್ಲಿ ತಡವಾಗಿ ಸಮೀಕ್ಷೆ ಶುರುವಾಗಿದೆ. ಚುನಾವಣಾ ಆಯೋಗದ ಕೆಲಸ ಮತ್ತು ಇತರ ತರಬೇತಿ ಇದ್ದಿದ್ದರಿಂದ ತಡವಾಗಿ ಶುರುವಾಗಿದೆ. ಗ್ರೇಟರ್ ಬೆಂಗಳೂರು ಏರಿಯಾದಲ್ಲಿ ಸಮೀಕ್ಷೆ ಪ್ರಮಾಣ ಕಡಿಮೆ ಇದೆ ಎಂದು ಸಿಎಂ ಮಾಹಿತಿ ನೀಡಿದರು.
ದೀಪಾವಳಿ ಹಬ್ಬದ ಬಳಿಕವೇ
ಶಾಲೆ ಪುನರಾರಂಭ
ಕರ್ನಾಟಕದಲ್ಲಿ ದಸರಾ ರಜೆಯು ಸೆಪ್ಟೆಂಬರ್ ೨೨ ರಂದು ಆರಂಭವಾಗಿತ್ತು. ಅಕ್ಟೋಬರ್ ೭ಕ್ಕೆ ಮುಕ್ತಾಯವಾಗಬೇಕಿತ್ತು. ಸದ್ಯ ಸರ್ಕಾರ ಅಕ್ಟೋಬರ್ ೧೮ ರವರೆಗೂ ರಜೆ ೪ಐದನೇ ಪುಟಕ್ಕೆ ವಿಸ್ತರಣೆ ಮಾಡಿದೆ. ಅಕ್ಟೋಬರ್ ೧೯ ಭಾನುವಾರವಾಗಿದ್ದು, ಅಕ್ಟೋಬರ್ ೨೦ ಹಾಗೂ ೨೨ಕ್ಕೆ ದೀಪಾವಳಿ ರಜೆ ಇರುವುದರಿಂದ ಶಾಲೆಗಳು ಬಹುತೇಕ ಹಬ್ಬಗಳು ಮುಗಿದ ಬಳಿಕವೇ ಆರಂಭವಾಗಲಿವೆ.
ಖಾಸಗಿ ಶಾಲಾ ಮಕ್ಕಳಿಗೆ ಎಂದಿನAತೆ ಶಾಲೆ
ದಸರಾ ರಜೆ ವಿಸ್ತರಣೆಯು ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದ್ದು, ಖಾಸಗಿ ಶಾಲೆಗಳು ಆಯಾ ಸಂಸ್ಥೆಗಳ ಸೂಚನೆಯಂತೆ ನಡೆಯಲಿವೆ.