ಮಡಿಕೇರಿ, ಅ. ೪: ಸಾಹಿತ್ಯದಲ್ಲಿ ಮುಂದೆ ಮಾಡಬೇಕಾಗಿರುವ ಕೆಲಸಗಳೇ ನನಗೆ ಮುಖ್ಯ ಹೊರತು, ಮೈಸೂರು ದಸರಾ ಉದ್ಘಾಟನೆಗಾಗಿ ಯಾರನ್ನು ಆಹ್ವಾನಿಸಿದ್ದಾರೆ, ಯಾರನ್ನು ಆಹ್ವಾನಿಸಿಲ್ಲ ಎಂಬ ಬಗ್ಗೆ ಯೋಚಿಸಲು ಹೋಗುವುದಿಲ್ಲ ಎಂದು ಬೂಕರ್ ಪ್ರಶಸ್ತಿ ವಿಜೇತೆ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರಕಲಗೂಡಿನಲ್ಲಿ ವಿಜಯ ದಶಮಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ದೀಪಾಭಾಸ್ತಿ, ಅಂತರರಾಷ್ಟಿçÃಯ ಮಟ್ಟದಲ್ಲಿ ಕನ್ನಡದ ಲೇಖಕಿಯರನ್ನು ಗುರುತಿಸುವಂತೆ ಮಾಡಿದ ಬೂಕರ್ ಪ್ರಶಸ್ತಿ ಲಭಿಸಿರುವುದು ಕರ್ನಾಟಕ ಮತ್ತು ಭಾರತವೇ ಹೆಮ್ಮೆ ಪಡುವಂತಹ ವಿಚಾರ. ಬೂಕರ್ ಪ್ರಶಸ್ತಿ ಮೊದಲ ಸಲ ಅನುವಾದಿತÀ ಕೃತಿಗಾಗಿ ಲಭಿಸಿರುವುದು ಅನುವಾದಿತ ಲೇಖಕಿಯಾಗಿ ನನಗೆ ಸಮಾಧಾನ ತಂದಿದೆ. ಮೈಸೂರು ದಸರಾ ಉದ್ಘಾಟನೆಗೆ ಬಾನುಮುಸ್ತಾಕ್ ಅವರನ್ನು ಆಹ್ವಾನಿಸಿದ್ದು ಕರ್ನಾಟಕ ಸರ್ಕಾರ. ಅದನ್ನು ವೈಯಕ್ತಿಕ ರೀತಿಯಲ್ಲಿ ಚರ್ಚಿಸಲು ಹೋಗುವುದಿಲ್ಲ. ಅಂತಹ ಆಸಕ್ತಿಯೂ ನನಗಿಲ್ಲ ಎಂದರು.

ಒAದೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ನಮ್ಮೆಲ್ಲರ ನಂತರವೂ ಉಳಿಯುತ್ತದೆ. ನಾವಿರುವುದು ಕನ್ನಡಕ್ಕಾಗಿಯೇ ವಿನಹ ನಮ್ಮಿಂದ ಕನ್ನಡ ಖಂಡಿತಾ ಅಲ್ಲ. ನಾನು ಕೆಲಸ ಮಾಡುವುದೂ ಕನ್ನಡಕ್ಕಾಗಿಯೇ ಎಂದು ದೀಪಾಭಾಸ್ತಿ ನುಡಿದರು.

ಕಾರ್ಯಕ್ರಮದ ಆಯೋಜಕರಾದ ಶಾಸಕ ಎ. ಮಂಜು ಮಾತನಾಡಿ, ಕೊಡಗಿನ ಲೇಖಕಿ ದೀಪಾಭಾಸ್ತಿ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಲೋಕದ ಶಕ್ತಿ ಏನೆಂಬುದನ್ನು ವಿಶ್ವಕ್ಕೇ ಪರಿಚಯಿಸಿದ್ದಾರೆ ಎಂದರು.

ಅರಕಲಗೂಡಿನ ದಸರಾ ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜು ಅವರು ದೀಪಾಭಾಸ್ತಿ ಅವರನ್ನು ತಾಲೂಕಿನ ಜನತೆಯ ಪರವಾಗಿ ಸನ್ಮಾನಿಸಿ ಗೌರವಿಸಿದರು. ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ, ತಹಶೀಲ್ದಾರ್ ಕೆ.ಸಿ. ಸೌಮ್ಯ ಪಾಲ್ಗೊಂಡಿದ್ದರು. ಅರಕಲಗೂಡಿನ ಮುಖ್ಯರಸ್ತೆಯಲ್ಲಿ ದೀಪಾಭಾಸ್ತಿ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ದೀಪಾ ಅವರ ಪತಿ ಚೆಟ್ಟೀರ ಸುಜನ್ ನಾಣಯ್ಯ, ತಾಯಿ ಸುಧಭಾಸ್ತಿ, ತಾರಾ ಮಂಜು, ಪಾಲೆಯಂಡ ಕಿಶನ್ ಸುಬ್ಬಯ್ಯ ಹಾಜರಿದ್ದರು. - ಅನಿಲ್ ಎಚ್.ಟಿ.