ಪೊನ್ನಂಪೇಟೆ, ಅ. ೩: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ೨ನೇ ವರ್ಷದ ಕೊಡವ ಕೌಟುಂಬಿಕ ಚಿರಿಯಪಂಡ ವಾಲಿಬಾಲ್, ಥ್ರೋ ಬಾಲ್ ಕಪ್‌ಗೆ ತಾ. ೨ ರಂದು ಚಾಲನೆ ನೀಡಲಾಯಿತು.

ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ವಾಲಗದೊಂದಿಗೆ ಮೆರವಣಿಗೆ ಮೂಲಕ ಚಿರಿಯಪಂಡ ಕುಟುಂಬದ ಸದಸ್ಯರು ಆಗಮಿಸಿದರು. ಕುಟುಂಬದ ಅಧ್ಯಕ್ಷ ಚಿರಿಯಪಂಡ ಸುಬ್ಬಯ್ಯ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಕೊಡವರಲ್ಲಿ ಒಗ್ಗಟ್ಟು ಮೂಡಿಸಲು ಕ್ರೀಡೆ ಸಹಕಾರಿಯಾಗುತ್ತಿದೆ. ಅದಕ್ಕಾಗಿ ಕೊಡವ ಕುಟುಂಬಗಳ ನಡುವೆ ಹೆಚ್ಚು ಕ್ರೀಡಾಕೂಟಗಳನ್ನು ನಡೆಸುವ ಅಗತ್ಯತೆ ಇದೆ. ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೂ ಅತ್ಯಗತ್ಯ ಎಂದರು.

ಮತ್ತೋರ್ವ ಅತಿಥಿ ಬೆಂಗಳೂರು ಕೊಡವ ಸಮಾಜದ ಉಪಾಧ್ಯಕ್ಷೆ ಆಶಾ ವಿವೇಕ್ ಮಾತನಾಡಿ, ಕೊಡವ ಸಮಾಜದಲ್ಲಿ ದೊರಕಿರುವ ಅವಕಾಶದಲ್ಲಿ ಕೊಡವಾಮೆ, ಭಾಷೆ ಪೋಷಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು. ಕಳೆದ ಬಾರಿ ಮಲ್ಲಮಾಡ ವಾಲಿಬಾಲ್ ಆರಂಭಿಸಿದ್ದ ಮಲ್ಲಮಾಡ ಕುಟುಂಬದ ಅಧ್ಯಕ್ಷ ಪ್ರಭು ಪೂಣಚ್ಚ ಮಾತನಾಡಿ, ಮೊದಲ ವರ್ಷ ಕೊಡವ ವಾಲಿಬಾಲ್ ಕಪ್ ಆಯೋಜನೆ ಮಾಡಿದಾಗ ಹೆಚ್ಚು ಪ್ರೋತ್ಸಾಹ ದೊರೆತ ಕಾರಣ ಯಶಸ್ಸಿಗೆ ಕಾರಣವಾಗಿತ್ತು. ಸಣ್ಣ ಕುಟುಂಬವಾಗಿದ್ದರೂ ಪಂದ್ಯಾವಳಿ ಯನ್ನು ಯಶಸ್ವಿಯಾಗಿ ಆಯೋಜಿಸಿದ್ದರಿಂದ ಉತ್ಸಾಹ ಹೆಚ್ಚಾಗಿದೆ. ಚಿರಿಯಪಂಡ ಕುಟುಂಬ ವಾಲಿಬಾಲ್ ಕಪ್ ಮುಂದುವರಿಸಿರುವುದು ಹೆಮ್ಮೆಯ ಸಂಗತಿ ಎಂದರು. ಕುಟುಂಬದ ಕಾರ್ಯಾಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಸ್ವಾಗತಿಸಿ, ಶುಭ ಕೋರಿದರು. ಕ್ರೀಡಾ ಸಮಿತಿ ಅಧ್ಯಕ್ಷ ಪಟ್ಟು ಸೋಮಯ್ಯ ವಂದಿಸಿದರು. ಚಿರಿಯಪಂಡ ಲತಾ ಪೂಣಚ್ಚ ಪ್ರಾರ್ಥಿಸಿ, ಚಿರಿಯಪಂಡ ರುಕ್ಮಿಣಿ ನಾಣಯ್ಯ ಕಾರ್ಯಕ್ರಮ ನಿರೂಪಿಸಿದರು.

ಚೋಕಿರ ಅನಿತಾ ದೇವಯ್ಯ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದರು. ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ೮೮ ತಂಡಗಳು ಹಾಗೂ ಮಹಿಳೆಯರ ಥ್ರೋ ಬಾಲ್ ಟೂರ್ನಿಯಲ್ಲಿ ೬೮ ತಂಡಗಳು ಸೆಣೆಸಾಟ ಆರಂಭಿಸಿದ್ದು, ತಾ. ೫ ರಂದು ಫೈನಲ್ ಪಂದ್ಯಾಟ ನಡೆಯಲಿದೆ.

-ಚನ್ನನಾಯಕ