ಕಣಿವೆ, ಅ. ೩: ಬಹಳಷ್ಟು ರೈತಾಪಿಗಳ ಬಹುನಿರೀಕ್ಷಿತ ಹಣದ ಬೆಳೆ ಶುಂಠಿ ಕಳೆದ ವರ್ಷದ ಹಾಗೆಯೇ ಈ ಬಾರಿಯೂ ಕೃಷಿಕರ ಕೈಸುಟ್ಟಿದೆ. ಹಾಗಾಗಿ ಗಾಯದ ಮೇಲೆ ಬರೆ ಎಳೆದಂತೆ ಕಷ್ಟದ ಮೇಲೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತಾಪಿಗಳು ಸಾಲದ ಬಾಧೆಯಿಂದ ಹೊರಬರಲಾರದೆ ಒದ್ದಾಡುವಂತಾಗಿದೆ.

ಇದೀಗ ರೈತಾಪಿಗಳ ಪಾಲಿಗೆ ಒಂದಷ್ಟು ನೆಮ್ಮದಿಯ ಬೆಳೆಯಾಗಿ ಉಳಿದಿರುವುದು ಜೋಳದ ಕೃಷಿ ಮಾತ್ರ. ಮುಸುಕಿನ ಜೋಳದ ಫಸಲು ಲಾಭದಾಯಕವಲ್ಲದ ಬೆಳೆಯಾದರೂ ಕೂಡ ಮಾಡಿದ ಖರ್ಚಿಗೆ ಮೋಸವಂತೂ ಇಲ್ಲ.

ಕೆಲವು ಸಂದರ್ಭಗಳಲ್ಲಿ ಮಾಡಿದ ಖರ್ಚಿಗೆ ದುಪ್ಪಟ್ಟು ಲಾಭ ತಂದುಕೊಡುವ ಈ ಬೆಳೆ ಬಿತ್ತನೆಯ ದಿನದಿಂದ ೧೨೦ ದಿನಗಳಲ್ಲಿ ಕಟಾವಿಗೆ ಬರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬಗಳ ಖರ್ಚು ವೆಚ್ಚಗಳಿಗೆ ಬೆಸುಗೆಯಾಗುವ ಈ ಜೋಳದ ಬೆಳೆ ಒಂದು ರೀತಿಯಲ್ಲಿ ಕೃಷಿಕನ ಮೊಗದಲ್ಲಿ ಒಂದಷ್ಟು ಖುಷಿನೀಡುವ ಬೆಳೆ ಎಂದು ಖಚಿತವಾಗಿ ಹೇಳಬಹುದು.

ಕುಶಾಲನಗರ ತಾಲೂಕಿನ ತೊರೆನೂರು, ಸಿದ್ದಲಿಂಗಪುರ, ಅಳುವಾರ, ಅರಿಶಿಣಗುಪ್ಪೆ, ಬಸರಿಗುಪ್ಪೆ, ಮರೂರು, ಯಡವನಾಡು, ಹಾರಂಗಿ, ಅತ್ತೂರು ಮೊದಲಾದ ಪ್ರದೇಶಗಳಲ್ಲಿ ಮಳೆಯಾಶ್ರಿತ ಬೆಳೆಯಾಗಿದೆ ಈ ಜೋಳದ ಬೆಳೆ.

ಇನ್ನು ಕುಶಾಲನಗರದ ಸೆರಗಿನಲ್ಲಿರುವ ಬೈಲಕೊಪ್ಪ, ಆವರ್ತಿ, ರಾಣಿಗೇಟು, ಮರೂರು, ಚಿಕ್ಕಹೊಸೂರು ಮೊದಲಾದ ಗ್ರಾಮಗಳ ಹೈನುಗಾರಿಕಾ ರೈತಾಪಿಗಳ ಆಶಾಕಿರಣವಾಗಿದೆ ಈ ಮುಸುಕಿನ ಜೋಳದ ಬೆಳೆ. ಇದೀಗ ಮಳೆ ನಿಂತ ನಂತರ ರೈತರು ಎಕರೆಗಟ್ಟಲೆ ಪ್ರದೇಶಗಳಲ್ಲಿ ಬೆಳೆದಿರುವ ಜೋಳದ ಹೊಲಗಳಲ್ಲಿ ಬೆಳೆಯುತ್ತಿರುವ ಜೋಳದ ಫಸಲಿಗೆ ನೇಗಿಲು ಬಿಡುವತ್ತ ರೈತರು ಚಿತ್ತ ಹರಿಸಿದ್ದಾರೆ.

ಜೊತೆಗೆ ಮೊಣಕಾಲು ಉದ್ದ ಬೆಳೆದಿರುವ ಈ ಹಂತದ ಜೋಳದ ಗಿಡದ ಬುಡದ ಕಾಂಡವನ್ನು ಕೊರೆಯುವ ಹುಳುಗಳ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಿಸುವತ್ತ ಕೃಷಿಕರು ಮಗ್ನರಾಗಿದ್ದಾರೆ.

ಒಂದು ಎಕರೆ ಭೂಮಿಯಲ್ಲಿ ಜೋಳ ಬೆಳೆಯಲು ೨೦ ಸಾವಿರ ಖರ್ಚು ಬರುತ್ತದೆ. ೧೨೦ ದಿನಗಳಲ್ಲಿ ಕಟಾವಿಗೆ ಬರುವ ಈ ಜೋಳದ ಫಸಲು ಕಟಾವು ಮಾಡಿದರೆ ಎಕರೆಗೆ ಕನಿಷ್ಟ ೨೦ ರಿಂದ ಗರಿಷ್ಠ ೨೫ ಚೀಲ ಇಳುವರಿ ಸಿಗುತ್ತದೆ. ಇಂತಹ ಫಸಲಿಗೆ ಕ್ವಿಂಟಾಲ್‌ಗೆ ೨೨೦೦ ರೂಗಳಂತೆ ಮಾರಾಟ ಮಾಡಿದರೂ ಕೂಡ ೪೫ ರಿಂದ ೫೦ ಸಾವಿರ ರೂಗಳು ರೈತನಿಗೆ ಸಿಗುತ್ತದೆ. ಹಾಗಾಗಿ ಈ ಬೆಳೆ ರೈತನ ಕೈಹಿಡಿಯುವುದರಲ್ಲಿ ಎರಡು ಮಾತಿಲ್ಲ.