ಸೋಮವಾರಪೇಟೆ, ಅ. ೧: ಉತ್ತರ ಕೊಡಗಿನ ದಸರಾ ಎಂದೇ ಬಿಂಬಿತವಾಗಿರುವ ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿAದ ಆಯೋಜನೆಗೊಳ್ಳುವ ಆಯುಧ ಪೂಜೋತ್ಸವ ಸಮಾರಂಭದಲ್ಲಿ, ಈ ಬಾರಿ ಸಂಗೀತ ಮಾಂತ್ರಿಕ ಗುರುಕಿರಣ್ ತಂಡ ಭಾಗಿಯಾಗುವ ಮೂಲಕ ೪೯ನೇ ವರ್ಷದ ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಮೂಡಿಬಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಸಾವಿರಾರು ಮಂದಿ ಕಣ್ತುಂಬಿಕೊAಡು ಸಂಗೀತಕ್ಕೆ ತಲೆದೂಗಿದರು. ಅಬ್ಬರದ ರಸಮಂಜರಿಯಲ್ಲಿ ಯುವ ಸಮೂಹ ಕುಣಿದು ಕುಪ್ಪಳಿಸಿ ಸಂಭ್ರಮಿಸಿತು.

ಶಾಸಕ ಡಾ. ಮಂತರ್ ಗೌಡ ಅವರು ಪ್ರಾಯೋಜಕತ್ವ ನೀಡಿದ್ದ ಗುರುಕಿರಣ್ ನೈಟ್ಸ್ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ರಂಗದ ಹಿರಿಯ ಸಂಗೀತ ನಿರ್ದೇಶಕ, ನಟ ಗುರುಕಿರಣ್ ಸೇರಿದಂತೆ ಹೆಸರಾಂತ ಹಿನ್ನೆಲೆ ಗಾಯಕರಾದ ಅನುರಾಧ ಭಟ್, ಚೈತ್ರ, ಗಣೇಶ್ ಕಾರಂತ್ ಅವರುಗಳು ಹಾಡಿನ ಮೋಡಿ ಮಾಡಿದರು. ನಿರೂಪಕಿ ಅನುಪಮಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.

‘ಕನ್ನಡ ನಾಡಿನ ಜೀವ ನದಿ..ಈ ಕಾವೇರಿ’ ಹಾಡಿನ ಮೂಲಕ ಆರಂಭಗೊAಡ ಸಂಗೀತ ರಸ ಮಂಜರಿ ಕಾರ್ಯಕ್ರಮದಲ್ಲಿ ‘ಮಡಿಕೇರಿ ಸಿಪಾಯಿ..’ ಸೇರಿದಂತೆ ಕನ್ನಡ ಚಿತ್ರಗೀತೆಗಳ ಗಾಯನ ಗಮನ ಸೆಳೆಯಿತು.

ಗುರುಕಿರಣ್ ಅವರು ವಿಶೇಷವಾಗಿ ಉಪೇಂದ್ರ ಹಾಗೂ ಡಾ. ವಿಷ್ಣುವರ್ಧನ್ ನಟನೆಯ ಚಲನಚಿತ್ರ ಗೀತೆಗಳಿಗೆ ದನಿಯಾದರು. ರಾತ್ರಿ ೧೧ ಗಂಟೆಯವರೆಗೂ ಗಾನಸುಧೆ ಹರಿದುಬಂತು. ಆರಂಭದಿAದ ಅಂತ್ಯದವರೆಗೂ ಶಾಸಕ ಡಾ. ಮಂತರ್ ಗೌಡ ಅವರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದುದು ವಿಶೇಷವಾಗಿತ್ತು.

ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಮಂತರ್ ಗೌಡ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿAದ ಪ್ರತಿ ವರ್ಷ ಅದ್ದೂರಿಯಾಗಿ ಆಯುಧ ಪೂಜೋತ್ಸವ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ದಸರಾ ಸಂದರ್ಭ ಕೇವಲ ಒಂದು ದಿನಕ್ಕೆ ಮಾತ್ರ ಸಂಭ್ರಮ ಮೀಸಲಾಗದೇ ಮುಂದಿನ ವರ್ಷಗಳಲ್ಲಿ ೯ ದಿನವೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಆಶಿಸಿದರು.

ಇದರೊಂದಿಗೆ ಸಂಘದಿAದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಚಾಲಕರು ತಮ್ಮ ವೃತ್ತಿಯಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು. ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು. ಕುಟುಂಬವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಬೇಕೆಂದು ಕಿವಿಮಾತು ನುಡಿದರು. ಒಕ್ಕಲಿಗ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿ, ಸೋಮವಾರಪೇಟೆಯಲ್ಲಿ ವರ್ಷಕ್ಕೊಮ್ಮೆ ಜನೋತ್ಸವವಾಗಿ ನಡೆಯುವ ಆಯುಧ ಪೂಜೋತ್ಸವಕ್ಕೆ ಸರ್ಕಾರದಿಂದ ಕನಿಷ್ಟ ೫೦ ಲಕ್ಷ ಅನುದಾನ ಒದಗಿಸಲು ಶಾಸಕರು (ಮೊದಲ ಪುಟದಿಂದ) ಮುಂದಾಗಬೇಕೆAದು ಮನವಿ ಮಾಡಿದರು.

ಯುವ ಜನಾಂಗ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದ ಅವರು, ಭವಿಷ್ಯದಲ್ಲಿ ಉದ್ಯೋಗಕ್ಕೆ ಇಂಗ್ಲೀಷ್ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರೊಂದಿಗೆ ಇಂಗ್ಲೀಷ್ ಜ್ಞಾನವನ್ನೂ ತುಂಬಬೇಕು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು.

ವೇದಿಕೆಯಲ್ಲಿ ಗೌಡಳ್ಳಿ ವಿಎಸ್‌ಎಸ್‌ಎನ್ ನಿರ್ದೇಶಕ ಹೆಚ್.ಆರ್. ಸುರೇಶ್, ಉದ್ಯಮಿ ಎನ್.ಎಸ್. ಜಯರಾಂ, ಎನ್.ಎಸ್. ಶ್ರೀನಿವಾಸ್, ಚೌಡ್ಲು ಗ್ರಾ.ಪಂ. ಉಪಾಧ್ಯಕ್ಷ ನತೀಶ್ ಮಂದಣ್ಣ, ಸೋಮವಾರಪೇಟೆ ವಿಎಸ್‌ಎಸ್‌ಎನ್ ಉಪಾಧ್ಯಕ್ಷ ಹುಲ್ಲೂರಿಕೊಪ್ಪ ಚಂದ್ರು, ನಿರ್ದೇಶಕ ಕರ್ಕಳ್ಳಿ ಸುಭಾಷ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ಗುತ್ತಿಗೆದಾರ ಚೌಡ್ಲು ಚೇತನ್, ಸೂಡಾ ಅಧ್ಯಕ್ಷ ಕೆ.ಎ. ಆದಂ, ಪ.ಪಂ. ಸದಸ್ಯ ಕಿರಣ್ ಉದಯಶಂಕರ್, ಜೇಸೀ ಮಾಜೀ ಅಧ್ಯಕ್ಷ ಎಸ್.ಆರ್. ವಸಂತ್ ಸೇರಿದಂತೆ ಇತರರು ಇದ್ದರು.