ಮಡಿಕೇರಿ, ಅ. ೧: ಭಾರೀ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಈ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್ ನಿಧಿಯನ್ನು ದುಪ್ಪಟ್ಟುಗೊಳಿಸಿ ನಷ್ಟಕ್ಕೆ ಒಳ ಗಾದವರಿಗೆ ವಿತರಿಸುವ ಚಿಂತನೆ ಇದೆ ಎಂದು ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ನಗರದ ೧೦ ಮಂಟಪಗಳು ನಿರ್ಮಾಣವಾಗುತ್ತಿರುವ ಜಾಗಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯದ ಹಲವು ಕಡೆ ಹೆಚ್ಚಿನ ಮಳೆಯ ಪರಿಣಾಮ ತೀವ್ರ ಬೆಳೆಹಾನಿಯಾಗಿದ್ದು ಎನ್.ಡಿ.ಆರ್.ಎಫ್ ನಿಗದಿ ಪಡಿಸಿದ ಪರಿಹಾರಕ್ಕಿಂತ ದುಪ್ಪಟ್ಟು ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಸಹಕಾರ ನೀಡುವ ಅಗತ್ಯವಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ೨೫೦೦ ಕೋಟಿ ರೂ ಬೆಳೆ ಪರಿಹಾರ ಘೋಷಣೆ ಮಾಡಿದ್ದು, ಕೊಡಗಿನಲ್ಲಿ ಕಾಫಿ ಬೋರ್ಡ್ ಸಹಯೋಗದೊಂದಿಗೆ ಕಂದಾಯ ಇಲಾಖೆ ಬೆಳೆ ನಷ್ಟದ ಸರ್ವೆಯನ್ನು ಸದ್ಯದಲ್ಲಿಯೇ ನಡೆಸಲಿದೆ ಎಂದು ತಿಳಿಸಿದರು.
ದಶಮಂಟಪಗಳು ಮತ್ತು ನಾಲ್ಕು ಶಕ್ತಿ ದೇವತೆಗಳ ಕರಗಳ ಉತ್ಸವ ನಡೆಯುತ್ತಿದು, ಇಂತಹ ಪಾರಂಪರಿಕ ಉತ್ಸವ ಜಗತ್ತಿನ ಯಾವ ಭಾಗದಲ್ಲಿಯೂ ನಡೆಯದೆ ಇರುವುದರಿಂದ ಲಕ್ಷಾಂತರ ಜನ ಮಡಿಕೇರಿ ದಸರಾ ವೀಕ್ಷಣೆಗೆ ಆಗಮಿಸುತ್ತಿದ್ದು ಮಂಟಪ ಸಮಿತಿ ಹಾಗೂ ನಾಗರಿಕರು ಜಿಲ್ಲೆಗೆ ಹಾಗೂ ಮಡಿಕೇರಿ ದಸರಾಕ್ಕೆ ಯಾವುದೇ ರೀತಿಯ ಅಪಚಾರವಾಗದ ರೀತಿ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಕಾಪಾಡಿಕೊಂಡು ದಸರಾ ಉತ್ಸವವನ್ನು ಉತ್ತಮವಾಗಿ ಆಚರಿಸಿ ಎಂದು ಮಂಟಪ ಸಮಿತಿಯವರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ಹೈಕೋರ್ಟ್ ಹಿರಿಯ ವಕೀಲರು ಹಾಗೂ ಕೆ.ಪಿ.ಸಿ.ಸಿ ವಕ್ತಾರ ಹೆಚ್.ಎಸ್. ಚಂದ್ರಮೌಳಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷÀ ರಾಜೇಶ್ ಯಲ್ಲಪ್ಪ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅನ್ವೇಕರ್, ಪ್ರಮುಖರಾದ ಬಷೀರ್, ಮಂಡಿರ ಸದಾ ಮುದ್ದಪ್ಪ, ನವೀನ್ ಅಂಬೆಕಲ್, ರಾಜೇಶ್, ಮೀನಾಜ್ ಪ್ರವೀಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.