ಮಡಿಕೇರಿ, ಸೆ. ೩೦: ದಸರಾ ಪ್ರಯುಕ್ತ ಅ. ೨ ರಂದು ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ದಶಮಂಟಪ ಶೋಭಾಯಾತ್ರೆ ನಡೆಯುವ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ೭೨ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿ ಅದರ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಜನದಟ್ಟಣೆಯ ಬಗ್ಗೆ ನೇರ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ನಗರದಲ್ಲಿ ಕಳೆದ ವರ್ಷಕ್ಕಿಂತ ಶೇ ೩೦ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ೧ ಎಸ್.ಪಿ, ೨ ಎ.ಎಸ್.ಪಿ. ಸೇರಿದಂತೆ ೧೧೬ ಪೊಲೀಸ್ ಅಧಿಕಾರಿಗಳು, ೯೦೮ ನಾಗರಿಕ ಪೊಲೀಸ್, ೧೨೦ ಗೃಹ ರಕ್ಷಕ ದಳ ಸಿಬ್ಬಂದಿ, ೭ ಕೆ.ಎಸ್.ಆರ್.ಪಿ., ೧೦ ಡಿ.ಎ.ಆರ್. ತುಕಡಿಗಳನ್ನು ನಿಯೋಜಿಸಲಾಗಿದೆ. ಗೋಣಿಕೊಪ್ಪದಲ್ಲಿ ಕಳೆದ ಬಾರಿಗಿಂತ ಶೇ ೨೫ ಸಿಬ್ಬಂದಿ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಒಟ್ಟು ೬೦೦ ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ೧ ಎ.ಎಸ್.ಪಿ., ೮೩ ಅಧಿಕಾರಿಗಳು, ೩೫೦ ನಾಗರಿಕ ಪೊಲೀಸ್, ೧೦೦ ಗೃಹ ರಕ್ಷಕ ದಳ, ೩ ಕೆ.ಎಸ್.ಆರ್.ಪಿ., ೪ ಡಿ.ಎ.ಆರ್. ತುಕಡಿಯನ್ನು ನೇಮಿಸಲಾಗಿದೆ ಎಂದರು. ದಶಮಂಟಪ ಶೋಭಾಯಾತ್ರೆ ಸಾಗುವ ಜಾಗ ಸೇರಿದಂತೆ ನಗರದಲ್ಲಿ ಸಿಸಿ ಕ್ಯಾಮರ ೪ಆರನೇ ಪುಟಕ್ಕೆ ಅಳವಡಿಸಿದ್ದು, ಆ ಕ್ಯಾಮರಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ‘ಕಮಾಂಡ್ ಮತ್ತು ಕಂಟ್ರೋಲ್’ ರೂಮ್ನಲ್ಲಿ ಮೇಲ್ವಿಚಾರಣೆ ನಡೆಸಲಾಗಿದೆ. ಒಟ್ಟು ೧೮೦೦ಕ್ಕೂ ಹೆಚ್ಚು ಕ್ಯಾಮರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಜAಬೋ ಟೀಂ
ಮಹಿಳೆಯರ ಸುರಕ್ಷತೆಗಾಗಿ ಎರಡು ಕಡೆಗಳಲ್ಲಿಯೂ ಜಂಬೋ ಟೀಂ ರಚನೆ ಮಾಡಿದ್ದು, ಈ ತಂಡ ಇಡೀ ನಗರದ ಮೇಲೆ ಕಣ್ಣಿಟ್ಟಿರುತ್ತದೆ. ಅದರಲ್ಲೂ ಜನಸಂದಣಿ ಏರ್ಪಡುವ ಜಾಗದಲ್ಲಿ ನಿಯೋಜನೆಗೊಂಡಿರುತ್ತದೆ ಎಂದು ರಾಮರಾಜನ್ ವಿವರಿಸಿದರು.
ಮಡಿಕೇರಿಯಲ್ಲಿ ೮, ಗೋಣಿಕೊಪ್ಪದಲ್ಲಿ ೪ ಜಂಬೋ ಟೀಂ ಇರುತ್ತದೆ. ಪ್ರತಿ ತಂಡದಲ್ಲಿ ೨ ಮಹಿಳಾ ಸಿಬ್ಬಂದಿ ಇರುತ್ತಾರೆ. ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ತೊಂದರೆ ನೀಡುವುದು, ಅನುಚಿತ ವರ್ತನೆ ತಡೆಯುವ ನಿಟ್ಟಿನಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.
ಜನಸಂದಣಿ ಹೆಚ್ಚಾದ ಸಂದರ್ಭ ಈ ತಂಡ ಅದನ್ನು ನಿಯಂತ್ರಿಸಲು ಸಹಕರಿಸುತ್ತದೆ. ಮಡಿಕೇರಿಯ ೭ ಕಡೆ ಸೇರಿದಂತೆ ಗೋಣಿಕೊಪ್ಪದಲ್ಲಿ ಪೊಲೀಸ್ ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದರು.
ವಾಹನ ನಿಲುಗಡೆಗೆ ವ್ಯವಸ್ಥೆ
ಸಾರ್ವಜನಿಕರು ಪೊಲೀಸ್ ಸೂಚನೆಯನ್ನು ಪಾಲಿಸುವಂತೆ ಎಸ್.ಪಿ. ರಾಮರಾಜನ್ ಮನವಿ ಮಾಡಿದರು. ನಿಗದಿತ ಜಾಗದಲ್ಲಿ ವಾಹನ ನಿಲುಗಡೆ ಮಾಡಬೇಕು. ಸೂಕ್ತ ವ್ಯವಸ್ಥೆಯೊಂದಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆ ಜಾಗದಿಂದ ನಗರಕ್ಕೆ ಬರಲು ಆಟೋ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಸಂಜೆ ೪ ಗಂಟೆ ನಂತರ ರಸ್ತೆ ಬದಿ ವಾಹನ ನಿಲ್ಲಿಸದಂತೆ ಮನವಿ ಮಾಡಿದರು.
ಮುಖವಾಡ, ಪೀಪಿಗೆ ನಿರ್ಬಂಧ
ಜನರಿಗೆ ಕಿರಿಕಿರಿ ಉಂಟು ಮಾಡುವ ಕರ್ಕಶ ಧ್ವನಿ ಹೊರಬರುವ ಪೀಪಿ ಹಾಗೂ ಮುಖವಾಡ ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮಾಸ್ಕ್ ಧರಿಸಿ ದುಷ್ಕೃತ್ಯವೆಸಗುವ ಸಾಧ್ಯತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮರಾಜನ್ ಹೇಳಿದರು.