ಮಡಿಕೇರಿ, ಸೆ. ೩೦: ಕಲಾಸಂಭ್ರಮ ವೇದಿಕೆಯಲ್ಲಿಂದು ಮಕ್ಕಳ ಕಲರವ ಜೋರಾಗಿತ್ತು. ಒಂದೆಡೆ ತರಕಾರಿ, ಸೊಪ್ಪು, ಹಣ್ಣುಗಳ ಮಾರಾಟದ ಭರಾಟೆ, ಮತ್ತೊಂದೆಡೆ ಪುಟಾಣಿಗಳಿಂದ ತಯಾರಾದ ಖಾದ್ಯಗಳು ಜನರನ್ನು ಸೆಳೆಯುತ್ತಿದ್ದವು. ಛದ್ಮವೇಷ ನೋಡುಗರಿಗೆ ಮುದ ನೀಡಿದರೆ, ಮಕ್ಕಳ ಮಂಟಪ, ಮಣ್ಣಿನ ಮಾದರಿಗಳ ತಯಾರಿಕೆ ಪುಟಾಣಿಗಳ ಕೌಶಲ್ಯವನ್ನು ಅನಾವರಣಗೊಳಿಸಿತು.
ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ, ದಸರಾ ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ಆಯೋಜಿತ ೧೨ನೇ ವರ್ಷದ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಜನರಿಂದ ವ್ಯಾಪಕ ಪ್ರತಿಕ್ರಿಯೆಯೊಂದಿಗೆ ಮೆಚ್ಚುಗೆ ದೊರೆಯಿತು. ಬೆಳಿಗ್ಗಿನಿಂದ ಮಕ್ಕಳು ವ್ಯಾಪಾರಿಗಳಾಗಿ ಆಗಮಿಸಿ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರು.
ವೈವಿಧ್ಯಮಯ ವಸ್ತು - ಉತ್ಪನ್ನಗಳ ಮಾರಾಟ
ಜಿಲ್ಲೆಯ ವಿವಿಧೆಡೆಗಳಿಂದ ಮಕ್ಕಳು ಆಗಮಿಸಿ ವ್ಯಾಪಾರ ನಡೆಸಿದ್ದು ಗಮನ ಸೆಳೆಯಲು ಕಾರಣವಾಯಿತು. ಓದು, ಬರಹ, ಶಾಲೆ ಅಂತ ಇದ್ದ ವಿದ್ಯಾರ್ಥಿಗಳು ಇಂದು ‘ಬನ್ನಿ ಸರ್, ಬನ್ನಿ ಅಂಟಿ, ಅಂಕಲ್’ ಎನ್ನುತ್ತ ಗ್ರಾಹಕರನ್ನು ಸೆಳೆದು ವ್ಯಾಪಾರದಲ್ಲಿ ಮಗ್ನರಾಗಿದ್ದರು.
ವಿಶೇಷವಾಗಿ ಗ್ರಾಮೀಣ ಭಾಗದಿಂದ ಸೊಪ್ಪು, ತರಕಾರಿ, ಸೀಬೆಕಾಯಿ, ಕಬ್ಬು, ಅರಿಶಿಣ, ಶುಂಠಿ, ಬಾಳೆ ಹಣ್ಣು, ನಾಟಿ ಕೋಳಿ ಮೊಟ್ಟೆ, ಹೂ, ತೆಂಗಿನಕಾಯಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ತಂದು ಮಾರಾಟ ಮಾಡಿದರು.
ಇದರೊಂದಿಗೆ ಮಕ್ಕಳ ಅಂಗಡಿಯಲ್ಲಿ ವಿವಿಧ ಖಾದ್ಯಗಳು ಜನರ ಬಾಯಲ್ಲಿ ನೀರುಣಿಸಿದವು. ಕೇಕ್, ಜ್ಯೂಸ್, ಪಾನಿಪುರಿ, ಮಸಾಲಪುರಿ, ಚುರುಮುರಿ, ಉಪ್ಪಿನಕಾಯಿ, ಫ್ರೂಟ್ ಸಲಾಡ್, ಹೋಂ ಮೇಡ್ ಆಹಾರ, ಇಡ್ಲಿ, ಚಾಕಲೇಟ್ ಹೀಗೆ ನಾನಾ ಬಗೆಯ ಖಾದ್ಯಗಳನ್ನು ಮಾರಾಟ ಮಾಡಿ ಸೈ ಎನಿಸಿಕೊಂಡರು. ಅಲಂಕಾರಿಕ ವಸ್ತುಗಳು, ಲೇಖನಿ ಸಾಮಗ್ರಿ, ಪುಸ್ತಕ, ಆಟದ ಸಾಮಗ್ರಿಗಳನ್ನು ಮಕ್ಕಳು ಮಾರಾಟ ಮಾಡಿದರು. ಜೊತೆಗೆ ಕೆಲ ವಿದ್ಯಾರ್ಥಿಗಳು ತಾವು ಬಿಡಿಸಿದ ಚಿತ್ರಗಳನ್ನು ಮಾರಾಟ ಮಾಡಿ ತಮ್ಮ ಪ್ರತಿಭೆಯನ್ನೂ ಪ್ರದರ್ಶನ ಮಾಡಿದರು.
ಛದ್ಮವೇಷದಲ್ಲಿ ಕಂಗೊಳಿಸಿದ ಪುಟಾಣಿಗಳು
ವೈವಿಧ್ಯಮಯ ವೇಷ-ಭೂಷಣ ತೊಟ್ಟು ಪುಟಾಣಿಗಳು ಕಂಗೊಳಿಸಿದರು. ಆಕರ್ಷಕ ಧಿರಿಸು, ಅದಕ್ಕೆ ತಕ್ಕ ವರ್ಣಾಲಂಕಾರ, ಅಗತ್ಯವಾದ ಪರಿಕರಗಳನ್ನು ಬಳಸಿಕೊಂಡು ವೇಷ ಧರಿಸಿ ಮಕ್ಕಳು ಜನರನ್ನು ಮಂತ್ರಮುಗ್ದಗೊಳಿಸಿದರು.
ಶಾರಾದೆ, ಚಾಮುಂಡೇಶ್ವರಿ, ನ್ಯಾಯ ದೇವತೆ, ಭಾರತಾಂಬೆ, ವಿಷ್ಣು, ಉಗ್ರನರಸಿಂಹ, ಕೃಷ್ಣ, ರೈತ, ಚಿಟ್ಟೆ ಹೀಗೆ ನಾನಾ ವೇಷದೊಂದಿಗೆ ಭ್ರೂಣ ಹತ್ಯೆ ಮಾಡದಿರಿ, ಸಂಚಾರ ನಿಯಮ ಪಾಲಿಸಿ, ಪ್ರಕೃತಿ ಉಳಿಸಿ, ಸ್ವಚ್ಛತೆ ಕಾಪಾಡಿ, ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಿ ಎನ್ನುವ ಸಂದೇಶವನ್ನು ಛದ್ಮವೇಷದ ಮೂಲಕ ವೇಷಧಾರಿ ಮಕ್ಕಳು ಸಾರಿದರು.
ಜನಸಾಗರ - ನೂಕುನುಗ್ಗಲು
ಮಕ್ಕಳ ದಸರಾಕ್ಕೆ ಜನಸಾಗರವೇ ಹರಿದು ಬಂತು. ಬೆಳಿಗ್ಗಿನಿಂದಲೇ ಕಲಾಸಂಭ್ರಮ ವೇದಿಕೆಯತ್ತ ದೌಡಾಯಿಸಿದ ಜನರು ವ್ಯಾಪಾರದಲ್ಲಿ ತೊಡಗಿಸಿಕೊಂಡು ಮಕ್ಕಳನ್ನು ಪ್ರೋತ್ಸಾಹಿಸಿದರು.
ಗ್ರಾಮೀಣ ಭಾಗದಲ್ಲಿ ಸಿಗುವ ಕೆಲವು ಅಪರೂಪದ ವಸ್ತುಗಳು ದೊರೆತ ಕಾರಣ ಹೆಚ್ಚಿನ ಬೇಡಿಕೆಯೂ ಸೃಷ್ಟಿಯಾಯಿತು. ೪ಆರನೇ ಪುಟ ಅಂಗಡಿ ಆರಂಭಿಸಿದ ಕೆಲಗಂಟೆಗಳಲ್ಲಿಯೇ ವಸ್ತುಗಳೆಲ್ಲ ಖಾಲಿಯಾಗುತ್ತಿದ್ದ ಚಿತ್ರಣ ಕಂಡುಬAತು. ವ್ಯಾಪಾರದೊಂದಿಗೆ ಮಕ್ಕಳು ಬುದ್ದಿವಂತಿಕೆ ಪ್ರಯೋಗಿಸಿದರು. ಬರುವ ಗ್ರಾಹಕರಿಂದ ೧೦ ರೂಪಾಯಿ ಪಡೆದು ಲಕ್ಕಿಡಿಪ್ ನೀಡುತ್ತಿದ್ದ ಬಾಲಕಿಯೊಬ್ಬಳು ವಿಜೇತರಿಗೆ ಆಕರ್ಷಕ ಬಹುಮಾನದ ‘ಆಫರ್’ ಅನ್ನು ನೀಡಿದಳು. ಜೊತೆಗೆ ಕೆಲವೊಂದು ಮನರಂಜನೆ ಕ್ರೀಡೆಗಳನ್ನಾಡಿಸಿ ಅದನ್ನು ಮಕ್ಕಳು ವ್ಯಾಪಾರವಾಗಿ ಪರಿವರ್ತಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಮಕ್ಕಳಾದಿಯಾಗಿ ಹಿರಿಯರು ಕೂಡ ಆಗಮಿಸಿ ಮಕ್ಕಳ ವ್ಯಾಪಾರ ಕಂಡು ಬೆಕ್ಕಸ ಬೆರಗಾದರು. ನೋಡ ನೋಡುತ್ತಲೇ ಕಲಾಸಂಭ್ರಮ ವೇದಿಕೆ ಜನರಿಂದ ತುಂಬಿ ತುಳುಕಿ ಕಾಲಿಡಲಾಗದಂತ ಪರಿಸ್ಥಿತಿ ನಿರ್ಮಾಣವಾಯಿತು. ಸಂತೆ ನೋಡಲು ನೂಕುನುಗ್ಗಲು ಕೂಡ ಏರ್ಪಡುವಂತ ಸ್ಥಿತಿ ನಿರ್ಮಾಣವಾಗಿತ್ತು.
ಒಟ್ಟು ೧೦೫ ಮಕ್ಕಳ ಅಂಗಡಿ, ೮೦ ಸಂತೆ, ೬೭ ಛದ್ಮವೇಷ, ೧೮ ಮಕ್ಕಳ ಮಂಟಪ, ೧೫ ಮಂದಿ ಕ್ಲೇ ಮಾಡಲಿಂಗ್ನಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು.
ಸಂಚಾರ ದಟ್ಟಣೆ
ಮಕ್ಕಳ ದಸರಾಕ್ಕೆ ಜನರು ಹೆಚ್ಚಾದ ಸಂಖ್ಯೆಯಲ್ಲಿ ಬಂದ ಪರಿಣಾಮ ರಾಜಾಸೀಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಭರ್ತಿಯಾಗಿ ರಸ್ತೆ ಬದಿಯಲ್ಲಿಯೂ ಹೆಚ್ಚಿನ ಸಂಖ್ಯೆಯ ವಾಹನ ನಿಲುಗಡೆಯಾಗಿತ್ತು. ಇದರಿಂದ ಪಾರ್ಕಿಂಗ್ಗೆ ಪರದಾಡಬೇಕಾದ ಸನ್ನಿವೇಶವೂ ಎದುರಾಯಿತು. ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸಪಡುವಂತಾಯಿತು.
ಸAಸ್ಕೃತಿ ಕಾಪಾಡಿ ಮೌಲ್ಯ ಉಳಿಸಿಕೊಳ್ಳಿ - ವೆಂಕಟ್ ರಾಜಾ
ನಮ್ಮ ಪೂರ್ವಜರು ನೀಡಿರುವ ಮೌಲ್ಯವನ್ನು ಮಕ್ಕಳಿಗೆ ಹಸ್ತಾಂತರಿಸಿ ಭಾರತೀಯ ಸಂಸ್ಕೃತಿಯನ್ನು ಕಾಪಾಡಬೇಕೆಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ ನೀಡಿದರು.
ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೬೦ ಸ್ಪರ್ಧಿಗಳಿಂದ ಆರಂಭವಾದ ಮಕ್ಕಳ ದಸರಾಕ್ಕೆ ಇಂದು ೬೦೦ಕ್ಕೂ ಹೆಚ್ಚು ಸ್ಪರ್ಧಿಗಳು ಬಂದಿರುವುದು ಗಮನಾರ್ಹ ವಿಷಯ. ಭಾರತದ ಭವಿಷ್ಯವೇ ಮಕ್ಕಳ ಕೈಯಲ್ಲಿದ್ದು, ಪೋಷಕರು ಅವರನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕಾದ ಅಗತ್ಯತೆ ಇದೆ. ಮಕ್ಕಳ ಮೂಲಕವೇ ಕಲೆ, ಸಂಸ್ಕೃತಿ, ಇತಿಹಾಸವನ್ನು ಉಳಿಸಬೇಕಾಗಿದೆ. ತಂತ್ರಜ್ಞಾನ ಶರವೇಗದಲ್ಲಿ ಸಾಗುತ್ತಿದ್ದರೂ ಸ್ವಂತಿಕ ಹಾಗೂ ಮೌಲ್ಯವನ್ನು ಉಳಿಸಿಕೊಂಡು ಮುಂದುವರೆಯಬೇಕು. ಸಂಸ್ಕೃತಿ, ಇತಿಹಾಸದ ತಿಳುವಳಿಕೆ ನೀಡಬೇಕು. ಭಾರತೀಯ ಸೇನೆಯಲ್ಲಿ ಕೊಡಗಿನವರ ಸಂಖ್ಯೆ ಹೆಚ್ಚಿದೆ. ದೊಡ್ಡ ಹುದ್ದೆಯಲ್ಲಿದ್ದಾರೆ. ಮುಂದಿನ ಪೀಳೆಗೆಯೂ ದೇಶ ಸೇವೆಗೆ ಹೋಗಬೇಕೆಂದು ತಿಳಿಹೇಳಿದರು.
ರೋಟರಿ ಸಹಾಯಕ ಗವರ್ನರ್ ದಿಲನ್ ಚಂಗಪ್ಪ ಮಾತನಾಡಿ, ಸೋಲು-ಗೆಲುವು ಸ್ಪರ್ಧೆಯಲ್ಲಿ ಸಹಜ, ಆದರೆ ಭಾಗವಹಿಸುವಿಕೆ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ. ಈ ರೀತಿಯ ವೇದಿಕೆಯನ್ನು ಮಕ್ಕಳು ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಮಕ್ಕಳು ತಪ್ಪು ದಾರಿ ಹಿಡಿಯಬಾರದೆಂದರೆ ಅವರಲ್ಲಿ ಚಟುವಟಿಕೆ ನಡೆಸುವ ಗುಣವನ್ನು ಬೆಳೆಸಬೇಕು. ಈ ರೀತಿಯ ಕಾರ್ಯಕ್ರಮದಿಂದ ವ್ಯಾಪಾರದ ಕಲೆ ಮಕ್ಕಳಲ್ಲಿ ಮೂಡಿ ಸಾಧನೆ ಮಾಡಲು ದಾರಿ ದೊರೆತಂತೆ ಆಗುತ್ತದೆ ಎಂದು ಅಭಿಪ್ರಾಯಿಸಿದರು.
ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಮಕ್ಕಳಲ್ಲಿ ವ್ಯಾಪಾರದ ಅನುಭವ ನೀಡಿ ಜ್ಞಾನದ ಅಭಿವೃದ್ಧಿಗೊಳಿಸುವುದರೊಂದಿಗೆ ಮಕ್ಕಳಲ್ಲಿರುವ ಪ್ರತಿಭೆ ಅನಾವರಣ ಮಾಡುವ ಉದ್ದೇಶದಿಂದ ೧೨ ವರ್ಷದ ಹಿಂದೆ ಮಕ್ಕಳ ದಸರಾ ಆಯೋಜನೆ ಮಾಡಲಾಯಿತು. ಇದಕ್ಕೆ ಪ್ರತಿ ವರ್ಷ ಉತ್ತಮ ಸ್ಪಂದನ ದೊರೆತಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಜನರು ಬಂದಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷೆ ಕಲಾವತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ರಮೇಶ್, ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ರೋಟರಿ ವಲಯ ಸೇನಾನಿ ಕೆ.ಸಿ. ಕಾರ್ಯಪ್ಪ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಹಾಜರಿದ್ದರು.
ಮಕ್ಕಳ ದಸರಾ ಸಂಚಾಲಕ ಎಚ್.ಟಿ. ಅನಿಲ್ ಸ್ವಾಗತಿಸಿ, ನಿರೂಪಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ವಂದಿಸಿದರು.
ನರ್ಸರಿ, ಅಕ್ವೇರಿಯಂ!
ಮಕ್ಕಳ ದಸರಾ ಕೇವಲ ತರಕಾರಿ, ಖಾದ್ಯ ಮಾರಾಟಕ್ಕೆ ಸೀಮಿತವಾಗಿರಲಿಲ್ಲ. ಅಪರೂಪದ ಸಸಿಗಳು, ಸಾವಯವ ಗೊಬ್ಬರ, ಮನೆಗೆ ಅಲಂಕಾರಿಕ ಮೀನು ಹಾಗೂ ಅಕ್ವೇರಿಯಂ, ಅಜ್ಜಿ ತಯಾರಿ ಮಾಡಿಕೊಟ್ಟ ಉಪ್ಪಿನ ಕಾಯಿ ಸೇರಿದಂತೆ ನಾಟಿ ಕೋಳಿಯ ಮೊಟ್ಟೆ ಹೀಗೆ ನಾನಾ ವಸ್ತುಗಳು ಮಾರಾಟಗೊಂಡವು.
ನರ್ಸರಿ, ಅಕ್ವೇರಿಯಂ!
ಮಕ್ಕಳ ದಸರಾ ಕೇವಲ ತರಕಾರಿ, ಖಾದ್ಯ ಮಾರಾಟಕ್ಕೆ ಸೀಮಿತವಾಗಿರಲಿಲ್ಲ. ಅಪರೂಪದ ಸಸಿಗಳು, ಸಾವಯವ ಗೊಬ್ಬರ, ಮನೆಗೆ ಅಲಂಕಾರಿಕ ಮೀನು ಹಾಗೂ ಅಕ್ವೇರಿಯಂ, ಅಜ್ಜಿ ತಯಾರಿ ಮಾಡಿಕೊಟ್ಟ ಉಪ್ಪಿನ ಕಾಯಿ ಸೇರಿದಂತೆ ನಾಟಿ ಕೋಳಿಯ ಮೊಟ್ಟೆ ಹೀಗೆ ನಾನಾ ವಸ್ತುಗಳು ಮಾರಾಟಗೊಂಡವು.