ನಕ್ಕುನಲಿಸಿದ ಬಾವ - ಕೌತುಕ ಸೃಷ್ಟಿಸಿದ ಮಾತನಾಡುವ ಗೊಂಬೆ
ಮಡಿಕೇರಿ, ಅ. ೧: ನಗರದ ಕಲಾಸಂಭ್ರಮ ವೇದಿಕೆಗೆ ನಿನ್ನೆ ಬಾವ ಬಂದಿದ್ದರು. ಜೊತೆಗೆ ಮಾತನಾಡುವ ಗೊಂಬೆಯೂ ಬಂದಿತ್ತು.!
ಹೌದು..ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಮಂಗಳವಾದ ಸು ಫ್ರಂ ಸೋ ಸಿನಿಮಾದಲ್ಲಿ ಬರುವ ಬಾವ ಪಾತ್ರಧಾರಿ ಪುಷ್ಪರಾಜ್ ಬೊಳ್ಳಾರ್ ಆಗಮಿಸಿ ಹಾಸ್ಯದ ಕಚಗುಳಿ ಇಟ್ಟರು. ಇವರನ್ನು ನೋಡಲೆಂದು ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ವೇದಿಕೆಗೆ ಇವರು ಕಾಲಿಡುತ್ತಿದ್ದಂತೆ ಶಿಳ್ಳೆ, ಚಪ್ಪಾಳೆಗಳ ಸ್ವಾಗತ ಜನರಿಂದ ಕೇಳಿ ಬಂತು. ಸಿನಿಮಾದಲ್ಲಿ ಬರುವ ಸನ್ನಿವೇಶವನ್ನು ಕೊಂಚ ಬದಲಾಯಿಸಿ ಮಾಡಿದ ಕಿರುನಾಟಕ ಪ್ರೇಕ್ಷಕರನ್ನು ನಕ್ಕುನಲಿಸುವಂತೆ ಮಾಡಿತು. ಸಿನಿಮಾದ ಡೈಲಾಗ್ವೊಂದನ್ನು ಹೇಳಿ ಜನರನ್ನು ಬಾವ ಪುಷ್ಪರಾಜು ರಂಜಿಸಿದರು.
ಇವರೊಂದಿಗೆ ಸು ಫ್ರಂ ಸೋ ಸಿನಿಮಾದಲ್ಲಿ ಬರುವ ನಳಿನಿ ಪಾತ್ರಧಾರಿ ಸುಮಿತ್ರ, ರಾಜೇಶ್ ಬಂದ್ಯೋಡ್, ಪದ್ಮನಾಭ ಸೇರಿದಂತೆ ಮಡಿಕೇರಿಯ ಪಿ.ಎಂ. ರವಿ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸದಸ್ಯ ವಿನೋದ್ ಮೂಡಗದ್ದೆ ಅವರು ಕೂಡ ಅಭಿನಯ ಮಾಡಿದರು.
ಮೈಸೂರಿನ ಸುಮಾ ರಾಜಕುಮಾರ್ ಅವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮವೂ ಹಾಸ್ಯದ ಹೊನಲು ಹರಿಸಿತು. ಮಾತನಾಡುತ್ತಿದ್ದ ಗೊಂಬೆಯನ್ನು ಜನ ಕುತೂಹಲ ಭರಿತವಾಗಿ ವೀಕ್ಷಿಸಿದರು.
ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್, ನಾಟ್ಯಕಲಾ, ಕುಶಾಲನಗರದ ಡ್ರೀಮ್ ಕ್ಯಾರ್ಸ್ ತಂಡ ಸೇರಿದಂತೆ ವಿವಿಧ ತಂಡ, ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಂದ ನಡೆದ ನೃತ್ಯ ಕಾರ್ಯಕ್ರಮಗಳು ಜನಮನ ರಂಜಿಸಿದವು.