ಗೋಣಿಕೊಪ್ಪಲು, ಅ. ೧: ಖ್ಯಾತ ಗಾಯಕಿ ಅನನ್ಯ ಭಟ್ ತನ್ನ ಧ್ವನಿಯ ಮೂಲಕವೇ ಗಾನ ಲೋಕವನ್ನು ಸೃಷ್ಟಿಸಿ ಜನರು ತಲೆದೂಗುವಂತೆ ಮಾಡಿದರು.

ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಪಟ್ಟಣದ ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನನ್ಯ ಭಟ್ ಮತ್ತು ತಂಡ ನಡೆಸಿದ ಗಾನ ವೈಭವ ಜನರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾ ಗೀತೆಯೊಂದಿಗೆ ಜಾನಪದ ಗೀತೆಗಳಿಗೂ ಅನನ್ಯ ಧ್ವನಿಯಾದರು. ಇವರೊಂದಿಗೆ ಹಿನ್ನೆಲೆ ಗಾಯಕ ಅನಿರುದ್ದ್ ಶಾಸ್ತಿç, ಅಭಿಷೇಕ್ ಕೂಡ ಹಾಡಿನ ಮೂಲಕ ಮೋಡಿ ಮಾಡಿದರು. ಲೈವ್ ಬ್ಯಾಂಡ್ ಗಾನ ವೈಭವದ ಮೆರುಗನ್ನು ಹೆಚ್ಚಿಸಿತು.

ಗಜವದನ ಹೇರಂಭ, ನಾ ನಿನ್ನ ಮರೆಯಲಾರೆ, ಸೊಜುಗಾದ ಸೂಜಿ ಮಲ್ಲಿಗೆ, ಕೆಜಿಎಫ್ ಸಿನಿಮಾ ಮೆಹಬೂಬ, ಈ ಬಣ್ಣದ ಬುಗುರಿ ಹೀಗೆ ನಾನಾ ಹಾಡುಗಳನ್ನು ಹಾಡಿ ಗಾಯಕರು ಮನರಂಜಿಸಿದರು.

ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆ ನಾಗರಹೊಳೆ ಇವರು ನಡೆಸಿಕೊಟ್ಟ ಜೇನು ಕುರುಬರ ಹಾಡು ಹಾಗೂ ನೃತ್ಯ ಕಾರ್ಯಕ್ರಮ ಜನಮನ ಗೆದ್ದಿತು.