ಗೋಣಿಕೊಪ್ಪಲು, ಸೆ. ೨೧: ವಿಜಯ ದಶಮಿಯಂದು ನಡೆಯುವ ಶೋಭಯಾತ್ರೆಯಲ್ಲಿ ದಶಮಂಟಪಗಳು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಮೂಲಕ ದಸರಾ ಜನೋತ್ಸವ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕೆಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ದಿನೇಶ್ ಕುಮಾರ್ ದಶಮಂಟಪಗಳ ಅಧ್ಯಕ್ಷರುಗಳಿಗೆ ಸಲಹೆ ನೀಡಿದರು.

ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಸಭಾಂಗಣದಲ್ಲಿ ದಶಮಂಟಪಗಳ ಅಧ್ಯಕ್ಷರುಗಳಿಗೆ ಪೊಲೀಸ್ ಇಲಾಖೆಯಿಂದ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪ ದಸರಾ ಜನೋತ್ಸವದ ಅಂತಿಮ ಶೋಭಾಯಾತ್ರೆಯಲ್ಲಿ ದಶಮಂಟಪಗಳು ಭಾಗವಹಿಸುವ ಸಂದರ್ಭ ಇಲಾಖೆಯ ಹಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ನಿಗದಿತ ಸಮಯದಲ್ಲಿ ಮಂಟಪಗಳನ್ನು ಹೊರಡಿಸುವುದು ಅಗತ್ಯವಿರುವ ಕಡೆಯಲ್ಲಿ ಕಥಾ ಸಾರಾಂಶವನ್ನು ಜನರಿಗೆ ತೋರಿಸುವುದು, ಬಹುಮುಖ್ಯವಾಗಿ ಮಂಟಪಗಳಲ್ಲಿ ಧ್ವನಿ ವರ್ಧಕಗಳನ್ನು ನಿಗದಿತ ಶಬ್ದದಲ್ಲಿ ಬಳಸಬೇಕು. ಧ್ವನಿವರ್ಧಕ ಬಳಸಲು ಇಲಾಖೆಯ ವತಿಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು.

ಕೊಡಗಿನ ಜನತೆ ಶಿಸ್ತಿನ ಸಿಪಾಯಿಗಳಾಗಿದ್ದು, ಕಾನೂನಿಗೆ ಹೆಚ್ಚಿನ ಗೌರವ ನೀಡುತ್ತಾ ಬಂದಿದ್ದಾರೆ. ಸಂವಿಧಾನದ ಅಡಿಯಲ್ಲಿ ಕಾನೂನು ರಚನೆಯಾಗಿರುವುದರಿಂದ ಇದನ್ನು ಪಾಲಿಸುವುದು ನಮ್ಮ ಆದ್ಯತೆಯಾಗಿದೆ. ಸಮಯದ ಮಿತಿಯೊಳಗೆ ದಶಮಂಟಪಗಳು ತಮ್ಮ ಕಾರ್ಯಕ್ರಮವನ್ನು ಮುಗಿಸಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಒತ್ತು ನೀಡದೇ ನಮ್ಮದೇ ಆದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಯುವ ಜನತೆಗೆ ಮಾರ್ಗದರ್ಶಕರಾಗಿ ದಶಮಂಟಪಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರ ಸಹಕಾರವಿಲ್ಲದೆ ಕಾನೂನು ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ.

ಪೊಲೀಸರಿಗೆ ಯಾವುದೇ ತರದ ಒತ್ತಡಗಳಿಲ್ಲ. ಶಬ್ದ ಮಾಲಿನ್ಯ ವಿಚಾರದಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ನವರಾತ್ರಿಯಂದು ಮಧ್ಯಾಹ್ನದಿಂದಲೇ ಜನಸಾಗರ ನಗರಕ್ಕೆ ಹರಿದು ಬರುವುದರಿಂದ ದಶಮಂಟಪಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಪ್ರತಿ ಮಂಟಪದಲ್ಲಿ ಸ್ವಯಂ ಸೇವಕರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಹಲವು ಸಲಹೆಗಳನ್ನು ದಿನೇಶ್ ಕುಮಾರ್ ನೀಡಿದರು.

ವೀರಾಜಪೇಟೆ ಡಿ.ವೈ.ಎಸ್ಪಿ. ಮಹೇಶ್ ಕುಮಾರ್ ಮಾತನಾಡಿ ಪೊಲೀಸ್ ಇಲಾಖೆಯೊಂದಿಗೆ ದಶಮಂಟಪದ ಅಧ್ಯಕ್ಷರುಗಳ ಸಭೆಯನ್ನು ನಡೆಸುವ ಮೂಲಕ ಹಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಮತ್ತೊಂದು ಸಭೆಗಳನ್ನು ಅಗತ್ಯವಿದ್ದಲ್ಲಿ ಆಯೋಜಿಸುತ್ತೇವೆ. ಇಲಾಖೆಯೊಂದಿಗೆ ಸಹಕರಿಸುವ ಮೂಲಕ ಕಾನೂನನ್ನು ಪಾಲಿಸಲು ಸರ್ವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಶಿವರಾಜ್ ಮುಧೋಳ್ ಮಾತನಾಡಿ, ನವರಾತ್ರಿ ಅಂತಿಮ ದಿನದಂದು ಪ್ರತಿ ಮಂಟಪಗಳಿಗೆ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ನಿಗಧಿತ ಸಮಯದಲ್ಲಿ ಮಂಟಪಗಳು ಆಗಮಿಸಿ ಬಸ್ ನಿಲ್ದಾಣದ ಮೂಲಕ ಮುಂಜಾನೆ ೫ ಗಂಟೆಯ ವೇಳೆಗೆ ಹಾದು ಹೋಗಬೇಕು. ದಶಮಂಟಪಗಳು ರಸ್ತೆಯನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ಶಬ್ದ ಮಾಲಿನ್ಯ ಸಂಬAಧ ಅಧಿಕಾರಿಗಳು ತಮ್ಮ ಮಂಟಪದ ಬಳಿ ಆಗಮಿಸಿ ಅವರು ನೀಡುವ ವರದಿಯ ಆಧಾರದಲ್ಲಿ ಅಗತ್ಯವಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದರು.

ದಶಮAಟಪದ ಅಧ್ಯಕ್ಷರಾದ ಶಾಜಿ ಅಚ್ಚುತ್ತನ್ ಮಾತನಾಡಿ ಸಾರ್ವಜನಿಕರ ಸಹಕಾರದಿಂದ ದಶಮಂಟಪಗಳು ಉತ್ತಮ ರೀತಿಯಲ್ಲಿ ಮಂಟಪಗಳನ್ನು ಹೊರ ತರುವ ಮೂಲಕ ಸಾರ್ವಜನಿಕರಿಗೆ ಶೋಭಾಯಾತ್ರೆಯನ್ನು ತೋರಿಸಲಿವೆ. ಮಂಟಪಗಳಲ್ಲಿ ೫ಲಕ್ಷ ವೆಚ್ಚದಲ್ಲಿ ಡಿಜೆಗಳನ್ನು ಅಳವಡಿಸುವುದಿಲ್ಲ. ೧ ಲಕ್ಷದ ಒಳಗೆ ಸೌಂಡ್ಸ್ ಸಿಸ್ಟಮ್‌ಅನ್ನು ಅಳವಡಿಸುತ್ತೇವೆ. ಇದಕ್ಕೆ ಇಲಾಖೆಯವರು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ನವರಾತ್ರಿ ದಿನದಂದು ಮಧ್ಯಾಹ್ನ ೨ ಗಂಟೆಗೆ ಆರ್.ಎಂ.ಸಿ. ಸಭಾಂಗಣದಿAದ ಸ್ತಬ್ಧ ಚಿತ್ರದ ಶೋಭಾಯಾತ್ರೆಯು ಆರಂಭಗೊಳ್ಳಲಿದೆ. ಸಂಜೆ ೬ ಗಂಟೆಯ ಒಳಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿ ಬಹುಮಾನ ವಿತರಣೆ ಮಾಡಲಾಗುವುದೆಂದು ನಾಡಹಬ್ಬ ದಸರಾ ಸಮಿತಿಯ ಅಧ್ಯಕ್ಷರಾದ ಪ್ರಭಾಕರ್ ನೆಲ್ಲಿತ್ತಾಯ ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು.

ಕಾರ್ಯಕ್ರಮದ ಬಗ್ಗೆ ಯುವ ದಸರಾ ಸಮಿತಿಯ ಅಧ್ಯಕ್ಷರಾದ ಕೆ.ರಾಜೇಶ್, ಸ್ನೇಹಿತರ ಬಳಗ ಸಮಿತಿಯ ಕಾರ್ಯಧ್ಯಕ್ಷರಾದ ಕಾಡ್ಯಮಾಡ ಚೇತನ್ ಮಾತನಾಡಿ ಶೋಭಾಯಾತ್ರೆಯ ವೇಳೆ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಯಿಂದಾಗಿ ಮಂಟಪಗಳು ರಸ್ತೆ ಮಧ್ಯದಲ್ಲಿ ನಿಂತು ತಡವಾಗುತ್ತಿದೆ. ಈ ಬಾರಿ ನಿಗದಿತ ಸಮಯದಲ್ಲಿಯೇ ಬಸ್ ನಿಲ್ದಾಣಕ್ಕೆ ಆಗಮಿಸಿ ಸಾರ್ವಜನಿಕರಿಗೆ ಕಥಾ ಪ್ರಸಂಗವನ್ನು ತೋರಿಸಲಾಗುತ್ತದೆ. ಪೊಲೀಸರು ದಶಮಂಟಪಗಳೊAದಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ೧೧ ದಿನಗಳ ಕಾಲ ನಡೆಯುವ ದಸರಾ ಜನೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸುತ್ತಾರೆ. ಅಂತಿಮ ದಿನದಂದು ದಶಮಂಟಪಗಳು ಉತ್ತಮ ರೀತಿಯಲ್ಲಿ ಶೋಭಾಯಾತ್ರೆ ನಡೆಸಲಿವೆ. ಉಮಾಮಹೇಶ್ವರಿ ದೇವಾಲಯದಿಂದ ಕಾವೇರಿ ದಸರಾ ಸಮಿತಿಯ ಮಂಟಪವು ೯ ಗಂಟೆಗೆ ಹೊರಡಲಿದೆ. ನಿಯಮದಂತೆ ಇತರ ಮಂಟಪಗಳು ಸರತಿ ಸಾಲಿನಲ್ಲಿ ಆಗಮಿಸಿ ದಸರಾ ಯಶಸ್ಸಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ನವಚೇತನ ದಸರಾ ಸಮಿತಿ, ಶಾರದಾಂಭ ದಸರಾ ಸಮಿತಿ ಅರುವತ್ತೋಕ್ಲು, ಸರ್ವರ ದಸರಾ ಸಮಿತಿ, ಸ್ನೇಹಿತರ ಬಳಗ ಕೊಪ್ಪ, ನಮ್ಮ ದಸರಾ ಸಮಿತಿ ಹರಿಶ್ಚಂದ್ರಪುರ, ಕಾಡ್ಲಯ್ಯಪ್ಪ ದಸರಾ ಸಮಿತಿ, ಕೈಕೇರಿ ಭಗವತಿ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೋಣಿಕೊಪ್ಪ ಪ್ರಬಾರ ಠಾಣಾಧಿಕಾರಿ ನವೀನ್ ಕುಮಾರ್ ಸ್ವಾಗತಿಸಿ ವಂದಿಸಿದರು.