ಪೊನ್ನಂಪೇಟೆ, ಸೆ. ೨೧: ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದ ಪೆಮ್ಮಂಡ ಕುಟುಂಬಸ್ಥರ ವತಿಯಿಂದ ಪ್ರಥಮ ಬಾರಿಗೆ ಅಯೋಜಿಸಲಾಗಿರುವ ೨೦೨೫ ನೇ ಸಾಲಿನ ಕೊಡವ ಕುಟುಂಬಗಳ ನಡುವಿನ ‘ತೋಕ್ ನಮ್ಮೆ’ ಅಕ್ಟೋಬರ್ ೧೯ ಹಾಗೂ ೨೦ ರಂದು ಪೊನ್ನಂಪೇಟೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆಯಲಿದೆ ಎಂದು ಪೆಮ್ಮಂಡ ಕುಟುಂಬಸ್ಥರು ತಿಳಿಸಿದ್ದಾರೆ. ಪೊನ್ನಂಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೆಮ್ಮಂಡ ಕುಟುಂಬದ ಹಿರಿಯರಾದ ಪೆಮ್ಮಂಡ ಕೆ. ಪೊನ್ನಪ್ಪ ಅವರು, ಈ ಕುರಿತು ಮಾಹಿತಿ ನೀಡಿ, ಜೂನ್ ತಿಂಗಳಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದ ತೋಕ್ ನಮ್ಮೆಯನ್ನು ಕಾರಣಾಂತರದಿAದ ಮುಂದೂಡಲಾಗಿತ್ತು. ಇದೀಗ ಅಕ್ಟೋಬರ್ ತಿಂಗಳ ೧೯ ಹಾಗೂ ೨೦ ರಂದು ನಡೆಸಲು ತೀರ್ಮಾನಿಸಲಾಗಿದೆ.

ಹಲವು ತಿಂಗಳುಗಳ ಹಿಂದೆ ಈ ಹಬ್ಬವನ್ನು ನಡೆಸಬೇಕೆಂದು ಕುಟುಂಬದವರೆಲ್ಲ ಸೇರಿ ತೀರ್ಮಾನಿಸಿದ್ದರು. ಆದರೆ ಮಳೆಯ ಕಾರಣದಿಂದ ಮುಂದೂಡಲಾಯಿತು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದು, ಪ್ರತಿ ಕೊಡವ ಕುಟುಂಬದವರು ಸಹಕರಿಸಬೇಕು. ಕೊಡಗಿನ ಎಲ್ಲಾ ಕೊಡವ ಕುಟುಂಬಸ್ಥರ ಐನ್ ಮನೆಗಳನ್ನು ಪತ್ತೆ ಹಚ್ಚಿ ಪಟ್ಟೆದಾರರ ಮೂಲಕ ಆಮಂತ್ರಣ ಪತ್ರವನ್ನು ನೀಡಲಾಗುವುದು. ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದರು.

ಪೆಮ್ಮಂಡ ಕುಟುಂಬಸ್ಥರ ಅಧ್ಯಕ್ಷ ಪಿ.ಅರುಣ ಅವರು ಮಾತನಾಡಿ, ಮೊದಲ ಬಾರಿಗೆ ಪೆಮ್ಮಂಡ ಕುಟುಂಬದವರು ಸೇರಿ ತೋಕ್ ನಮ್ಮೆ ಹಮ್ಮಿಕೊಂಡಿದ್ದೇವೆ. ಕೊಡವ ಕುಟುಂಬದವರು ಇದಕ್ಕೆ ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ರೋಲಿಂಗ್ ಟ್ರೋಫಿ ಇಡಲಾಗಿದ್ದು, ಹಲವಾರು ಕುಟುಂಬಗಳು ಈಗಾಗಲೇ ಸ್ಪರ್ಧೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದು, ಮುಂದೆಯೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ತಂಡಗಳು ಹೆಸರು ನೋಂದಾವಣೆ ಮಾಡಿಕೊಳ್ಳಬೇಕಾಗಿ ಮನವಿ ಮಾಡಿಕೊಂಡರು.

ತೋಕ್ ನಮ್ಮೆ ಕ್ರೀಡಾಕೂಟದ ಅಧ್ಯಕ್ಷ ಪೆಮ್ಮಂಡ ಮಂಜು ಬೋಪಣ್ಣ ಅವರು ಮಾತನಾಡಿ, ಮೊದಲ ಬಾರಿಗೆ ಈ ತೋಕ್ ನಮ್ಮೆ ಆಯೋಜಿಸಿದ್ದು ಇದರಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಬಹುದು. ಒಂದು ಮನೆಯಿಂದ ಇಬ್ಬರು ಸದಸ್ಯರಂತೆ ನಾಲ್ಕು ತಂಡಗಳು ಭಾಗವಹಿಸಬಹುದು. ಈಗಾಗಲೇ ೧೫೦ ತಂಡಗಳು ನೋಂದಣಿಯಾಗಿದ್ದು, ನೋಂದಣಿ ಮಾಡಿಕೊಳ್ಳಲು ಅಕ್ಟೋಬರ್ ೧೫ ಅಂತಿಮ ದಿನವಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮದೇ ಕೋವಿಯನ್ನು ತೆಗೆದುಕೊಂಡು ಬರಬೇಕು ಹಾಗೂ ಕೋವಿಯನ್ನು ಬಳಸುವಾಗ ಯಾವುದೇ ತೊಂದರೆಯಾಗದAತೆ, ನಿಯಮಕ್ಕೆ ಅನುಸಾರವಾಗಿ ಬಳಸಬೇಕೆಂದು ಮನವಿ ಮಾಡಿದರು. ಕುಟುಂಬ ಸದಸ್ಯ ರಾಜ್ ಕುಶಾಲಪ್ಪ ಮಾತನಾಡಿ, ತೋಕ್ ನಮ್ಮೆಗೆ ಎಲ್ಲಾ ಕೊಡವ ಕುಟುಂಬದವರು ಸಹಕಾರ ನೀಡಬೇಕೆಂದು ಕೋರಿದರು. ಹೆಚ್ಚಿನ ಮಾಹಿತಿಗಾಗಿ ಬೆಲ್ಲು ಬಿದ್ದಪ್ಪ -೯೬೮೬೯೬೨೧೯೯, ಕರಣ್ - ೭೩೪೯೭೧೪೬೪೯ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಪೆಮ್ಮಂಡ ಕುಟುಂಬದ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್. ಕಾಶಿ ಕರುಂಬಯ್ಯ, ಪೆಮ್ಮಂಡ ಪಿ. ಗಿಣಿ ನಾಚಪ್ಪ, ಪೆಮ್ಮಂಡ ಎ. ಬ್ಯಾಟ್ನಿ ಕಂಡೇಶ್ ಕುಮಾರ್, ಪೆಮ್ಮಂಡ ಟಿ. ಧರ್ಮಜ, ಪೆಮ್ಮಂಡ ಸೋಮಯ್ಯ ಉಪಸ್ಥಿತರಿದ್ದರು.