ಮಡಿಕೇರಿ, ಸೆ. ೨೧: ಮಡಿಕೇರಿಯ ಐತಿಹಾಸಿಕ ದಸರಾ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಉತ್ಸವದಲ್ಲಿ ನಗರದ ಪ್ರಮುಖ ನಾಲ್ಕು ಶಕ್ತಿ ದೇವತೆಗಳ ಕರಗಗಳು ಪ್ರಮುಖ ಪಾತ್ರ ವಹಿಸುತ್ತವೆ. ನಾಲ್ಕು ಕರಗಗಳು ತನ್ನದೇ ಆದ ಚರಿತ್ರೆಯನ್ನು ಹೊಂದಿವೆ.

ಪ್ರತಿವರ್ಷ ದಸರಾ ಉತ್ಸವದ ಸಂದರ್ಭ ಮಹಾಲಯ ಅಮಾವಾಸ್ಯೆಯ ಮರುದಿನ ಆರಂಭವಾಗುವ ಕರಗ ಉತ್ಸವದಲ್ಲಿ ಪಾಲ್ಗೊಳ್ಳುವ ಕರಗಗÀಳÀನ್ನು ಕಟ್ಟುವುದರ ಕುರಿತು ಒಂದು ಕಿರು ಪರಿಚಯ ಇಲ್ಲಿದೆ.

ಮಡಿಕೇರಿ ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ದಂಡಿನ ಮಾರಿಯಮ್ಮ ದೇವಾಲಯ, ಕೋಟೆ ಮಾರಿಯಮ್ಮ ದೇವಾಲಯ ಮತ್ತು ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಕರಗಗಳು ವiಹಾಲಯ ಅಮಾವಾಸ್ಯೆಯ ಮರುದಿನ ಪೂಜಾ ಕೈಂಕರ್ಯದ ಬಳಿಕ ನಗರ ಪ್ರದಕ್ಷಣೆಗೆೆ ಹೊರಡುವುದು ಪ್ರತೀತಿ.

ಮಹಾಲಯ ಅಮಾವಾಸ್ಯೆಯ ಮರುದಿನ ರಾಹುಕಾಲ ಕಳೆದು ಆಯಾ ನಾಲ್ಕು ಶಕ್ತಿ ದೇವತೆಗಳ ದೇವಾಲಯಗಳಲ್ಲಿ ಬೆಳಗಿನ ಸಮಯದಲ್ಲಿ ಕರಗಗಳನ್ನು ಹೊರಡಿಸುವ ಪ್ರಯುಕ್ತ ಗಣಪತಿ ಹೋಮ ಮತ್ತು ಪೂಜೆ ನಂತರ ದೇವಿಯ ಮುಖವಾಡ ಮತ್ತು ಅಗತ್ಯ ಬೆಳ್ಳಿಯ ಆಭರಣಗಳನ್ನು ಇಟ್ಟು ಶುದ್ಧ ಮಾಡಲಾಗುತ್ತದೆ. ಕರಗ ಕಟ್ಟಲು ಬೇಕಾದ ಪೂಜಾ ಸಾಮಗ್ರಿಗಳಾದ ಅರಸಿಣ, ಕುಂಕುಮ, ವೀಳ್ಯದೆಲೆ, ಕಾದೋಲೆ, ಕರಿಮಣಿ, ಬಳೆ, ಕನ್ನಡಿ, ಅರಸಿಣ ಪಂಚೆ, ಮಾವಿನ ಕೊಡಿ ಎಲೆ, ತೆಂಗಿನ ಕಾಯಿಗಳು, ಬಾಳೆಹಣ್ಣು ಹೀಗೆ ವಿವಿಧ ಪೂಜಾ ಸಾಮಗ್ರಿಗಳನ್ನು ಸೇರಿಸಿ ಹೊಸ ಕುಕ್ಕೆಯಲ್ಲಿಡಲಾಗುತ್ತದೆ.

ಆನಂತರ ಕರಗಗಳನ್ನು ಹೊರುವ ಅರ್ಚಕರುಗಳ ಮೂಲಕ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ ವಾದ್ಯಘೋಷ್ಠಿಯೊಂದಿಗೆ ದೇವಾಲಯಗಳಿಂದ ಪಂಪಿನಕೆರೆಯತ್ತ ಹೊರಡಲಾಗುತ್ತದೆ.

ಪಂಪಿನಕೆರೆಯಲ್ಲಿ ಕರಗ ತಯಾರಿಕೆಯ ಬಿಂದಿಗೆಗೆ ಹಸಿ ಮರಳು, ಕಾದೋಲೆ, ಕರಿಮಣಿ, ಬಳೆ, ಕನ್ನಡಿ, ವೀಳ್ಯದೆಲೆ, ನಿಂಬೆಹಣ್ಣು, ಅರಿಸಿಣ, ಕುಂಕುಮ, ೫ ರೂ. ನಾಣ್ಯ, ಹಾಕಲಾಗುವುದು, ಬಳಿಕ ಬಿಂದಿಗೆಯ ಮೇಲ್ಭಾಗದಲ್ಲಿ ಮಾವಿನ ಎಲೆ, ತೆಂಗಿನಕಾಯಿ ಇಟ್ಟು ಕಳಸ ಕಟ್ಟುವರು. ನಂತರ ಹೂವುಗಳಿಂದ ಅಲಂಕಾರ ಮಾಡಲಾಗುವುದು. ಇದೇ ಸಂದರ್ಭ ಬಿದಿರಿನ ಗೂಡನ್ನು ಬಿಂದಿಗೆಗೆ ಸೇರಿಸಿ ಬಾಳೆಲೆಯಿಂದ ಅದನ್ನು ಮುಚ್ಚಿ ಸುತ್ತಳಿ ಹಗ್ಗದಿಂದ ಬಿಗಿದು ನಂತರ ಆಯಾ ಕರಗಗಳಿಗೆ ಅಲಂಕಾರಕ್ಕೆ ಅಗತ್ಯವಿರುವ ಮಲ್ಲಿಗೆ ಅಥವಾ ಸೇವಂತಿಗೆ ಹೂವುಗಳನ್ನು ಸುತ್ತಿ ಮೇಲ್ಭಾಗದಲ್ಲಿ ದೇವಿಯ ಬೆಳ್ಳಿಯ ಮುಖವಾಡ ಮತ್ತು ಆಭರಣಗಳÀನ್ನು ತೊಡಿಸಿ ಕರಗಗಳನ್ನು ಸಿದ್ದಪಡಿಸಲಾಗುವುದು. ಬಿಂದಿಗೆಯ ನಾಲ್ಕು ಸುತ್ತ ದಂಡ ಮಾಲೆಯನ್ನು ತೊಡಿಸಿ ಇಳಿಬಿಡುವರು. ಗುಲಾಬಿಗಳನ್ನು ಬಿಂದಿಗೆಗೆ ಅಗತ್ಯವಿರುವಲ್ಲಿಗೆ ಅಳವಡಿಸುವುದು. ಕರಗ ಹೊರುವ ಅರ್ಚಕರು ಸ್ನಾನ ಮಾಡಿ ಮಡಿವಸ್ತç ಉಟ್ಟು ಕರಗಗಳಿಗೆ ಪುರೋಹಿತರ ಮೂಲಕ ಪೂಜೆ ಸಲ್ಲಿಸುವರು.

ಕರಗಗಳನ್ನು ಹೊರಡಿಸಲು ಕಾರಣ?

ಸುಮಾರು ೨೦೦ ವರ್ಷಗಳ ಹಿಂದೆ ಕೊಡಗಿನಲ್ಲಿ ಭಯಾನಕ ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತಿದ್ದ ಸಂದರ್ಭ ಪ್ರತಿದಿನ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿತ್ತು. ಇದರಿಂದ ಭಯಗೊಂಡ ಜನರು ಕೊಡಗಿನ ತಮ್ಮ ಊರುಗಳನ್ನು ತೊರೆಯುತ್ತಿದ್ದುದರಿಂದ ಊರಿಗೆ ಊರೇ ಖಾಲಿಯಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕರು ಆ ಸಂದರ್ಭ ಮಡಿಕೇರಿ ನಗರದ ನಾಯಕರು ಆಯಾ ದೇವಾಲಯಗಳ ಭಜನಾ ಮಂಡಳಿಯವರು ದೇವರುಗಳ ಮೊರೆ ಹೋದ ಸಂದರ್ಭ ಸಾಕ್ಷಾತ್ ದೇವಿಯೇ ಪ್ರತ್ಯಕ್ಷಳಾಗಿ ಪ್ರತಿ ಮಹಾಲಯ ಅಮಾವಾಸ್ಯೆಯ ಮರುದಿನ ನಗರದ ನಾಲ್ವರು ಅಕ್ಕ-ತಂಗಿಯರ ಕಳಸ ಹೊತ್ತು ೧೦ ದಿನಗಳ ಕಾಲ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಭಕ್ತರು ನೀಡುತ್ತಿದ್ದ ಪೂಜೆಯನ್ನು ಸ್ವೀಕರಿಸಿ ಅವರ ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸಿದರೆ ಮಾತ್ರ ಈ ಭಯಾನಕ ರೋಗ ಮಂಜಿನAತೆ ಕರಗಿ ನೀರಾಗುವುದು ಎಂದ ಹಿನ್ನೆಲೆಯಲ್ಲಿ ದೇವಿಯ ನುಡಿಯಂತೆ ಊರಿನ ಹಿರಿಯ ನಾಗರಿಕರು ಭಜನಾ ಮಂಡಳಿಗಳಲ್ಲಿ ಸೇರುತ್ತಿದ್ದರು. ಹೀಗೆ ಅಂದಿನಿAದ ಕರಗಗಳನ್ನು ಹೊರಡಿಸಲು ಸಿದ್ಧರಾದರು.

ಈ ಹಿಂದೆ ಹಾಲೇರಿ ವಂಶದ ರಾಜರು ನವರಾತ್ರಿ ಸಂದರ್ಭ ವಿಜಯದಶಮಿ ದಿನ ದಂಡಿನೊAದಿಗೆ ತೆರಳಿ ‘ಬನ್ನಿ’ ಕಡಿದು ಬರುತ್ತಿದ್ದರೆಂಬ ಪ್ರತೀತಿ ಇದೆ.

ಎಲ್ಲಾ ಕಾರ್ಯ ಮುಗಿದೊಡನೆ ಸಾಮೂಹಿಕವಾಗಿ ಪೂಜಾ ಕೈಂಕರ್ಯ ನಡೆದ ಬಳಿಕ ಕರಗವನ್ನು ಅರ್ಚಕರು ತಲೆಯಲ್ಲಿಡುತ್ತಿದ್ದರು. ಅಷ್ಟರಲ್ಲಾಗಲೇ ಅವರ ದೇಹವನ್ನು ದೇವತೆಗಳು ಆವರಿಸಿ ಎಲ್ಲಾ ದೇವತೆಗಳು ತಮಿಳಿನಲ್ಲಿ ಮಾತನಾಡುವರು. ರಾಜಮಾರ್ಗದತ್ತ ಹೆಜ್ಜೆ ಇಡುತ್ತಾ ಮುಂದೆ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿರುವ ಮನೆ ಮಂದಿ ಭಕ್ತಿಯಿಂದ ದೇವಿಯರಿಗೆ ಪೂಜೆ ಸಲ್ಲಿಸುವರು. ಕೆಲವು ವರ್ಷಗಳ ಹಿಂದೆ ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯ ಪೂಜೆ ಸ್ವೀಕರಿಸಿ ಮುಂದೆ ಪೇಟೆ ಶ್ರೀ ರಾಮ ಮಂದಿರಕ್ಕೆ ತೆರಳಿ ಅಲ್ಲಿ ಕೆಲ ಸಮಯ ವಿಶ್ರಾಂತಿ ಪಡೆದು ಬಳಿಕ ಅವರವರ ದೇವಾಲಯಗಳಿಗೆ ಕರಗಗಳು ತೆರಳುತ್ತಿದ್ದವು. ಈಗ ಪಂಪಿನಕೆರೆಯಿAದ ಹೊರಟು ಮನೆಗಳಿಂದ ಪೂಜೆ ಸ್ವೀಕರಿಸುತ್ತಾ ಬರುತ್ತಿದ್ದಂತೆ ಶ್ರೀ ಕೋದಂಡರಾಮ ದೇವಾಲಯಕ್ಕೆ ತೆರಳಿ ಪೂಜೆ ಸ್ವೀಕರಿಸಿ ನಂತರ ಬಸವೇಶ್ವರ ದೇವಾಲಯಕ್ಕೆ ಬಂದು ಅಲ್ಲಿಂದ ಮೊದಲಿನಂತೆ ಚೌಡೇಶ್ವರಿ ದೇವಾಲಯಕ್ಕಾಗಿ ಮುಂದೆ ಪೇಟೆ ಶ್ರೀ ರಾಮ ಮಂದಿರದತ್ತ ತೆರಳುತ್ತವೆ.

ಮರುದಿನದಿಂದ ನವರಾತ್ರಿವರೆಗೆ ಕರಗಗಳು ನಗರದ ವಿವಿಧ ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ಪೂಜೆ ಸ್ವೀಕರಿಸುತ್ತದೆ.

-ಎಂ. ಶ್ರೀಧರ್ ಹೂವಲ್ಲಿ, ಫೋಟೋ : ಮನು ವಿಸ್ತಾರ