ಸೋಮವಾರಪೇಟೆ, ಸೆ. ೨೧: ಕೊಡಗು ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕಾಗಿ ಆಯ್ಕೆ ಪ್ರಕ್ರಿಯೆ ಸೋಮವಾರಪೇಟೆಯ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಿತು.
ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಅಂತರರಾಷ್ಟಿçÃಯ ಹ್ಯಾಂಡ್‌ಬಾಲ್ ಆಟಗಾರ ಗ್ರೀನಿಡ್ಜ್ ಡಿ. ಕುನ್ಹಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಆಟಗಾರರಿಗೆ ಸ್ಪೂರ್ತಿ ತುಂಬಿದರು.
ಕ್ರೀಡೆಯಿಂದಲೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಸತತ ಪರಿಶ್ರಮ ಹಾಗೂ ತೊಡಗಿಸಿಕೊಳ್ಳುವಿಕೆಯಿಂದ ಕ್ರೀಡೆಯಲ್ಲಿ ಸಾಧನೆ ಸಾಧ್ಯ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕು. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ ಎಂದರು. ಸಂತ ಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಅವಿನಾಶ್ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ, ಗ್ರೀನಿಡ್ಜ್ ಡಿ. ಕುನ್ಹಾ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್, ಸೋಮವಾರಪೇಟೆಯ ಬಿಟಿಸಿಜಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗುರುಪ್ರಸಾದ್, ಸೇಂಟ್ ಜೋಸೆಫ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಆರ್. ಶಿವಕುಮಾರ್ ಅವರನ್ನೊಳಗೊಂಡ ಸಮಿತಿಯು ಆಟಗಾರರ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿತು.
೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಕಬಡ್ಡಿ ಕ್ರೀಡೆಯಲ್ಲಿ ತಮ್ಮ ತಾಂತ್ರಿಕ ಕೌಶಲ್ಯ, ಶಕ್ತಿ ಮತ್ತು ತಂತ್ರಗಳನ್ನು ಪ್ರದರ್ಶಿಸಿದರು.