ಮಡಿಕೇರಿ, ಸೆ .೧೯ : ಮಡಿಕೇರಿ ದಸರಾ ಜನೋತ್ಸವಕ್ಕೆ ವಿಶೇಷ ಮೆರುಗು ನೀಡುವ ಉದ್ದೇಶದಿಂದ ದಸರಾ ದಶಮಂಟಪ ಸಮಿತಿ ದೀಪಾಲಂಕಾರ, ರಂಗೋಲಿ ಮತ್ತು ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಿದೆ.

ತಾ. ೨೨ ರಂದು ಕರಗೋತ್ಸವ ಆರಂಭಗೊಳ್ಳುವ ಸಂಜೆ ಮನೆ ಮತ್ತು ಅಂಗಡಿಗಳನ್ನು ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕರಿಸಬೇಕು. ಅಲ್ಲದೆ ಮನೆಗಳ ಮುಂದೆ ಸುಂದರವಾದ ವರ್ಣರಂಜಿತ ಚುಕ್ಕಿ ರಂಗೋಲಿಯನ್ನು ಬಿಡಿಸಬೇಕು. ಈ ಎರಡೂ ಸ್ಪರ್ಧೆಗಳ ವಿಜೇತರಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದು ದಸರಾ ದಶಮಂಟಪ ಸಮಿತಿಯ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಈ ಬಾರಿ ವಿಶೇಷ ಆಕರ್ಷಣೆಯಾಗಿ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತರು ಸಾಂಪ್ರದಾಯಿಕ ಉಡುಪಿನಲ್ಲಿ ಕುಟುಂಬದ ಸದಸ್ಯರ ಸಹಿತ ಸೆಲ್ಫಿ ತೆಗೆಯಬೇಕು. ವಿಜೇತ ಕುಟುಂಬಕ್ಕೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು. ಸೆಲ್ಫಿ ಸ್ಪರ್ಧೆಗಾಗಿ ಮೂರು ಸೆಲ್ಫಿ ಪಾಯಿಂಟ್‌ಗಳನ್ನು ನಿಗದಿ ಮಾಡಲಾಗಿದೆ. ಬನ್ನಿ ಮಂಟಪದ ಮುಂಭಾಗದ ಅಕ್ಷಯ ಲಾಡ್ಜ್, ಮಹದೇವಪೇಟೆಯ ಅರವಿಂದ್ ಜ್ಯುವೆಲ್ಲರಿ ಮತ್ತು ಸ್ಕೆöÊಗೋಲ್ಡ್ ಎದುರು ಸೆಲ್ಫಿ ತೆಗೆಯಬೇಕು ಎಂದು ಮಾಹಿತಿ ನೀಡಿದ್ದಾರೆ.

ಸೆಲ್ಫಿ ಪಾಯಿಂಟ್‌ನಲ್ಲಿ ಪೂರ್ಣ ಪ್ರಮಾಣದ ಫೋಟೋ ತೆಗೆದು ಸಮಿತಿ ನೀಡುವ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು ಎಂದು ತಿಳಿಸಿರುವ ಬಿ.ಎಂ. ಹರೀಶ್ ಅಣ್ವೇಕರ್ ಅವರು, ಸಾರ್ವಜನಿಕರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಡಿಕೇರಿ ದಸರಾ ಜನೋತ್ಸವದ ಆಕರ್ಷಣೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ಸವಿತಾ ಅರುಣ್ ೯೪೮೦೦೦೩೮೧೧, ಮಿನಾಜ್ ಪ್ರವೀಣ್ ೮೩೧೦೮೯೧೨೬೯, ರಜತ್ ಶೇಟ್ ೯೫೯೦೪೨೧೧೯೧, ಅನೀಶ್ ಅಣ್ವೇಕರ್ ೭೪೦೬೬೬೭೯೧೫, ಹೇಮಾ ಈಶ್ವರ್ ೯೪೪೮೧೧೯೯೬೯, ಅನಿತಾ ವೆಂಕಟೇಶ್ ೯೯೮೬೦೫೯೬೮೬, ಶುಭ ಶ್ರೀನಿವಾಸ್ ೮೧೪೭೪೧೮೭೫೬ ನ್ನು ಸಂಪರ್ಕಿಸಬಹುದಾಗಿದೆ.