ಸೋಮವಾರಪೇಟೆ,ಸೆ.೧೮: ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಗಳಿಗೆ ಅಭಿಯಂತರರು ನಿರಂತರ ಗೈರಾಗುತ್ತಿರುವುದು, ಅಮೃತ್-೨ ಯೋಜನೆಯಡಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯದಿರುವುದು, ಸಾಮಾನ್ಯ ಸಭೆಗೆ ಅಮೃತ್-೨ ಯೋಜನೆಯ ಅಭಿಯಂತರರು ಬಾರದೇ ಇರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸೋಮವಾರಪೇಟೆ ಪ.ಪಂ.ನ ಕೆಲ ಸದಸ್ಯರು ಸಭಾತ್ಯಾಗಕ್ಕೆ ಮುಂದಾಗಿ, ಅಧ್ಯಕ್ಷರು ಸಭೆಯನ್ನೇ ವಿಸರ್ಜಿಸಿದ ವಿದ್ಯಮಾನ ಪ.ಪಂ. ಸಭಾಂಗಣದಲ್ಲಿ ನಡೆಯಿತು.
ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ, ಪ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಅಭಿಯಂತರರ ಗೈರು ಹಾಜರಿಯ ಬಗ್ಗೆ ಸದಸ್ಯರುಗಳಾದ ಜೀವನ್, ಮೃತ್ಯುಂಜಯ, ಶೀಲಾ ಡಿಸೋಜ, ಡಿ.ಯು. ಕಿರಣ್, ವಿನಿ, ಶುಭಕರ್ ಸೇರಿದಂತೆ ಇತರರು ಅಧ್ಯಕ್ಷರನ್ನು ಪ್ರಶ್ನಿಸಿದರು.
ಪಂಚಾಯಿತಿಯ ಅಭಿಯಂತರ ಹೇಮಕುಮಾರ್ ಹಾಗೂ ಅಮೃತ್-೨ ಯೋಜನೆಯ ಅಭಿಯಂತರರು ಸಭೆಗೆ ಗೈರಾಗಿದ್ದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷೆ ಜಯಂತಿ ಅವರು, ನಿನ್ನೆ ರಾತ್ರಿಯವರೆಗೂ ಸಭೆಗೆ ಆಗಮಿಸುವುದಾಗಿ ಅಭಿಯಂತರರು ತಿಳಿಸಿದರು. ಇಂದು ಬೆಳಿಗ್ಗೆ ಅನಾರೋಗ್ಯದಿಂದ ಬರಲು ಆಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಅಮೃತ್-೨ ಯೋಜನೆಯ ಅಭಿಯಂತರರನ್ನು ಸಭೆಗೆ ಕರೆಸಲಾಗುವುದು ಎಂದು ಹೇಳಿದರು.
ಇದಕ್ಕೆ ಒಪ್ಪದ ಸದಸ್ಯರುಗಳು, ಸಭೆಯ ಕಾರ್ಯಸೂಚಿಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಇಟ್ಟಿರುವ ವಿಷಯಗಳು ಇಂಜಿನಿಯರಿAಗ್ ವಿಭಾಗಕ್ಕೆ ಒಳಪಡಲಿವೆ. ಅವರೇ ಇಲ್ಲದ ಮೇಲೆ ಸಭೆ ನಡೆಸಿ ಪ್ರಯೋಜನವಾದರೂ ಏನು? ಎಂದು ಪ್ರಶ್ನಿಸಿದರು. ಇದರೊಂದಿಗೆ ಅಮೃತ್-೨ ಯೋಜನೆಯ ಕಾಮಗಾರಿಯಿಂದಾಗಿ ಪಟ್ಟಣದ ರಸ್ತೆಗಳೆಲ್ಲ ಗುಂಡಿ ಬಿದ್ದಿವೆ. ವಾಹನ ಸವಾರರು, ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ. ಕನಿಷ್ಟ ಗುಂಡಿ ಮುಚ್ಚುವ ಕೆಲಸವೂ ಆಗಿಲ್ಲ. ಸಭೆಗೆ ಅಧಿಕಾರಿಗಳೂ ಬಂದಿಲ್ಲ. ನಾವು ನಾವೇ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯುತ್ತದೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳೇ ಇಲ್ಲದ ಮೇಲೆ ಸಭೆ ನಡೆಸಿ ಪ್ರಯೋಜನವಾದರೂ ಏನು? ಈ ಕಾರಣದಿಂದ ಸಭೆಯನ್ನು ಮುಂದೂಡಿ. ಅಧಿಕಾರಿಗಳು ಬಂದ ನಂತರ ಸಭೆ ನಡೆಸಬಹುದು ಎಂದು ಸದಸ್ಯ ಜೀವನ್, ಮೃತ್ಯುಂಜಯ ಸೇರಿದಂತೆ ಇತರರು ಹೇಳಿದರು.
ಈ ಸಂದರ್ಭ ಮತ್ತೆ ಅಧ್ಯಕ್ಷರು, ಸದಸ್ಯರುಗಳನ್ನು ಸಮಾಧಾನಪಡಿಸಲು ಮುಂದಾದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರಾದ ಶೀಲಾ ಡಿಸೋಜ, ಸಂಜೀವ ಅವರುಗಳು ಮಾತನಾಡಿ, ಇಂಜಿನಿಯರಿAಗ್ ವಿಭಾಗದ ವಿಚಾರಗಳನ್ನು ಹೊರತುಪಡಿಸಿ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಎಂದು ಅಭಿಪ್ರಾಯಿಸಿದರು.
ಇದಕ್ಕೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪ.ಪಂ. ಅಭಿಯಂತರರು ಕಳೆದ ೪ ಸಭೆಗಳಿಗೆ ಹಾಜರಾಗಿಲ್ಲ. ಅಮೃತ್-೨ ಯೋಜನೆಯ ಅಭಿಯಂತರರಿಗೆ ಎಷ್ಟು ಹೇಳಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಸದಸ್ಯ ಡಿ.ಯು. ಕಿರಣ್ ಹೇಳಿದರು.
೪ ತಿಂಗಳಿನಿAದ ಮಳೆಯಿದ್ದು, ಇದೀಗ ಬಿಡುವು ನೀಡಿದೆ. ಗುಂಡಿಗಳನ್ನು ಮುಚ್ಚಲು ಕ್ರಮವಹಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಈ ಬಗ್ಗೆ ಕ್ರಮ ವಹಿಸಲು ಅಭಿಯಂತರರೇ ಇಲ್ಲ ಎಂದು ಕಿರಣ್ ಹೇಳಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು, ತಾನು ಅಧಿಕಾರ ವಹಿಸಿಕೊಂಡ ನಂತರ ೧೩ ಕಾಮಗಾರಿಗಳಿಗೆ ಕ್ರಮ ವಹಿಸಲಾಗಿದೆ. ೧೫ನೇ ಹಣಕಾಸು ಯೋಜನೆ ಹಾಗೂ ಪಂಚಾಯಿತಿ ಉಳಿತಾಯ ನಿಧಿಯಡಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಮುಂದಿನ ೧೫ ದಿನಗಳಲ್ಲಿ ಈ ಸಂಬAಧಿತ ಆಡಳಿತಾತ್ಮಕ ಕೆಲಸ ಕಾರ್ಯಗಳು ಮುಕ್ತಾಯಗೊಳ್ಳಲಿವೆ. ಪೇ ಪಾರ್ಕಿಂಗ್ ಕಾಮಗಾರಿಗೆ ನಿನ್ನೆ ಟೆಂಡರ್‌ಗೆ ಅವಕಾಶ ಕಲ್ಪಿಸಲಾಗಿದೆ. ಇಂದು ಬಿಡ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಶೀಘ್ರದಲ್ಲೇ ವಿಶೇಷ ಸಭೆ ಕರೆದು ಅಂತಿಮಗೊಳಿಸಲಾಗುವುದು ಎಂದರು.
ಅಮೃತ್-೨ ಯೋಜನೆಯ ಕಾಮಗಾರಿಗೆ ತೆಗೆದ ಗುಂಡಿಗಳು ಇದೀಗ ಬಾವಿಯಂತಾಗಿವೆ. ಮೊದಲು ಗುಂಡಿಗಳನ್ನು ಮುಚ್ಚಿಸಬೇಕು. ರಸ್ತೆ ಬದಿ ಚರಂಡಿ ತೆಗೆದು ಹಾಗೆಯೇ ಬಿಡಲಾಗಿದೆ. ವಾಹನಗಳ ಓಡಾಟಕ್ಕೆ ಸಂಚಕಾರ ಎದುರಾಗಿದೆ ಎಂದು ಸದಸ್ಯ ನಾಗರತ್ನ, ಶುಭಕರ್ ಹೇಳಿದರು.
ಎಲ್ಲಾ ಕಾಮಗಾರಿಗಳಿಗೂ ಅಗತ್ಯವಾಗಿ ಇಂಜಿನಿಯರ್ ಇಲ್ಲ. ಸಭೆಯನ್ನು ಮುಂದೂಡಿ; ನಾವುಗಳೇ ಚರ್ಚಿಸಿ ಉಪಯೋಗವಿಲ್ಲ ಎಂದು ಜೀವನ್ ಹೇಳಿದರು. ಸಭೆ ಮುಂದೂಡುವುದು ಬೇಡ;ಸಭೆ ನಡೆಸಿ ಎಂದು ಮಹೇಶ್, ಶೀಲಾ, ಸಂಜೀವ ಹೇಳಿದರು. ಈ ಸಂದರ್ಭ ಸದಸ್ಯರುಗಳ ನಡುವೆಯೇ ಚರ್ಚೆಗಳು ತೀವ್ರಗೊಂಡವು.
ಒAದು ಹಂತದಲ್ಲಿ ವಾಕ್ಸಮರಕ್ಕೆ ಸಭೆ ಕಾರಣವಾಯಿತು. ಈ ಸಂದರ್ಭ ಜೀವನ್, ಪಿ.ಕೆ. ಚಂದ್ರು, ಮೃತ್ಯುಂಜಯ, ವಿನಿ, ಕಿರಣ್, ಶುಭಕರ್ ಅವರುಗಳು ಸಭಾತ್ಯಾಗಕ್ಕೆ ಮುಂದಾದರು. ಈ ನಡುವೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿದ ಉಪಾಧ್ಯಕ್ಷೆ ಮೋಹಿನಿ ಅವರೂ ಎದ್ದುನಿಂತರು. ಚರ್ಚೆ ತೀವ್ರಗೊಳ್ಳುತ್ತಿದ್ದುದರ ನಡು ವೆಯೇ ಅಧ್ಯಕ್ಷರು ಮಾತನಾಡಿ, ಅಭಿಯಂತರರುಗಳನ್ನು ಕರೆಸಿ ಸಭೆ ನಡೆಸಲಾಗುವುದು. ಅಲ್ಲಿಯವರೆಗೂ ಈ ಸಭೆಯನ್ನು ಬರ್ಖಾಸ್ತು ಮಾಡು ವುದಾಗಿ ಘೋಷಿಸಿದರು.