ಮಡಿಕೇರಿ, ಸೆ. ೧೮: ದಸರಾ ಹಿನ್ನೆಲೆ ಮಂಟಪ ತಯಾರಿಸುವ ದಶ ದೇವಾಲಯ ಸೇರಿದಂತೆ ಓಂಕಾರೇಶ್ವರ ಸನ್ನಿಧಿಗೆ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ಸಮಿತಿ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಮೊದಲಿಗೆ ಕೋಟಿ ಶ್ರೀ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ದೇಚೂರು ಶ್ರೀ ರಾಮಮಂದಿರ, ಪೇಟೆ ಶ್ರೀ ರಾಮ ಮಂದಿರ, ಕರವಲೆ ಭಗವತಿ, ಕೋಟೆ ಮಾರಿಯಮ್ಮ, ದಂಡಿನಮಾರಿಯಮ್ಮ, ಕೋದಂಡರಾಮ, ಕಂಚಿಕಾಮಾಕ್ಷಿ, ಚೌಡೇಶ್ವರಿ ದೇವಾಲಯಗಳಿಗೆ ತೆರಳಿದ ಯದುವೀರ್ ಒಡೆಯರ್ ಅವರು ಅಲ್ಲಿಯೂ ಪೂಜೆಯಲ್ಲಿ ಭಾಗವಹಿಸಿದರು. ಭೇಟಿ ವೇಳೆ ಸಂಸದರನ್ನು ಸಮಿತಿ ಪ್ರಮುಖರು ಸನ್ಮಾನಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್ ಅವರು, ದಸರಾ ಆರಂಭದ ನಂತರ ಮೈಸೂರಿನಲ್ಲಿ ೭ನೇ ಪುಟಕ್ಕೆ
ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿಸಿಕೊಳ್ಳಬೇಕಾದ ಕಾರಣದಿಂದ ದಶಮಂಟಪ ಸಮಿತಿಗಳ ದೇವಾಲಯಕ್ಕೆ ಭೇಟಿ ನೀಡಿ ಆಚರಣೆ ಸುಸೂತ್ರವಾಗಿ ಸಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಧ್ವನಿವರ್ಧಕ ಬಳಕೆ - ನಿಯಮ ಸಡಿಲಕ್ಕೆ ಮನವಿ
ದಶಮಂಟಪ ಶೋಭಾಯಾತ್ರೆ ಸಂದರ್ಭ ಧ್ವನಿವರ್ಧಕಗಳ ಬಳಕೆಗೆ ಅಡ್ಡಿಪಡಿಸದಂತೆ ಕ್ರಮಕೈಗೊಳ್ಳಬೇಕೆಂದು ದಶಮಂಟಪ ಸಮಿತಿ ಪ್ರಮುಖರು ಈ ಸಂದರ್ಭ ಯುದುವೀರ್ ಒಡೆಯರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ೪ ತಿಂಗಳಿನಿAದ ಮಂಟಪ ತಯಾರಿಯಲ್ಲಿ ಸಮಿತಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯನ್ನೂ ವಹಿಸುತ್ತದೆ. ಧ್ವನಿವರ್ಧಕ ಬಳಸಲು ಬಿಗಿ ನಿಯಮವನ್ನು ಪೊಲೀಸರು ಕೈಗೊಂಡಿದ್ದು, ಸಮಿತಿಗಳಿಗೆ ಸಮಸ್ಯೆಯಾಗಿದ್ದು, ನಿಯಮ ಸಡಿಲಕ್ಕೆ ಕೋರಿದರು.
ಅನುದಾನಕ್ಕೆ ಕೋರಿಕೆ
ಲಕ್ಷಾಂತರ ರೂಪಾಯಿ ವ್ಯಯಿಸಿ ಮಂಟಪಗಳನ್ನು ಸಮಿತಿಗಳು ನಿರ್ಮಿಸುತ್ತವೆ. ಈ ನಿಟ್ಟಿನಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವಂತೆಯೂ ಸಮಿತಿಯವರು ಕೋರಿದರು.
ಪ್ರತಿ ಮಂಟಪಗಳಿಗೆ ಅಂದಾಜು ೨೫ ರಿಂದ ೩೦ ಲಕ್ಷ ರೂಪಾಯಿ ಖರ್ಚಾಗುತ್ತದೆ. ಹಾಗಾಗಿ ಹಣದ ನೆರವು ಬೇಕೆಂದು ಗಮನ ಸೆಳೆದರು.
ಓಂಕಾರೇಶ್ವರದಲ್ಲಿ ಪೂಜೆ
ನಗರದ ಶ್ರೀ ಓಂಕಾರೇಶ್ವರ ದೇವಾಲಯಕ್ಕೂ ತೆರಳಿದ ಯದುವೀರ್ ಒಡೆಯರ್ ಅವರು ವಿಶೇಷ ಪೂಜೆಯಲ್ಲಿ ಭಾಗಿಯಾದರು.
ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಯದುವೀರ್ ಅವರನ್ನು ಸ್ವಾಗತಿಸಿದರು.
ಭೇಟಿ ವೇಳೆಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಖಜಾಂಚಿ ಸಬಿತಾ, ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ನಗರಸಭಾ ಸದಸ್ಯರಾದ ಸವಿತಾ ರಾಕೇಶ್, ಉಮೇಶ್ ಸುಬ್ರಮಣಿ, ಪ್ರಮುಖರಾದ ಪಳೆಯಂಡ ರಾಬಿನ್ ದೇವಯ್ಯ, ಬಿ.ಕೆ. ಜಗದೀಶ್, ಕವನ್ ಕಾರ್ಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.