ಗೋಣಿಕೊಪ್ಪಲು, ಸೆ. ೧೭: ರಸ್ತೆಯಲ್ಲಿ ತೆರಳುತ್ತಿದ್ದ ಯುವಕನೋರ್ವನಿಗೆ ಕೆಎಸ್ಆರ್ಟಿಸಿ ಬಸ್ವೊಂದು ಡಿಕ್ಕಿಯಾಗಿ ಪರಿಣಾಮ ಯುವಕ ಸಾವನ್ನಪ್ಪಿದ ಘಟನೆ ಗೋಣಿ ಕೊಪ್ಪಲು ಬಳಿಯ ಹಾತೂರಿನಲ್ಲಿ ನಡೆದಿದೆ.
ಮಡಿಕೇರಿ ಬಳಿಯ ಹಾಕತ್ತೂರು ನಿವಾಸಿ ಮೊಹಮ್ಮದ್ ಮಿಜ್ಲಾಜ್ (೨೭) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ಮೃತ ಮೊಹಮ್ಮದ್ ಮಿಜ್ಲಾಜ್ ಹಾತೂರು ಮಸೀದಿಯಲ್ಲಿ ಸಹಾಯಕ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಧ್ಯಾಹ್ನ ಪ್ರಾರ್ಥನೆಗೆಂದು ಮಸೀದಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕೊಳ್ಳೆಗಾಲದಿಂದ ವೀರಾಜಪೇಟೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಿಂದಿನಿAದ ಡಿಕ್ಕಿಹೊಡೆದಿದೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಸ್ಥಳೀಯರು ಗಾಯಾಳುವನ್ನು ವೀರಾಜಪೇಟೆ ಆಸ್ಪತ್ರೆಗೆ ಕರೆದೊಯ್ದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಖಲೀಲ್ ಬಾಷಾ ಮಾತನಾಡಿ, ಮೃತ ಯುವಕ ಮಿಜ್ಲಾಜ್ ಕುಟುಂಬ ಬಡವರಾಗಿದ್ದು, ತನ್ನ ದುಡಿಮೆಯಿಂದಲೇ ಕುಟುಂಬವನ್ನು ಸಲಹುತ್ತಿದ್ದ. ಇದೀಗ ಬಡ ಕುಟುಂಬ ಆಧಾರ ಸ್ತಂಭವನ್ನು ಕಳೆದುಕೊಂಡಿದ್ದು, ಸರಕಾರ ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಮೃತರ ಅಂತ್ಯ ಸಂಸ್ಕಾರಕ್ಕೆ ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವತಿಯಿಂದ ೨೫ ಸಾವಿರ ರೂ.ಗಳನ್ನು ನೀಡಲಾಯಿತು.