ಮಡಿಕೇರಿ, ಸೆ. ೧೬: ತಾ. ೨೨ ರಿಂದ ರಾಜ್ಯದಲ್ಲಿ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತು ಸಮೀಕ್ಷೆ ಸಂದರ್ಭ ವೀರಶೈವ ಲಿಂಗಾಯಿತ ಸಮುದಾಯದವರು ಧರ್ಮದ ಕಾಲಂನಲ್ಲಿ ‘ವೀರಶೈವ ಲಿಂಗಾಯಿತ’ ಎಂದು ನಮೂದಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕ ಕರೆ ನೀಡಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಗಣತಿಯ ಸಮಯದಲ್ಲಿ ಅನುಸೂಚಿಯ ೮ರ ಧರ್ಮದ ಕಾಲಂನಲ್ಲಿ ೧೧ನೇ ಕೋಡ್‌ನ ‘ಇತರೆ’ ಎಂದಿರುವ ಸ್ಥಳದಲ್ಲಿ ವೀರಶೈವ ಲಿಂಗಾಯಿತ, ೯ರ ಜಾತಿ ಕಾಲಂನಲ್ಲಿ ಲಿಂಗಾಯಿತ ಅಥವಾ ವೀರಶೈವ ಎಂದು ನಿಗದಿತ ಸಂಕೇತ ಸಂಖ್ಯೆಯನ್ನು ನೀಡಿ ನಮೂದಿಸಬೇಕು. ೭ನೇ ಪುಟಕ್ಕೆ

(ಮೊದಲ ಪುಟದಿಂದ) ಅದೇ ರೀತಿ ೧೦ರ ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿಗಳನ್ನು ಕೋಡ್ ಸಹಿತ ದಾಖಲಿಸುವಂತೆ ಕೋರಿದರು.

ಸರಕಾರ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಜಾತಿಗಣತಿಯ ದತ್ತಾಂಶಗಳನ್ನು ಉಪಯೋಗಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆ ವೀರಶೈವ ಲಿಂಗಾಯಿತ ಸಮುದಾಯದವರು ನಿಖರವಾದ ಮಾಹಿತಿಯನ್ನು ನೀಡಬೇಕಾಗಿದೆ. ಸರಕಾರದ ಯೋಜನೆ, ಸೌಲಭ್ಯ, ಮೀಸಲಾತಿ ಹಂಚಿಕೆ ಸರಿಯಾಗಬೇಕಾದರೆ ಸಮರ್ಪಕ ಮಾಹಿತಿಯನ್ನು ಸಮುದಾಯದವರು ನೀಡಬೇಕೆಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವಮೂರ್ತಿ, ಖಜಾಂಜಿ ಹೆಚ್.ಪಿ. ಉದಯ್ ಕುಮಾರ್, ನಿರ್ದೇಶಕ ಎಂ.ಎಸ್. ಗಣೇಶ್, ಸದಸ್ಯ ಬಿ.ವಿ. ಬಸವರಾಜು ಹಾಜರಿದ್ದರು.