ಸೋಮವಾರಪೇಟೆ, ಸೆ. ೧೬: ಕಳೆದ ಎರಡು ವಾರದ ಹಿಂದೆ ಸೋಮವಾರಪೇಟೆ ಪಟ್ಟಣದಲ್ಲಿ ಕಾಳಸಂತೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿದ್ದ ೪೨ ಕ್ವಿಂಟಾಲ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದ ತಾಲೂಕು ಆಹಾರ ಇಲಾಖಾ ನಿರೀಕ್ಷಕಿ ಯಶಸ್ವಿನಿ ಅವರನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಕಾರ್ಡ್ದಾರರಿಗೆ ವಿತರಣೆ ಮಾಡಿದ್ದ ಅಕ್ಕಿಯನ್ನು ಫಲಾನುಭವಿಗಳಿಂದ ಖರೀದಿಸಿ, ನಂತರ ಕಾಳಸಂತೆಯಲ್ಲಿ ಮಾರಾಟಕ್ಕೆ ಸಾಗಿಸುತ್ತಿದ್ದ ಕೊಣನೂರಿನ ಮಹಮ್ಮದ್ ಗೌಸ್ ಅವರ ಪುತ್ರ ಇದ್ರೀಸ್ ಎಂಬಾತನನ್ನು ಮಾಲು ಸಹಿತ ವಶಕ್ಕೆ ಪಡೆಯಲಾಗಿತ್ತು.

ನಂತರ ಸೋಮವಾರಪೇಟೆ ಪೊಲೀಸ್ ಠಾಣೆಗೆ ಹಾಜರುಪಡಿಸಿ ದೂರು ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಕಾರ್ಯಾಚರಣೆ ಮೂಲಕ ಸರ್ಕಾರದ ಯೋಜನೆಯ ದುರುಪಯೋಗವನ್ನು ತಡೆದ ಅಧಿಕಾರಿಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಜಿ.ಎಂ. ಕಾಂತರಾಜ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್, ಸಮಿತಿಯ ಸದಸ್ಯರುಗಳು, ಆಹಾರ ಇಲಾಖಾ ನಿರೀಕ್ಷಕಿ ಯಶಸ್ವಿನಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಇಲಾಖೆಯ ಸಿಬ್ಬಂದಿ ವಿನೋದ್ ಇದ್ದರು.