ಸೋಮವಾರಪೇಟೆ, ಸೆ. ೧೪: ತಾಲೂಕಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಹಾನಿಗೀಡಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಕುಟುಂಬದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆರ್ಥಿಕ ನೆರವು ಒದಗಿಸಲಾಯಿತು.
ಅನುದಾನದ ಮಂಜೂರಾತಿ ಪತ್ರವನ್ನು ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹಾಗೂ ತಾಲೂಕಿನ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಅವರುಗಳು ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ನಿರ್ದೇಶಕರು, ಯೋಜನೆಯಿಂದ ವಿಕಲಚೇತನರಿಗೆ ಪರಿಕರಗಳ ವಿತರಣೆ, ನಿರ್ಗತಿಕರಿಗೆ ಮಾಸಾಶನ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ, ಸರ್ಕಾರಿ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನೇಮಕ, ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ನೀಡುವುದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುತ್ತಿದೆ ಎಂದರು.
ಇದರೊAದಿಗೆ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ, ಗ್ರಾಮೀಣ ರೈತರಿಗೆ ಅನೂಕೂಲವಾಗುವಂತೆ ಹಾಲು ಉತ್ಪಾದಕರ ಸಂಘಗಳಿಗೆ ಅನುದಾನ ಸೇರಿದಂತೆ ಕೇತ್ರದಿಂದ ನೀಡುತ್ತಿರುವ ಇತರ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಳೆಯಿಂದ ಹಾನಿಗೀಡಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರ ಕುಟುಂಬಕ್ಕೂ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಕ್ಷೇತ್ರದ ಸೌಲಭ್ಯಗಳನ್ನು ಬಳಸಿಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.