ಸೋಮವಾರಪೇಟೆ, ಸೆ. ೧೩: ರಸ್ತೆ ಕಾಮಗಾರಿಗೆ ವೆಟ್‌ಮಿಕ್ಸ್ ಸಾಗಾಟಗೊಳಿಸುತ್ತಿದ್ದ ಟಿಪ್ಪರ್‌ವೊಂದು ಎದುರು ಭಾಗದಿಂದ ಆಗಮಿಸಿದ ಪಿಕ್‌ಅಪ್‌ಗೆ ಜಾಗ ಕಲ್ಪಿಸಲು ಹೋಗಿ ರಸ್ತೆ ಬದಿಯ ಗುಂಡಿಗೆ ಇಳಿದ ಘಟನೆ ಪಟ್ಟಣ ಸಮೀಪದ ಕೂಡುರಸ್ತೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.

ಪಟ್ಟಣದ ಆಲೇಕಟ್ಟೆಯಿಂದ ತೋಳೂರುಶೆಟ್ಟಳ್ಳಿ, ಇನಕನಹಳ್ಳಿಯವರೆಗೆ ರಾಜ್ಯ ಹೆದ್ದಾರಿ ದುರಸ್ತಿ ಕಾಮಗಾರಿಗೆ ಕಳೆದ ಜನವರಿ ೧೧ರಂದು ಚಾಲನೆ ನೀಡಲಾಗಿದ್ದು, ಮಳೆ ಹಿನ್ನೆಲೆ ಸ್ಥಗಿತಗೊಂಡಿತ್ತು. ಇದೀಗ ಮಳೆ ಕಡಿಮೆಯಾಗಿದ್ದು, ಕಾಮಗಾರಿಗೆ ವೆಟ್‌ಮಿಕ್ಸ್ ಸಾಗಿಸುವ ಟಿಪ್ಪರ್ ವಾಹನವು, ರಸ್ತೆ ಬದಿಯಿರುವ ಗುಂಡಿಗೆ ಸಿಲುಕಿಕೊಂಡು ಕೆಲಕಾಲ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿತ್ತು.

ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚದ ಹಿನ್ನೆಲೆ ಅವಘಡಗಳು ಸಂಭವಿಸುತ್ತಲೇ ಇವೆ. ರಸ್ತೆಯ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಜರುಗುತ್ತಿವೆ. ಇಂದೂ ಸಹ ಕೂಡುರಸ್ತೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಪಿಕ್‌ಅಪ್ ವಾಹನ ರಸ್ತೆಯ ಗುಂಡಿಯನ್ನು ತಪ್ಪಿಸಲು ಬಲಬದಿಗೆ ತಿರುಗಿದೆ. ಇದೇ ಸಂದರ್ಭ ಪಟ್ಟಣದಿಂದ ತೆರಳುತ್ತಿದ್ದ ಟಿಪ್ಪರ್‌ಗೆ ಮುಂದೆ ಸ್ಥಳಾವಕಾಶವಿಲ್ಲದೇ ಎಡಭಾಗಕ್ಕೆ ತಿರುಗಿದ್ದು, ಗುಂಡಿಗೆ ಸಿಲುಕಿದೆ. ಒಂದು ವೇಳೆ ಟಿಪ್ಪರ್ ಮಗುಚಿಕೊಂಡಿದ್ದರೆ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿಗೂ ಮುನ್ನ ಇರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಇಂಜಿನಿಯರ್ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.