ಸೋಮವಾರಪೇಟೆ, ಸೆ. ೧೩: ಇಲ್ಲಿನ ಒಕ್ಕಲಿಗರ ಸೌಹಾರ್ದ ಸಹಕಾರಿ ಸಂಘವು ೩೩೯ ಸದಸ್ಯರನ್ನು ಒಳಗೊಂಡಿದ್ದು, ನಿತ್ಯನಿಧಿ ಠೇವಣಿ ಮೇಲೆ ರೂ. ೭೮ ಲಕ್ಷ ಸಾಲ ವಿತರಿಸಲಾಗಿದೆ. ಶೇ. ೯೫ರಷ್ಟು ವಸೂಲಾತಿಯೊಂದಿಗೆ ಲಾಭದತ್ತ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಜೆ. ದೀಪಕ್ ತಿಳಿಸಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ಸಾಲಿನಲ್ಲಿ ೬೪ ಮಂದಿ ನೂತನ ಸದಸ್ಯರು ಸದಸ್ಯತ್ವ ಪಡೆದಿದ್ದಾರೆ. ೨೭೦ ಮಂದಿ ನಿತ್ಯ ನಿಧಿ ಠೇವಣಿ ಪಾವತಿಸುತ್ತಿದ್ದಾರೆ ಎಂದರು.
ಒಕ್ಕಲಿಗರ ಶ್ರೇಯೋಭಿವೃದ್ಧಿಯೊಂದಿಗೆ ಸಮುದಾಯದ ಮಂದಿಯನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ. ಸಂಘದಲ್ಲಿ ವರ್ಷಾಂತ್ಯಕ್ಕೆ ಒಟ್ಟು ೧೮.೫೮ ಲಕ್ಷ ಪಾಲು ಬಂಡವಾಳವಿದೆ ಎಂದರು.
೨ ವರ್ಷಗಳ ಹಿಂದಷ್ಟೇ ಸ್ಥಾಪನೆಗೊಂಡ ಒಕ್ಕಲಿಗರ ಸೌಹಾರ್ದ ಸಹಕಾರ ಸಂಘವು ೩.೭೪ ಲಕ್ಷ ಉಳಿತಾಯ, ೮೪.೮೨ ಲಕ್ಷ ನಿತ್ಯ ನಿಧಿ ಠೇವಣಿ, ೧೮.೫೮ ಲಕ್ಷ ಷೇರು ಬಂಡವಾಳ ಹೊಂದಿದ್ದು, ರೂ. ೧೦.೧೮ ಕೋಟಿಯಷ್ಟು ವ್ಯವಹಾರ ನಡೆಸಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಸದಸ್ಯ ರಂಜನ್, ಒಕ್ಕಲಿಗರ ಸದಸ್ಯತ್ವ ಹೆಚ್ಚು ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದ ಸದಸ್ಯರಿಂದಲೂ ಪಿಗ್ಮಿ ಸಂಗ್ರಹಿಸಿ, ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಗ್ರಾಮಗಳಿಗೆ ತೆರಳಿ ಸದಸ್ಯತ್ವ ಅಭಿಯಾನ ಮಾಡಲು ಕ್ರಮವಹಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಪಿಗ್ಮಿ ಸಾಲ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿದಿನ ಪಿಗ್ಮಿ ಸಂಗ್ರಹಾತಿ ಕಷ್ಟಸಾಧ್ಯ. ಸಂಘದ ಆರ್ಥಿಕ ವ್ಯವಹಾರ ಹೆಚ್ಚಾದ ನಂತರ ಗ್ರಾಮೀಣ ಭಾಗಕ್ಕೂ ಪಿಗ್ಮಿ ಆಧಾರಿತ ಸಾಲ ಯೋಜನೆಯನ್ನು ವಿಸ್ತರಿಸಲಾಗುವುದು ಅಧ್ಯಕ್ಷ ಬಿ.ಜೆ. ದೀಪಕ್ ಹೇಳಿದರು.
ಸಂಘದ ಸದಸ್ಯರಿಗೆ ಮರಣ ನಿಧಿ ಯೋಜನೆಯನ್ನು ಜಾರಿಗೆ ತರಬೇಕು. ಸದಸ್ಯರು ಮರಣ ಹೊಂದಿದ ಸಂದರ್ಭ ಕನಿಷ್ಟ ೫ ಸಾವಿರವನ್ನಾದರೂ ನೀಡುವಂತಾಗಬೇಕೆAದು ಸದಸ್ಯ ಸುರೇಶ್ ಸಲಹೆ ನೀಡಿದರು. ಈ ಬಗ್ಗೆ ಕ್ರಮವಹಿಸುವುದಾಗಿ ದೀಪಕ್ ತಿಳಿಸಿದರು.
ಸಭೆಯಲ್ಲಿ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹೆಚ್.ಎನ್. ರವೀಂದ್ರ, ಸಂಘದ ಉಪಾಧ್ಯಕ್ಷ ಚಕ್ರವರ್ತಿ ಸುರೇಶ್, ನಿರ್ದೇಶಕರುಗಳಾದ ಪಿ.ಕೆ. ರವಿ, ಗಿರೀಶ್ ಮಲ್ಲಪ್ಪ, ಹೆಚ್.ಎಸ್. ವಸಂತ್‌ಕುಮಾರ್, ಹೆಚ್.ಎಂ. ನತೀಶ್ ಮಂದಣ್ಣ, ಹೆಚ್.ಕೆ. ಪ್ರೆಸ್ಸಿ, ಜಿ.ಪಿ. ಕಿಶೋರ್‌ಕುಮಾರ್, ಲೋಕೇಶ್ವರಿ ಗೋಪಾಲ್, ಯು.ಎಲ್. ಸುಮಲತ, ಕಾರ್ಯನಿರ್ವಹಣಾಧಿಕಾರಿ ದಯಾನಂದ, ಆಂತರಿಕ ಲೆಕ್ಕಪರಿಶೋಧಕ ಕೆ.ಎಸ್. ವಿಜೇತ್ ಅವರುಗಳು ಉಪಸ್ಥಿತರಿದ್ದರು.