ಮಡಿಕೇರಿ, ಸೆ. ೧೩: ರಾಜ್ಯ ಸರಕಾರದ ವತಿಯಿಂದ ತಾ.೨೨ ರಿಂದ ಆರಂಭಗೊಳ್ಳುವ ಜಾತಿ ಜನಗಣತಿ ಸಂದರ್ಭ ಕೊಡವರು ಧರ್ಮ ಮತ್ತು ಜಾತಿಯನ್ನು ‘ಕೊಡವರು’ ಎಂದೇ ನಮೂದಿಸುವಂತೆ ಅಖಿಲ ಕೊಡವ ಸಮಾಜ ಮಾಡಿರುವ ಮನವಿ ಅಧ್ಯಕ್ಷರ ವೈಯಕ್ತಿಕ ನಿಲುವಾಗಿದ್ದು, ಇವರ ಹೇಳಿಕೆಯಿಂದ ವಿನಾಕಾರಣ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ನಿರ್ದೇಶಕ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಧರ್ಮದ ಹೇಳಿಕೆ ಅಖಿಲ ಕೊಡವ ಸಮಾಜದ ಅಧ್ಯಕ್ಷರ ವೈಯಕ್ತಿಕ ಹೇಳಿಕೆಯಾಗಿದ್ದು, ಅದು ಎಲ್ಲಾ ಕೊಡವರ ನಿಲುವು ಅಲ್ಲ. ಕೊಡವ ಎಂಬುದು ಒಂದು ಜಾತಿಯೇ ಹೊರತು, ಅದು ಒಂದು ಧರ್ಮವಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಷ್ಟು ವರ್ಷ ಯಾವುದೇ ಗೊಂದಲಗಳಿರಲಿಲ್ಲ, ಕೊಡವರು ಹಿಂದೂ ಧರ್ಮದ ಮೂಲಕವೇ ಗುರುತಿಸಿಕೊಳ್ಳುತ್ತಿದ್ದರು. ಹಿರಿಯರು ಕೊಡವರಿಗೆ ಯಾವ ಧರ್ಮಕ್ಕೆ ಸೇರಿದವರೆಂದು ಈಗಾಗಲೇ ಮನವರಿಕೆ ಮಾಡಿಕೊಟ್ಟಿದ್ದಾರೆ. ೭ನೇ ಪುಟಕ್ಕೆ (ಮೊದಲ ಪುಟದಿಂದ) ಇದಕ್ಕೆ ಪೂರಕವಾದ ದಾಖಲೆ ಕೂಡ ಇದೆ ಎಂದು ಪ್ರತಿಪಾದಿಸಿದ್ದಾರೆ. ಅಖಿಲ ಕೊಡವ ಸಮಾಜ ಸರ್ವ ಕೊಡವರ ಅಭಿಪ್ರಾಯ ಸಂಗ್ರಹಿಸಿ ಒಪ್ಪಿಗೆ ಪಡೆದಿದೆಯೇ ಅಥವಾ ಅಧ್ಯಕ್ಷರ ಹೇಳಿಕೆ ರಾಜಕೀಯ ಪ್ರೇರಿತವೇ ಎಂದು ಪ್ರಶ್ನಿಸಿರುವ ಅವರು, ವೈಯಕ್ತಿಕ ಅಭಿಪ್ರಾಯಗಳ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಒತ್ತಾಯಿಸಿದ್ದಾರೆ.