ಕಣಿವೆ, ಸೆ. ೧೨: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಇರುವ ಗುಮ್ಮನಕೊಲ್ಲಿ ನಾಗಮ್ಮನ ಮಂಟಿ ಜನವಸತಿ ಪ್ರದೇಶ ಕೊಳಚೆ ನೀರಿನಿಂದ ಆವೃತವಾಗಿ ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದೆ.
ಈ ಹಿಂದೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತದ ಅವಧಿಯಲ್ಲಿ ಈ ನಾಗಮ್ಮನ ಮಂಟಿಯಲ್ಲಿ ಅವೈಜ್ಞಾನಿಕವಾದ ಗುಡಿಸಲುಗಳು ನಿರ್ಮಾಣವಾದವು.
ಸೂಕ್ತ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕಕ್ಕೆ ಪೂರಕವಾದ ಏನೇನೂ ಸ್ಥಳಾವಕಾಶವೇ ಇಲ್ಲದ ಹಾಗೆ ಕಾಲುದಾರಿಯಷ್ಟು ಜಾಗವನ್ನು ಬಿಟ್ಟು ಕೊಂಡು ಆಚೆ ಈಚೆ ಸಾಕಷ್ಟು ಗುಡಿಸಲು ನಿರ್ಮಾಣಗೊಂಡರೂ ಕೂಡ ಪಂಚಾಯಿತಿಯ ಆಗಿನ ಜನಪ್ರತಿನಿಧಿಗಳು ವೋಟಿನಾಸೆಗೆ ಈ ಮಂದಿಗೆ ವೈಜ್ಞಾನಿಕವಾದ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವ ಯೋಚನೆಯನ್ನು ಮಾಡದ ಪರಿಣಾಮ ಇಂದು ನೂರಾರು ಗುಡಿಸಲು ಹಾಗೂ ಮನೆಗಳು ನಿರ್ಮಾಣ ಗೊಂಡಿವೆ.
ಹೀಗೆ ನಿರ್ಮಾಣಗೊಂಡ ಜನವಸತಿಯ ತ್ಯಾಜ್ಯ ನೀರು ಸಮರ್ಪಕವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ತಗ್ಗು ಪ್ರದೇಶದ ಜನವಸತಿ ಪ್ರದೇಶದಲ್ಲಿ ನಿಂತು ಕೊಳಕು ಬೀರುತ್ತಿದೆ.
ಅಷ್ಟು ಮಾತ್ರವಲ್ಲ, ಮನುಷ್ಯನ ಆರೋಗ್ಯಕ್ಕೆ ಮಾರಕವಾದ ಸೊಳ್ಳೆ ಹಾಗೂ ನೊಣಗಳ ತವರಾಗಿದೆ. ಹೀಗಾಗಿ ನಿತ್ಯವೂ ಇಲ್ಲಿ ವಾಸವಿರುವ ಮಂದಿ ಸಾಂಕ್ರಾಮಿಕ ರೋಗಗಳಿಗೆ ಸಿಲುಕಿ ನಿತ್ಯವೂ ಕುಶಾಲನಗರದ ಆಸ್ಪತ್ರೆಯನ್ನು ಅಲೆಯುವಂತಾಗಿದೆ.
ಬಹುತೇಕ ಕೂಲಿ ಕಾರ್ಮಿಕರಾಗಿರುವ ಇಲ್ಲಿನ ಮಂದಿ ಕುಶಾಲನಗರದ ವಿವಿಧ ಹೊಟೇಲ್, ರೆಸಾರ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಕಾಫಿ ತೋಟಗಳಿಗೆ ತೆರಳುತ್ತಾರೆ. ಇನ್ನೂ ಕೆಲವು ಮಂದಿ ಗಾರೆ ಕೆಲಸ ಸೇರಿದಂತೆ ಬೇರೆ ಬೇರೆ ಕಾಯಕಗಳಲ್ಲಿ ತೊಡಗಿಸಿಕೊಂಡಿದ್ದು ತಾವು ದಿನವಿಡೀ ದುಡಿದು ತರುವ ಹಣವನ್ನು ಮಕ್ಕಳು ಹಾಗೂ ಮನೆ ಮಂದಿಯ ಚಿಕಿತ್ಸೆಗೆ ವ್ಯಯ ಮಾಡುತ್ತಿದ್ದಾರೆ.
ಮೊದಲೇ ಶ್ರಮಿಕ ಜೀವಿಗಳಾದ ಇಲ್ಲಿನ ಮಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಪುರಸಭೆ ಆಡಳಿತ ಮುಂದಾಗಬೇಕು ಎಂದು ಇಲ್ಲಿನ ನಿವಾಸಿ ನಿವೃತ್ತ ಯೋಧ ಅರುಣ್ ರೈ ಒತ್ತಾಯಿಸಿದ್ದಾರೆ. ಇಲ್ಲಿನ ಜನವಸತಿಯ ಎಲ್ಲಾ ತರಹದ ತ್ಯಾಜ್ಯ ನೀರು ಪಾದಸಂಚಾರದ ರಸ್ತೆಯಲ್ಲಿಯೇ ಹರಿದು ನಿಲ್ಲುವ ಮೂಲಕ ತಗ್ಗು ಪ್ರದೇಶದಲ್ಲಿ ಶೇಖರಣೆಗೊಂಡಿದ್ದು ಸುತ್ತಲಿನ ಪರಿಸರ ಕೊಳಕು ನಾರುತ್ತಿರುವುದರಿಂದ ಕೂಡಲೇ ಪುರಸಭೆ ಇದರ ಸ್ವಚ್ಚತೆಗೆ ಮುಂದಾಗಬೇಕು. ನಾಗಮ್ಮನ ಮಂಟಿಯನ್ನು ವಿಶೇಷ ಜನವಸತಿ ಪ್ರದೇಶವಾಗಿ ಪರಿಗಣಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕು ಮುನ್ನಾ ಮೊದಲ ಆದ್ಯತೆಯಾಗಿ ಸೂಕ್ತ ಚರಂಡಿ ಹಾಗೂ ಇಲ್ಲಿನ ಅಶುಚಿತ್ವ ಪರಿಸರವನ್ನು ಸ್ವಚ್ಛ ಪರಿಸರವಾಗಿ ರೂಪುಗೊಳಿಸಬೇಕೆಂದು ನಿವಾಸಿ ಅರುಣ್ ರೈ ಆಗ್ರಹಿಸಿದ್ದಾರೆ. - ಕೆ.ಎಸ್ ಮೂರ್ತಿ