ಮೈಸೂರು, ಸೆ. ೫; ಮೈಸೂರು-ಕುಶಾಲನಗರ ಮತ್ತು ಹೆಜ್ಜಲ-ಚಾಮರಾಜನಗರ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುತ್ತಿಲ್ಲ, ಇಚ್ಛಾಶಕ್ತಿ ಕೊರತೆ ಕಂಡುಬರುತ್ತಿದೆ. ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಎಲ್ಲ ರಾಜ್ಯಗಳಂತೆ ಕರ್ನಾಟಕದಲ್ಲೂ ರೈಲ್ವೆ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು, ಪ್ರಯಾಣಿಕರಿಗೆ ಸೌಲಭ್ಯಗಳು ದೊರೆಯಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶ ಆಗಿದೆ; ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಇದಕ್ಕೆ ತಕ್ಕಂತೆ ಸ್ಪಂದಿಸುತ್ತಿಲ್ಲ. ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಆರೋಪ ಮಾಡಿದರು.

ಚಾಮರಾಜನಗರದಿಂದ ತಮಿಳುನಾಡಿನ ಮೆಟ್ಟುಪಾಳ್ಯಂವರೆಗೆ ರೈಲು ಮಾರ್ಗ ವಿಸ್ತರಿಸುವುದು, ಮೈಸೂರು-ಕುಶಾಲನಗರ ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅಗತ್ಯವಾದ ಭೂಮಿ ಕೊಡುತ್ತಿಲ್ಲ. ಈ ಬಗ್ಗೆ ನವದೆಹಲಿಗೆ ಬಂದಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಸ್ತುವಾರಿ ಕಾರ್ಯದರ್ಶಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ತಿಳಿಸಿದ್ದೆ. ಸರ್ಕಾರದಿಂದ ಮನವಿಪತ್ರ ಸಲ್ಲಿಸುವಂತೆ ತಿಳಿಸಿದ್ದರೂ ಸಲ್ಲಿಸಿಲ್ಲ ಎಂದು ವಿವರಿಸಿದರು. ರಾಜ್ಯದಲ್ಲಿ ರೈಲ್ವೇ ಸಂಪರ್ಕದಿAದ ವಂಚಿತವಾಗಿರುವ ಏಕೈಕ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಕೊಡಗು ಜಿಲ್ಲೆಗೆ ರೈಲ್ವೇ ಸಂಪರ್ಕಕ್ಕಾಗಿ ಎರಡು ದಶಕಗಳಿಂದಲೇ ಕೂಗು ಇದೆ. ಆದರೆ ರಾಜ್ಯ ಸರ್ಕಾರದ ತೀವ್ರ ನಿರಾಸಕ್ತಿಯಿಂದಾಗಿ ಮೈಸೂರು-ಕುಶಾಲನಗರ ರೈಲ್ವೆ ಯೋಜನೆಯು ಇನ್ನೂ ಪ್ರಾರಂಭವಾಗಿಲ್ಲ, ಆದರೂ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದೆ. ಈ ಯೋಜನೆಗೆ ೧,೩೭೯ ಎಕರೆಗಳಷ್ಟು ಭೂಮಿ ಅವಶ್ಯಕತೆಯಿದೆ. ಆದರೆ ಸ್ವಾಧೀನ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಮೊದಲಿಗೆ ಇದರ ಮೂಲ ವೆಚ್ಚ ೬೬೭ ಕೋಟಿ ಎಂಬುದಾಗಿ ಅಂದಾಜಿಸಲಾಗಿತ್ತು, ಕೇಂದ್ರ ರೈಲ್ವೇ ಇಲಾಖೆ ಅಂತಿಮ ಲೊಕೇಷನ್ ಸರ್ವೆ ಮಾಡಿ ಯೋಜನೆಗೆ ಅನುಮೋದನೆ ನೀಡಿದ ನಂತರ ವೆಚ್ಚ ಮತ್ತಷ್ಟು ಹೆಚ್ಚಾಗಿದೆ. ಈ ಯೋಜನೆಗೆ ಹೂಡಿಕೆಯ ಮೇಲಿನ ಲಾಭವು ನಕಾರಾತ್ಮಕ ಎಂಬ ಕಾರಣವನ್ನು ಮುಂದೂಡ್ಡಲಾಗುತ್ತಿದೆ.

ಮಾಜಿ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರ ಪ್ರಯತ್ನದಿಂದಾಗಿ ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆಯಿತು. ಕುಂಟುತ್ತಾ ಸಾಗಿರುವ ಈ ಯೋಜನೆಯ ೮೭.೫ ಕಿಮಿ ಉದ್ದದ ಮಾರ್ಗದ ಒಟ್ಟು ಮೊತ್ತ ೧೮೫೪ ಕೋಟಿ ರೂಪಾಯಿಗಳಿಗೆ ಜಿಗಿತವಾಯಿತು. ೨೦೨೩ ರಲ್ಲಿ ಕೇಂದ್ರ ರೈಲ್ವೇ ಇಲಾಖೆ ಅಂತಿಮ ಸ್ಥಳ ಸಮೀಕ್ಷೆ (ಈiಟಿಚಿಟ ಐoಛಿಚಿಣioಟಿ Suಡಿveಥಿ) ಕೂಡ ನಡೆಸಲಾಯಿತು. ಈ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇಕಡಾ ೫೦:೫೦ ರ ವೆಚ್ಚದಲ್ಲಿ ಹಣ ಹೂಡಿಕೆ ಮಾಡಬೇಕಿತ್ತು.

ವಾರ್ಷಿಕ ಕೋಟ್ಯಾಂತರ ರೂಪಾಯಿಗಳ ಆದಾಯ ನೀಡುವ ಕೊಡಗಿಗೆ ಕೇವಲ ಲಾಭದ ದೃಷ್ಟಿಯಿಂದ ಮಾತ್ರ ರೈಲ್ವೇ ಯೋಜನೆಯನ್ನು ನಿರಾಕರಿಸುತ್ತಿರುವುದು ಜನತೆಗೆ ಮಾಡುವ ಅನ್ಯಾಯವಾಗಿದೆ. ಕೊಡಗಿನ ಜನಪ್ರತಿನಿಧಿಗಳು ಈ ಕುರಿತು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕಾಗಿದೆ. ಇಲ್ಲದಿದ್ದರೆ ರೈಲ್ವೇ ಯೋಜನೆ ಇನ್ನೂ ಕನಸಾಗಿಯೇ ಉಳಿಯಲಿದೆ.