ಕೂಡಿಗೆ, ಸೆ. ೧: ತೀವ್ರ ನಿರ್ಲಕ್ಷö್ಯಕ್ಕೆ ತುತ್ತಾಗಿರುವ ಚಿಕ್ಲಿಹೊಳೆ ಅಣೆಕಟ್ಟಿನ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ವಹಿಸುವ ಒತ್ತಾಯ ನಂಜರಾಯಪಟ್ಟಣ ಗ್ರಾ.ಪಂ. ಕೆಡಿಪಿ ಸಭೆಯಲ್ಲಿ ಕೇಳಿಬಂತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಚಿಕ್ಲಿಹೊಳೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಸಮಸ್ಯೆಗಳ ನಿವಾರಣೆಗೆ, ಅಭಿವೃದ್ಧಿ ಕಾಮಗಾರಿಗೆ ಕ್ರಮವಹಿಸದ ನೀರಾವರಿ ನಿಗಮದ ನಿರ್ಲಕ್ಷತೆ ಬಗ್ಗೆ ಗ್ರಾಪಂ ಅಧ್ಯಕ್ಷ ಸಿ.ಎಲ್. ವಿಶ್ವ, ಸದಸ್ಯರಾದ ಆರ್.ಕೆ.ಚಂದ್ರ, ರಕ್ಷಿತ್ ಮಾವಜಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ ನಿಗಮ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ಅಧಿಕಾರಿಗಳು, ಪ್ರತಿನಿಧಿಗಳೊಂದಿಗೆ ಆಯಾ ಇಲಾಖೆಗೆ ಸಂಬAಧಿಸಿದ ಯೋಜನೆಗಳ ಪ್ರಗತಿ, ಅನುಷ್ಠಾನ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಕಾಡಾನೆ, ಹುಲಿ ಸಂಚಾರವಿರುವ ಕಾರಣ ಪ್ರವಾಸಿ ತಾಣ ಚಿಕ್ಲಿಹೊಳೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಅರಣ್ಯ ಇಲಾಖೆಯಿಂದ ಎಚ್ಚರಿಕೆಯ ಸೂಚನಾ ಫಲಕಗಳ ಅಳವಡಿಕೆ ಮಾಡಬೇಕು. ರಸ್ತೆ ಬದಿ ಕಾಡು ಗಿಡಗಳ ತೆರವಿಗೆ ನೀರಾವರಿ ನಿಗಮದೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಿದರು. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಜಾಗ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆಯಲು ಮುಂದಾಗಿರುವ ಕ್ರಮದ ಕುರಿತು ಚರ್ಚಿಸಲಾಯಿತು. ೧೪ ಸಾವಿರ ಜನಸಂಖ್ಯೆ ಅವಲಂಬಿಸಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಹೈಟೆಕ್ ಆಸ್ಪತ್ರೆಯಾಗಿಸುವ ನಿಟ್ಟಿನಲ್ಲಿ ಎಲ್ಲರ ಜವಬ್ದಾರಿ ಮುಖ್ಯವಾಗಿದೆ ಎಂದು ವಿಶ್ವ ತಿಳಿಸಿದರು.
ಗಿರಿಜನರಿಗೆ ಸಮರ್ಪಕ ದಾಖಲಾತಿಗಳ ರಚಿಸುವುದು, ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಂಬAಧಿಸಿದ ಇಲಾಖೆಯವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ಮರಗಳು, ಹಸುಗಳ ಕಳ್ಳತನ ಹೆಚ್ಚಾಗಿದ್ದು ನೈಟ್ ಬೀಟ್ ವ್ಯವಸ್ಥೆ ಹೆಚ್ಚಿಸುವಂತೆ ಪೊಲೀಸ್ ಸಿಬ್ಬಂದಿಗೆ ಸದಸ್ಯ ಆರ್.ಕೆ.ಚಂದ್ರ ಒತ್ತಾಯಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಜಾಗೃತಿಗಾಗಿ ಕಾರ್ಯಕರ್ತರ ನೇಮಕಾತಿಗೆ ಸೂಚಿಸಲಾಯಿತು. ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗದ ಸಮಸ್ಯೆ, ಕೆರೆ ಒತ್ತುವರಿ ತೆರವು, ಗ್ರಾಪಂನಿAದ ಅಂಗನವಾಡಿಗಳ ದುರಸ್ತಿ, ನಿರ್ವಹಣೆಗೆ ಅನುದಾನ ಒದಗಿಸುವ ವಿಚಾರಗಳ ಕುರಿತು ಚರ್ಚಿಸಲಾಯಿತು. ಬಾಣಂತಿಯರು, ಗರ್ಭಿಣಿಯರು, ನವಜಾತ ಶಿಶುಗಳು ವಿವರ, ಆರೋಗ್ಯ ಯೋಜನೆಗಳ ಅನುಷ್ಠಾನದ ವಿವರ ಪಡೆದುಕೊಳ್ಳಲಾಯಿತು. ಪಂಚಾಯತ್ ರಾಜ್ ಅಭಿಯಂತರ ಕಾಮಗಾರಿಗಳ ವಿವರ ಒದಗಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಎಲ್.ವಿಶ್ವ, ನಮ್ಮ ಆಡಳಿತ ಅವಧಿಯಲ್ಲಿ ರೂ ೨೫ ಲಕ್ಷದಿಂದ ೧.೨೫ ಕೋಟಿಗೆ ಗ್ರಾಪಂ ಆದಾಯ ಹೆಚ್ಚಾಗಿದೆ. ಸಂಪನ್ಮೂಲ ಕ್ರೋಡೀಕರಣ, ಕಚೆೆÃರಿ ಕಟ್ಟಡ ಅಭಿವೃದ್ಧಿ ಸೇರಿದಂತೆ ಗ್ರಾಮ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿ ಕೈಗೊಂಡು ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕಾರ್ಯದರ್ಶಿ ಶೇಷಾಚಲ, ಸದಸ್ಯ ಸೇರಿದಂತೆ ಇನ್ನಿತರರು ಇದ್ದರು.