ಮುಳ್ಳೂರು, ಆ. ೩೧: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ವರ್ಷದ ಭಾರತೀಯ ಬಾಹ್ಯಾಕಾಶ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಮುಖ್ಯಶಿಕ್ಷಕರಾದ ಸತೀಶ್ ಸಿ.ಎಸ್. ಕೃತಕವಾಗಿ ಸೃಷ್ಟಿಸಿದ್ದ ಬಾಹ್ಯಾಕಾಶÀದಲ್ಲಿ ವಿದ್ಯಾರ್ಥಿಗಳು ಬಾಹ್ಯಾಕಾಶಯಾನ ಬಣ್ಣ ಬಣ್ಣಗಳಿಂದ ಜಗಮಗಿಸುತ್ತಿದ್ದ ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು, ಕೃತಕ ಉಪಗ್ರಹಗಳು, ಗ್ಯಾಲಕ್ಸಿ ಸೌರಮಂಡಲ, ಧೂಮಕೇತುಗಳಾದಿಯಾಗಿ ಇಡೀ ಸೌರವ್ಯೂಹವನ್ನು ವಿದ್ಯಾರ್ಥಿಗಳು ಬೆರಗುಗಣ್ಣಿನಿಂದ ನೋಡತೊಡಗಿದರು. ಚಂದ್ರಯಾನದ ಸಾಧನೆಯನ್ನು ಸಾರುವ ಭಾರತದ ಬಾಹ್ಯಾಕಾಶದ ಮೈಲುಗಲ್ಲುಗಳನ್ನು ಬಿಂಬಿಸಿದ್ದ ಸಾಧನ ಫಲಕಗಳು, ವಿಶ್ವದಲ್ಲಿ ಭಾರತದ ಬಾಹ್ಯಾಕಾಶÀದ ಸಾಧನೆಯನ್ನು ಮಕ್ಕಳಲ್ಲಿ ಮನವರಿಕೆ ಮಾಡುವಲ್ಲಿ ಸಫಲವಾಯಿತು. ಶಿಕ್ಷಕರಾದ ಜಾನ್ ಪೌಲ್ ಡಿಸೋಜ ಅವರು ಚಂದ್ರಯಾನದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇಸ್ರೋದಲ್ಲಿ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳು ಯಾವೆಲ್ಲ ರೀತಿಯಲ್ಲಿ ಸಿದ್ದರಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳಲ್ಲಿ ತಾವು ಕೂಡ ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹುಟ್ಟುವಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಟ್ಟಿನಲ್ಲಿ ಇಡೀ ಶಾಲಾ ವಾತಾವರಣವೇ ಬಾಹ್ಯಾಕಾಶವನ್ನು ಹೋಲುತ್ತಿತ್ತು.