ವೀರಾಜಪೇಟೆ, ಆ. ೩೧: ಜಿಲ್ಲೆಯಲ್ಲಿನ ೧೪ ತುಳು ಭಾಷಿಕ ಸಮುದಾಯಗಳನ್ನು ಒಂದುಗೂಡಿಸಿ, ಪರಸ್ಪರ ಸಹಕಾರದಿಂದ, ಒಗ್ಗಟ್ಟಾಗಿ ತುಳುವೆರೆ ಜನಪದ ಕೂಟವನ್ನು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಲಾಗುವುದು ಎಂದು ತುಳುವೆರೆ ಜನಪದ ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಆನಂದ ರಘು ಪೂಜಾರಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ನಡೆದ ತುಳುವೆರೆ ಜನಪದಕೂಟದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತುಳುವೆರೆ ಜನಪದ ಕೂಟದ ತಾಲೂಕು ಘಟಕದ ಅಧ್ಯಕ್ಷ ಶಬರೀಶ್ ಶೆಟ್ಟಿ ಮಾತನಾಡಿ ಮುಂದಿನ ದಿನಗಳಲ್ಲಿ ಭಾಷಿಕ ಸಮುದಾಯದ ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಕೂಟದ ವತಿಯಿಂದ ಹಲವು ಸಮುದಾಯ ಹಾಗೂ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ತುಳುವರೆ ಜನಪದ ಕೂಟದಿಂದ ಸ್ಥಾಪನೆಯಾದ ಸಹಕಾರ ಸಂಘವನ್ನು ಅಭಿವೃದ್ಧಿಪಡಿಸುವ ಕಾರ್ಯ ಮುಂದಿನ ದಿನಗಳಲ್ಲಿ ಆಗಲಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿ ಸಹಕಾರ ಸಂಘದ ಆರ್ಥಿಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಕೂಟದ ನಿರ್ದೇಶಕ ಮದನ್ ಶೆಟ್ಟಿ ಮಾತನಾಡಿ, ಕೂಟದ ಸದಸ್ಯರಿಗೆ ಅವರ ಅವಲಂಬಿತರಿಗೆ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದುವರಿಯಲು ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸಲು ಕೂಟದ ವತಿಯಿಂದ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಈ ಕುರಿತು ಸಭೆಯಲ್ಲಿ ಚರ್ಚಿಸಿ ಅಗತ್ಯ ಬೆಂಬಲವನ್ನು ಸೂಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಉಳಿದಂತೆ ಕೂಟದ ಮುಂದಿನ ಕಾರ್ಯ ಚಟುವಟಿಕೆ ಹಾಗೂ ಬಲವರ್ಧನೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಂಘಟನೆಯ ಪ್ರಮುಖರು ಸಂಘಟನೆಯ ಸದಸ್ಯರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ತುಳುವೆರೆ ಜನಪದ ಕೂಟದ ಸ್ಥಾಪಕ ಅಧ್ಯಕ್ಷ ಶೇಖರ್ ಭಂಡಾರಿ, ಕೂಟದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ.ಆರ್. ರವಿ, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ದಾಮೋದರ ಆಚಾರ್ಯ, ಕೂಟದ ತಾಲೂಕು ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ ಇದ್ದರು. ಕಾರ್ಯಕ್ರಮದಲ್ಲಿ ಕೂಟದ ತಾಲೂಕು ಉಪಾಧ್ಯಕ್ಷ ಕಿರಣ್ ಪೂಜಾರಿ, ನಾರಾಯಣ ಪೂಜಾರಿ, ಮಾಧ್ಯಮ ಸಲಹೆಗಾರ ಡಾ. ಹೇಮಂತ್ ಶೆಟ್ಟಿ, ಆರ್ಥಿಕ ಸಲಹೆಗಾರ ಮದನ್ ಶೆಟ್ಟಿ, ನಿರ್ದೇಶಕರಾದ ಸಂಪತ್ ಶೆಟ್ಟಿ, ಭರತ್ ರಾಮ್ ರೈ, ಸಂತೋಷ್ ಪೂಜಾರಿ, ಹಿರಿಯರಾದ ಶಿವಪ್ಪ ಪೂಜಾರಿ, ಸುಮಂತ್, ಶಾಮ್, ವಸಂತ್, ಪುರುಷೋತ್ತಮ್ ಸೇರಿದಂತೆ ಭಾಷಿಕ ಸಮುದಾಯದವರು ಉಪಸ್ಥಿತರಿದ್ದರು.