ಮಡಿಕೇರಿ, ಆ. ೩೧: ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿನ ೨೦೨೪-೨೫ನೇ ಸಾಲಿನ ಹಾಗೂ ೫೮ನೇ ವಾರ್ಷಿಕ ಮಹಾಸಭೆಯನ್ನು ಯೂನಿಯನ್ನಿನ ಅಧ್ಯಕ್ಷರಾದ ಎ.ಕೆ. ಮನು ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಯೂನಿಯನ್ ಸಭಾಂಗಣದಲ್ಲಿ ನಡೆಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮನು ಮುತ್ತಪ್ಪ ಅವರು ಮಾತನಾಡಿ, ಯೂನಿಯನ್‌ನ ಮುಖ್ಯ ಉದ್ದೇಶ, ಸಹಕಾರ ಶಿಕ್ಷಣ, ತರಬೇತಿ, ಪ್ರಚಾರವಾಗಿದೆ. ಈ ಕಾರ್ಯಕ್ರಮಗಳನ್ನು ಮಹಾಮಂಡಳದ ಮಾರ್ಗದರ್ಶನದ ಮೂಲಕ ಜಿಲ್ಲೆಯ ವಿವಿಧ ವಲಯಗಳಿಗೆ ಆಯೋಜಿಸುವುದು, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ/ವರ್ಗ, ಮಹಿಳೆಯರಿಗೆ ತಪ್ಪದೆ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಸಹಕಾರ ಕ್ಷೇತ್ರಕ್ಕೆ ಆಯ್ಕೆಯಾದ ನಿರ್ದೇಶಕರು ಶಿಕ್ಷಣ, ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಬAಧಿಸಿದ ಜ್ಞಾನವನ್ನು ಪಡೆಯುವುದಷ್ಟೇ ಅಲ್ಲದೆ ಅರಿತ ವಿಚಾರವನ್ನು ಕಾರ್ಯಗತಗೊಳಿಸಬೇಕು ಎಂದರು. ಸಹಕಾರ ಕ್ಷೇತ್ರವನ್ನು ಗ್ರಾಮೀಣ ಮಟ್ಟದಲ್ಲಿ ಕೊಂಡೊಯ್ಯಲು ಪ್ರತಿವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ. ಪ್ರಾಮಾಣಿಕ, ನಿಸ್ವಾರ್ಥ ಸೇವೆ ಸಲ್ಲಿಸಿದ ಸಹಕಾರಿಗಳನ್ನು ಗುರುತಿಸಿ ಗೌರವಿಸುವುದು, ಹಿರಿಯ ಸಹಕಾರಿಗಳಿಗೆ ಸಲ್ಲಿಸುವ ಅತಿ ದೊಡ್ಡ ಪುರಸ್ಕಾರವಾಗಿದೆ. ಆದುದರಿಂದ ಸಹಕಾರ ಸಪ್ತಾಹವನ್ನು ಹಬ್ಬದಂತೆ ವಿಜೃಂಭಣೆಯಿAದ ಆಚರಿಸಲು ಮುಂದೆ ಬರಬೇಕು. ಪ್ರವಾಸಕ್ಕೆ ತೆರಳುವ ಸಂಘಗಳು ನಮ್ಮಲ್ಲೇ ಇರುವಂತಹ ವಿಶಿಷ್ಟವಾದ ಸಹಕಾರ ಸಂಘವಾದ ಚೆಟ್ಟಳ್ಳಿ ಪ್ಯಾಕ್ಸ್, ಸಿದ್ದಾಪುರ ಪ್ಯಾಕ್ಸ್, ಕುಶಾಲನಗರ ಪ್ಯಾಕ್ಸ್ ಹಾಗೂ ಕೈಗಾರಿಕೋದ್ಯಮಿಗಳ ಸಂಘಗಳಿಗೆ ಭೇಟಿ ನೀಡಿ ಕಾರ್ಯಯೋಜನೆಯ ಮಾಹಿತಿಯನ್ನು ಪಡೆಯುವುದರಿಂದ ಮತ್ತಷ್ಟು ಕಾರ್ಯೋನ್ಮುಖವಾಗಬಹುದಾಗಿದೆ. ಯೂನಿಯನ್ ವತಿಯಿಂದ ಏರ್ಪಡಿಸುವ ಎಲ್ಲಾ ಶಿಕ್ಷಣ, ತರಬೇತಿ ಕಾರ್ಯಕ್ರಮಗಳಿಗೆ, ಕೆ.ಐ.ಸಿ.ಎಂ.ಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಕರೆ ನೀಡಿ ದತ್ತಿನಿಧಿಯನ್ನು ನೀಡಿದ ಚೆಟ್ಟಳ್ಳಿ ಪ್ಯಾಕ್ಸ್, ಕನ್ನಂಡ ಸಂಪತ್ ಹಾಗೂ ಸುನಿಲ್ ರಾವ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಸಹಕಾರ ಇಲಾಖೆಯಿಂದ ಪ್ರತಿನಿಧಿಗಳು ಗೈರುಹಾಜರಾದ ಕುರಿತು ಚರ್ಚಿಸಿ ವಾರ್ಷಿಕ ಮಹಾಸಭೆಗಳಲ್ಲಿ ಇಲಾಖಾ ಅಧಿಕಾರಿಗಳು ಪಾಲ್ಗೊಂಡಲ್ಲಿ ಸಂಘಗಳ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗುವುದಾಗಿ ಅಭಿಪ್ರಾಯಪಟ್ಟರು.
ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಸಹಕಾರ ದವಸ ಭಂಡಾರಗಳ ಲೆಕ್ಕಪರಿಶೋಧನಾ ಕಾರ್ಯವನ್ನು ತ್ವರಿತವಾಗಿ ಹಾಗೂ ನಿಶುಲ್ಕವಾಗಿ ಜರುಗಿಸುವ ಬಗ್ಗೆ ಚರ್ಚಿಸಿ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಚರ್ಚಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.
ಯೂನಿಯನ್ ನಿರ್ದೇಶಕರಾದ ಕೆ.ಎಂ. ತಮ್ಮಯ್ಯ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ, ಎನ್. ಎ ರವಿ ಬಸಪ್ಪ, ಸಿ.ಎಸ್. ಕೃಷ್ಣ ಗಣಪತಿ, ಎನ್.ಎ. ಉಮೇಶ್ ಉತ್ತಪ್ಪ, ಪಿ.ಸಿ. ಅಚ್ಚಯ್ಯ, ಪಿ.ಬಿ. ಯತೀಶ್, ಎ.ಎಸ್. ಶ್ಯಾಮ್‌ಚಂದ್ರ, ಎನ್.ಎ. ಮಾದಯ್ಯ, ಎಚ್.ಎಂ. ರಮೇಶ್ ಉಪಸ್ಥಿತರಿದ್ದರು. ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರು.