ಕರಿಕೆ, ಆ. ೩೧: ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರಕ್ಷಣೆ ಹೊಂದಿರುವ ವಿಶ್ವದ ಅತೀ ಉದ್ದದ ವಿಷಕಾರಿ ಹಾವಾಗಿರುವ ಕಾಳಿಂಗ ಸರ್ಪಗಳನ್ನು ಅಕ್ರಮವಾಗಿ ಸೆರೆ ಹಿಡಿದಿಟ್ಟುಕೊಂಡು ಹಣದಾಸೆಗಾಗಿ ಮಹಾರಾಷ್ಟç ರಾಜ್ಯದವರಿಗೆ ಕಾಳಿಂಗ ಸರ್ಪದೊಂದಿಗೆ ಅಮಾನವೀಯ ರೀತಿಯಲ್ಲಿ ಫೊಟೋಶೂಟ್ ಹಾಗೂ ವೀಡಿಯೋ ಚಿತ್ರೀಕರಣ ಮಾಡುಕೊಡುತ್ತಿದ್ದ ತಂಡವನ್ನು ಮಡಿಕೇರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಕ್ಕೆ ಪಡೆದು ಪೊನ್ನಂಪೇಟೆ ನ್ಯಾಯಾಲಯದಲ್ಲಿ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿದ್ದಾರೆ.

ಈ ದುಷ್ಕೃತ್ಯದಲ್ಲಿ ಕೊಡಗಿನ ಇಬ್ಬರು ಹಾವು ಪಾರುಗಾಣಿಕರು ಭಾಗಿಯಾಗಿದ್ದು, ಮಹಾರಾಷ್ಟçದ ಇಬ್ಬರು ವ್ಯಕ್ತಿಗಳೂ ಸಿಕ್ಕಿಬಿದ್ದಿದ್ದಾರೆ. ಎಲ್ಲರೂ ಕರ್ನಾಟಕದಲ್ಲಿ ನೋಂದಣಿ ಆಗಿರದ ಎನ್.ಎಸ್.ಎಫ್. ಎಂಬ ಸಂಸ್ಥೆಯ ಹೆಸರಿನಲ್ಲಿ ಹಾವು ಹಿಡಿಯುವ ಕಾರ್ಯ ಮಾಡುತ್ತಿದ್ದುದು ಕಂಡುಬAದಿದೆ. ಸಮಾಜದ ಕಣ್ಣಿಗೆ ಸಮಾಜಸೇವಕರಂತೆ ಕಾಣುವ ಕೆಲವು ಹಾವು ಪಾರುಗಾಣಿಕರು ಹಾವು ಹಿಡಿಯುವ ಕೌಶಲ್ಯವನ್ನು ಉಪಯೋಗಿಸಿಕೊಂಡು ಮಾನವನ ಜೀವಹಾನಿ ತಪ್ಪಿಸುವ ನೆಪದಲ್ಲಿ ಹಾವನ್ನು ಹಿಡಿದು ಮೂಕಪ್ರಾಣಿಯನ್ನು ಅಮಾನವೀಯ ರೀತಿಯಲ್ಲಿ ಅವುಗಳ ಜೀವಕ್ಕೆ ಹಾನಿ ಮಾಡಿ ಅವುಗಳನ್ನು ಉಪಯೋಗಿಸಿಕೊಳ್ಳುತ್ತಿದ್ದ ದಂಧೆ ಇದಾಗಿದ್ದು, ಈ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಜನನಿಬಿಡ ಪ್ರದೇಶದಲ್ಲಿ ಯಾವುದಾದರು ಹಾವುಗಳು ಕಂಡುಬAದಲ್ಲಿ ಮಾನವ ಜೀವಹಾನಿ ಅಥವಾ ಹಾವುಗಳ ಜೀವಹಾನಿ ತಪ್ಪಿಸುವ ಸಲುವಾಗಿ ಹಾವುಗಳನ್ನು ರಕ್ಷಿಸಿ ಬೇರೆ ಸೂಕ್ತ ಜಾಗದಲ್ಲಿ ಬಿಡಬಹುದಾಗಿದೆ. ಈ ಕಾರ್ಯವನ್ನು ಕೈಗೊಳ್ಳುವವರು ಹಾವನ್ನು ಸೆರೆಹಿಡಿಯುವ ಮತ್ತು ಬಿಡುಗಡೆಗೊಳಿಸುವ ಕುರಿತು ೨೪ ಗಂಟೆಗಳೊಳಗಾಗಿ ಸ್ಥಳೀಯ ಅರಣ್ಯ ಕಚೇರಿಗೆ ಮಾಹಿತಿ ನೀಡಬೇಕು.

ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಿಕೊಳ್ಳಲು ಸರಿಸೃಪಗಳು ಅತೀ ಅವಶ್ಯಕವಾಗಿದೆ. ಆದ್ದರಿಂದ ಮಾನವನ ಜೀವಹಾನಿ ಅಥವಾ ಹಾವಿನ ಜೀವಕ್ಕೆ ಹಾನಿಯಾಗುವ ಸಂದರ್ಭ ಇದ್ದರೆ ಮಾತ್ರ ಹಾವನ್ನು ಸೆರೆಹಿಡಿಯುವುದು ಒಳಿತು. ಅದನ್ನು ಬಿಟ್ಟು ಅನವಶ್ಯಕವಾಗಿ ಹಾವನ್ನು ಸೆರೆಹಿಡಿದು ಸ್ಥಳಾಂತರ ಮಾಡಿದಲ್ಲಿ ಮಾನವನ ಜೀವನಕ್ಕೆ ಕೆಡುಕಾಗುತ್ತದೆ. ಏಕೆಂದರೆ ಹಾವುಗಳು ಇಲಿ, ಕಪ್ಪೆ ಮುಂತಾದವುಗಳನ್ನು ಭಕ್ಷಿಸುವ ಮೂಲಕ ಅವುಗಳ ಸಂತತಿಯನ್ನು ಹತೋಟಿಯಲ್ಲಿಡುತ್ತವೆ. ಇನ್ನೂ ಕೆಲವು ಕಾಳಿಂಗ ಸರ್ಪದಂತಹ ಹಾವುಗಳು ಇತರೆ ಹಾವುಗಳನ್ನೇ ಭಕ್ಷಿಸಿ ಹಾವುಗಳ ಸಂಖ್ಯೆಯನ್ನು ಹತೋಟಿಯಲ್ಲಿಡುತ್ತದೆ. ತಮ್ಮ ಆಹಾರ ಪದ್ಧತಿಯಿಂದ ಪರಿಸರ ಸಮತೋಲನಕ್ಕೆ ಕಾರಣವಾಗುವ ಹಾವುಗಳ ಮಹತ್ವದ ಸೂಕ್ಷö್ಮ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಉಚಿತವಾಗಿ ಹಾವುಗಳ ರಕ್ಷಣೆ ಮಾಡಬೇಕು. ಆದರೆ ಹಾವನ್ನು ಹಿಡಿಯುವ ಕೌಶಲ್ಯ ಬೆಳೆಸಿಕೊಂಡು ಆ ಕೌಶಲ್ಯವನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ನಕಲಿ ಪಾರುಗಾಣಿಕರನ್ನು ಕಾನೂನು ಉಲ್ಲಂಘನೆಗೆ ದಂಡಿಸುವುದು ಅನಿವಾರ್ಯ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಹಾವುಗಳನ್ನು ಅನಧಿಕೃತವಾಗಿ ಸೆರೆ ಹಿಡಿಯುವುದು, ಅನಧಿಕೃತವಾಗಿ ಇಟ್ಟುಕೊಳ್ಳುವುದು, ಪ್ರದರ್ಶನದ ವಸ್ತುವಾಗಿ ಬಳಸಿಕೊಳ್ಳುವುದು ಮನಸೋ ಇಚ್ಛೆ ಎಲ್ಲೆಂದರಲ್ಲಿ ಬಿಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಉಲ್ಲಂಘನೆಯಾಗುತ್ತದೆ. ಇದು ಗಂಭೀರ ಅಪರಾಧವಾಗಿದ್ದು ೩ ರಿಂದ ೭ ವರ್ಷದವರೆಗೆ ಸಜೆಯಾಗುತ್ತದೆ. ಆದ್ದರಿಂದ ಮಾನವ-ಹಾವು ಸಂಘರ್ಷ ನಿರ್ವಹಣೆಯ ಹೊಣೆ ಹೊತ್ತಿರುವ ಸಂಸ್ಥೆಗಳು ಮತ್ತು ಸ್ವಯಂ ಸೇವಕರು ಪಾರುಗಾಣಿಕಾ ಕಾರ್ಯಾಚರಣೆಯ ರೂಪುರೇಷೆಗಳನ್ನು ಅರಿತು ಕಾರ್ಯನಿರ್ವಹಿಸಬೇಕಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಕೆ.ವಿ, ಪ್ರಭಾರ ವಲಯ ಅರಣ್ಯಾಧಿಕಾರಿ ಜಗದೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಬಿ.ಕೆ, ಶ್ರೀನಿವಾಸ್ ಆರ್, ಹಾಲೇಶ್ ಎಂ.ಸಿ. ಭಾಗಿಯಾಗಿದ್ದರು. -ಸುಧೀರ್ ಹೊದ್ದೆ