ಕೂಡಿಗೆ, ಆ. ೩೧: ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ.ಎನ್. ಕುಮಾರಪ್ಪ ಅಧ್ಯಕ್ಷತೆಯಲ್ಲಿ ರೈತ ಭವನದ ಸಭಾಂಗಣದಲ್ಲಿ ನಡೆಯಿತು.

ಸಂಘ ಮತ್ತಷ್ಟು ಲಾಭಗಳಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಸದಸ್ಯರಾದ ವಿ.ಪಿ. ಶಶಿಧರ್, ಹೆಚ್.ಬಿ. ಚಂದ್ರಪ್ಪ, ಟಿ.ಬಿ. ಜಗದೀಶ್, ಶಿವಣ್ಣ, ಪೊನ್ನಪ್ಪ, ಕೆ.ಕೆ ನಾಗರಾಜಶೆಟ್ಟಿ, ಪಾರ್ವತಿ, ಜರ್ಮಿ ಡಿಸೋಜಾ ಸೇರಿದಂತೆ ಹಲವು ಸದಸ್ಯರುಗಳು ಸಲಹೆ ನೀಡಿದರು.

ಸಂಘದ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭಗಳು ನಡೆಯುವ ಸಂದರ್ಭ ಮಂಟಪ ಮೇಲ್ವಿಚಾರಕರ ಸಂಪರ್ಕಕ್ಕೆ ವಾಕಿಟಾಕಿ ವ್ಯವಸ್ಥೆ ಸೇರಿದಂತೆ ವಧು-ವರರ ಕೊಠಡಿ ಬಳಿ ಸಿಸಿ ಕ್ಯಾಮರ ಅಳವಡಿಕೆ, ಸಭಾಂಗಣ ಸೇರಿದಂತೆ ರೂಂಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ, ಡೈನಿಂಗ್ ಹಾಲ್ ನಲ್ಲಿ ಸ್ಟೋರ್ ರೂಂ ವ್ಯವಸ್ಥೆ ಒದಗಿಸಲು ಒತ್ತಾಯ ಕೇಳಿಬಂತು. ಸಂಘದ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಕ್ತ ಪರೀಕ್ಷಾ ಕೇಂದ್ರ ಆರಂಭಿಸುವ ಯೋಜನೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಸಂಘವು ೧೯೪೩ರಲ್ಲಿ ಪ್ರಾರಂಭಗೊAಡು ೮೨ ವರ್ಷಗಳನ್ನು ಪೂರೈಸಿದ್ದು ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ ಕಾರ್ಯವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ೨೦೨೪-೨೫ ನೇ ಸಾಲಿನಲ್ಲಿ ಒಟ್ಟು ೬೯.೭೬ ಕೋಟಿ ವಹಿವಾಟು ನಡೆಸಿ ರೂ ೪೮,೭೯,೯೨೮ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಜೆ. ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ. ಪ್ರಸನ್ನ, ಎ.ಪಿ. ನೀಲಮ್ಮ, ಆರ್.ಕೆ. ಚಂದ್ರ, ಕೆ.ಎಸ್. ರತೀಶ್, ಹೆಚ್.ಟಿ. ನಾಗೇಶ್, ಹೆಚ್.ಟಿ. ಮೋಹನ್, ಸಿ.ಜಿ. ಲತಾ, ಪಿ.ಪಿ. ತಿಲಕ್ ಕುಮಾರ್, ಮೊಹಮ್ಮದ್ ಸಾಹೀಹ್, ಸಿ.ಎನ್. ಲೋಕೇಶ್, ಕೆಡಿಸಿಸಿ ಬ್ಯಾಂಕ್ ನಾಮ ನಿರ್ದೇಶಕರಾದ ಜಲಜಾ ಶೇಖರ್ ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಇದ್ದರು.