ವೀರಾಜಪೇಟೆ, ಆ. ೩೧: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕುಂಜಿಲಗೇರಿಯಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಅಳವಡಿಸಿದ ನೂತನ ವಿದ್ಯುತ್ ಮಾರ್ಗವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಈ ಹಿಂದೆ ಕುಂಜಿಲಗೇರಿ ನಿವಾಸಿಗಳಿಗೆ ಪಾರಾಣೆ-ಬೊಳ್ಳುಮಾಡು ೧೧ ಕೆ.ವಿ. ಹೆಚ್‌ಟಿ. ಫೀಡರಿನ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿತ್ತು. ಆದರೆ ಮಳೆಗಾಲದಲ್ಲಿ ಪಾರಾಣೆಯಲ್ಲಿ - ಮೂರ್ನಾಡು ೩೩/೧೧ ಕೆ.ವಿ. ಉಪಕೇಂದ್ರದಲ್ಲಿ ಅಡಚಣೆಯಾದಾಗ, ಕುಂಜಿಲಗೇರಿ ಗ್ರಾಹಕರಿಗೆ ಹಲವು ದಿನಗಳ ಕಾಲ ವಿದ್ಯುತ್ ಸಂಪರ್ಕ ಇರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ವಿದ್ಯುತ್ ಉಪಕೇಂದ್ರದಿAದ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೊಳ್ಳುಮಾಡು ಸೇತುವೆಯಿಂದ ಕುಂಜಿಲಗೇರಿ ಮೊದಲ ಟ್ರಾನ್ಸ್ಫಾರ್ಮರ್‌ವರೆಗೆ ಸುಮಾರು ೩ ಕಿಲೋ ಮೀಟರ್ ಉದ್ದಕ್ಕೆ, ಇನ್ಸಲೇಟೆಡ್ ಕವರ್ಡ್ ಕಂಡಕ್ಟರ್ ಅಳವಡಿಸುವುದರ ಮೂಲಕ ಹಾಗೂ ೮೫ ಹೊಸ ವಿದ್ಯುತ್ ಕಂಬಗಳನ್ನು ಉಪಯೋಗಿಸಿ ಸುಮಾರು ರೂ. ೧ ಕೋಟಿ ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಇಲಾಖೆ ಮುಖಾಂತರ ಮಾಡಲಾಗಿದೆ. ಈ ಸಂದರ್ಭ ಕಾಂಗ್ರೆಸ್ ವಲಯ ಅಧ್ಯಕ್ಷ ಬಿ. ರಾಜ, ಪ್ರಮುಖರಾದ ದಯಾ ಬಿ.ಹೆಚ್., ಲೋಕೇಶ್ ಮಾದಯ್ಯ, ಅಜಿತ್, ನವೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.