ಸೋಮವಾರಪೇಟೆ, ಆ. ೩೧: ಸೋಮವಾರಪೇಟೆ ಪಟ್ಟಣದಲ್ಲಿರುವ ಹಲವಷ್ಟು ಬಾರ್‌ಗಳಿಂದ ಗ್ರಾಮೀಣ ಭಾಗಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಲಾಯಿತು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಮುದ್ದುಮಹದೇವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕ್ರಮ ಮದ್ಯ ಸರಬರಾಜು ಹಾಗೂ ಮಾರಾಟದ ಬಗ್ಗೆ ಆರೋಪಗಳು ಕೇಳಿ ಬಂದವು.

ಪ್ರಮುಖವಾಗಿ ಬಜೆಗುಂಡಿ, ಕಾನ್ವೆಂಟ್‌ಬಾಣೆ, ಹಾನಗಲ್ಲು ಬಾಣೆ, ಗಾಂಧಿನಗರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಅಕ್ರಮ ಮದ್ಯ ಸಾಗಾಟ, ಮಾರಾಟ ನಡೆಯುತ್ತಿದೆ. ಕೆಲವು ಆಟೋಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಇವುಗಳಿಗೆ ಪೊಲೀಸರು ಕಡಿವಾಣ ಹಾಕಬೇಕೆಂದು ಚೌಡ್ಲು ಗಾಂಧಿನಗರದ ಪ್ರತಾಪ್ ಒತ್ತಾಯಿಸಿದರು.

ಪಟ್ಟಣದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಮಾಮೂಲಾಗಿದೆ. ರಾತ್ರಿ ವೇಳೆಯಲ್ಲಿ ಮಾತ್ರ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಈ ಕೆಲಸವನ್ನು ಹಗಲಿನಲ್ಲೂ ಮಾಡಬೇಕೆಂದು ಸಭೆ ಒತ್ತಾಯಿಸಿತು. ಪಟ್ಟಣದ ವಲ್ಲಭಬಾಯಿ ರಸ್ತೆಯಲ್ಲಿ ಪುಂಡ ಪೋಕರಿಗಳ ಹಾವಳಿ ಮಿತಿಮಿರಿದೆ. ಮದ್ಯಪಾನ ಮಾಡುವುದು, ಗಾಂಜಾ ಸೇವನೆ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇಲಾಖೆಯಿಂದ ಸಿ.ಸಿ. ಕ್ಯಾಮೆರಾ ಅಳವಡಿಸಬೇಕೆಂದು ಪ.ಪಂ. ಉಪಾಧ್ಯಕ್ಷೆ ಮೋಹಿನಿ ಹೇಳಿದರು.

ಬೀಟ್ ಪೊಲೀಸರು ಗ್ರಾಮ ಗಳಿಗೆ ಕೇವಲ ಬೀಟ್ ಬಂದು ಹೋಗಬಾರದು. ಗ್ರಾಮಸ್ಥರನ್ನು ಮಾತನಾಡಿಸಬೇಕು. ಸ್ಥಳೀಯ ವಾಗಿಯೇ ಮಾಹಿತಿ ಕಲೆ ಹಾಕಬೇಕು. ಹಾಗಾದಾಗ ಹೆಚ್ಚಿನ ಅಪರಾಧಗಳನ್ನು ಆರಂಭ ದಲ್ಲಿಯೇ ತಡೆಗಟ್ಟಬಹುದಾಗಿದೆ ಎಂದು ಹಣಕೋಡು ಮಹೇಶ್ ಹೇಳಿದರು.

ರಾತ್ರಿ ವೇಳೆಯಲ್ಲಿ ಪಟ್ಟಣ ಸೇರಿದಂತೆ ಕರ್ಕಳ್ಳಿ, ಗಾಂಧಿನಗರ, ಚೌಡ್ಲು, ಹಾನಗಲ್‌ಬಾಣೆ ಭಾಗದಲ್ಲಿ ೧೧೨ ವಾಹನದಲ್ಲಿ ಪೊಲೀಸರು ಬೀಟ್ ಬರಬೇಕು ಎಂದು ಸಭೆಯಲ್ಲಿದ್ದವರು ಇಲಾಖೆಯ ಗಮನಕ್ಕೆ ತಂದರು. ಎರಪಾರೆ ಕಾಲೋನಿಯಲ್ಲಿ ಕಳೆದ ೨೦ ವರ್ಷಗಳಿಂದ ವ್ಯಕ್ತಿಯೋರ್ವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈವರೆಗೆ ಪ್ರಕರಣ ದಾಖಲಾಗಿಲ್ಲ. ಪರಿಣಾಮ ಕಾಲೋನಿಯ ಯುವಕರು ಕುಡಿತಕ್ಕೆ ದಾಸರಾಗುತ್ತಿದ್ದಾರೆ ಎಂದು ಸುಜಿತ್ ಹೇಳಿದರು.

ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಇವರ ಕಡತ ನಾಪತ್ತೆ ಬಗ್ಗೆ ಪೊಲೀಸ್ ದೂರು ನೀಡಿದ್ದರೂ ಈವರೆಗೆ ವರದಿ ನೀಡಿಲ್ಲ ಎಂದು ಮೋಹಿತಿ ಹೇಳಿದರು. ನಾವು ಮುಖ್ಯಾಧಿಕಾರಿಗೆ ಹಿಂಬರಹ ಕೊಟ್ಟಿದ್ದೇವೆ. ನಿಮ್ಮ ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆಸಿ, ದೂರು ನೀಡಿದರೆ ಸಂಬAಧಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಮುದ್ದು ಮಹದೇವ ಹೇಳಿದರು. ಸಭೆಯಲ್ಲಿ ಪ್ರಮುಖರಾದ ಬಿ.ಈ. ಜಯೇಂದ್ರ, ಎಸ್.ಎ. ಪ್ರತಾಪ್, ಚಿಂತು, ಮಂಜುನಾಥ್, ಹೆಚ್.ಎ. ನಾಗರಾಜು ಸೇರಿದಂತೆ ಇತರರು ಇದ್ದರು.