ಶ್ರೀಮಂಗಲ, ಆ. ೩೧: ಕೊಡವ ಜನಾಂಗದ ಸಂಸ್ಕೃತಿ, ಆಚಾರ ವಿಚಾರ ಪರಂಪರೆಗಳನ್ನು ಪಟ್ಟೋಲೆ ಪಳಮೆ ಕೃತಿಯಲ್ಲಿ ದಾಖಲಿಸಿ ಕೊಡವ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರು ಕೊಡವ ಜನಾಂಗದಲ್ಲಿ ಪ್ರಾತಃ ಸ್ಮರಣೀಯರು ಎಂದು ಸಾಹಿತಿ ಡಾ. ಕಾಳಿಮಾಡ ಕೆ.ಶಿವಪ್ಪ ಬಣ್ಣಿಸಿದರು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟ ಜಂಟಿ ಆಶ್ರಯದಲ್ಲಿ ನಡೆದ ನಡಿಕೇರಿಯಂಡ ಚಿಣ್ಣಪ್ಪ ಅವರ ೧೫೦ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಚಿಣ್ಣಪ್ಪ ಅವರು ಮಹಾನ್ ಚೇತನರಾಗಿದ್ದು ಅವರು ಮಾಡಿದ ಸಾಧನೆ ಬಹುಶಃ ಇಲ್ಲಿಯವರೆಗೆ ಯಾರು ಮಾಡಿಲ್ಲ. ಮುಂದೆಯೂ ಮಾಡಲು ಸಾಧ್ಯವಿಲ್ಲ. ಕೊಡವ ಸಂಸ್ಕೃತಿ, ಜನಪದ ಕಲೆ, ಇತಿಹಾಸ, ಆಚಾರ ವಿಚಾರ, ಹಬ್ಬ ಹರಿದಿನಗಳನ್ನು ಲಿಖಿತ ರೂಪದಲ್ಲಿ ತರುವಲ್ಲಿ ಅವರು ಪಟ್ಟ ಶ್ರಮ ಊಹಿಸಲು ಸಾಧ್ಯವಿಲ್ಲ. ಜಾನಪದ ಸಂಸ್ಕೃತಿಯಲ್ಲಿ ಯಾವುದೇ ಲಿಖಿತವಾದ ದಾಖಲೆ ಇಲ್ಲದಂತ ಕಾಲಘಟ್ಟದಲ್ಲಿ ಜನರಿಂದ ಮಾಹಿತಿಗಳನ್ನು ಪಡೆದು ಸಂಗ್ರಹಿಸಿ ಅದನ್ನು ಲಿಖಿತ ರೂಪದಲ್ಲಿ ತಂದ ಅವರ ಪ್ರಯತ್ನ, ಅವರ ಶ್ರಮ ಇಂದು ಪುಸ್ತಕ ರೂಪದಲ್ಲಿ ನಮ್ಮ ಮುಂದೆ ಇರುವುದು ಹೆಗ್ಗಳಿಕೆಯಾಗಿದೆ ಎಂದರು. ೧೮೭೫ರಲ್ಲಿ ಹುಟ್ಟಿ ೧೯೩೧ ರಲ್ಲಿ ಮೃತಪಟ್ಟರು. ೫೬ ವರ್ಷದ ಜೀವಿತಾವಧಿಯಲ್ಲಿ ಅವರು ಪಟ್ಟೋಲೆ ಪಳಮೆ ಸೇರಿದಂತೆ ಹವಲು ಸಾಹಿತ್ಯವನ್ನು ರಚನೆ ಮಾಡಿ ಅವುಗಳು ಇಂದು ಆಧಾರ ಗ್ರಂಥವಾಗಿ ಉಳಿದಿದೆ. ಅವರು ೫೬ ವರ್ಷದಲ್ಲಿ ನೀಡಿದ ಸೇವೆ ಸಾಧನೆ ದೊಡ್ಡದಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಜಿಲ್ಲೆಯ ಮೂಲೆಮೂಲೆ ಓಡಾಡಿ ಕೊಡವ ಜನಾಂಗದ ಸಂಪ್ರದಾಯಿಕ ಅಂಶಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿರುವುದು ಚಿಣ್ಣಪ್ಪ ಅವರ ಅಮೋಘ ಸಾಧನೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಸಮಾಜದ ಅಧ್ಯಕ್ಷ ಹಾಗೂ ಜಾನಪದ ತಜ್ಞ ಕಾಳಿಮಾಡ ಮೋಟಯ್ಯ, ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಡಿಕೇರಿಯಂಡ ಚಿಣ್ಣಪ್ಪ ಅವರು ಕೊಡವ ಸಾಹಿತ್ಯ ಜಾನಪದ ಕಲೆ ಆಚಾರ ವಿಚಾರ ಇತಿಹಾಸ ಇತ್ಯಾದಿಗಳನ್ನು ದಾಖಲಿಸುವ ಉದ್ದೇಶದಿಂದ ಅವುಗಳನ್ನು ಅರಿತು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ನಿಟ್ಟಿನಲ್ಲಿ ಅವರು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಅವರನ್ನು ಗೌರವಿಸುವ ನಿಟ್ಟಿನಲ್ಲಿ ೧೫೦ನೇ ಜನ್ಮೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಅಜ್ಜಿನಿಕಂಡ ಇನಿತ ಮಾಚಯ್ಯ ಮಾತನಾಡಿ, ನಡಿಕೇರಿಯಿಂದ ಚಿಣ್ಣಪ್ಪ ಅವರು ವರ್ಣನಾತೀತರು, ಕೊಡವ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು. ವೇದಿಕೆಯಲ್ಲಿ ನಡಿಕೇರಿಯಂಡ ಕುಟುಂಬದ ಉಪಾಧ್ಯಕ್ಷ ಸೋಮಯ್ಯ ಎನ್. ಎಂ ಉಪಸ್ಥಿತರಿದ್ದರು.

ಅತಿಥಿಗಳ ಪರಿಚಯವನ್ನು ಕೊಡವ ಸಮಾಜದ ನಿರ್ದೇಶಕಿ ಮೂಕಳೆರ ಕಾವ್ಯ ಮಧು ಹಾಗೂ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಬಲ್ಯಮೀದೇರಿರ ಆಶಾ ಶಂಕರ್ ಮಾಡಿದರು. ಪೊಮ್ಮಕ್ಕಡ ಕೂಟದ ಗೌರವ ಕಾರ್ಯದರ್ಶಿ, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಅವರು ಸ್ವಾಗತಿಸಿ, ನಿರೂಪಿಸಿದರು. ಮೂಕಳೆರ ಆಶಾ ಪೂಣಚ್ಚ ವಂದಿಸಿದರು.