= ಸುರೇಶ್ ಬಿಳಿಗೇರಿ
ಮಡಿಕೇರಿ. ಆ. ೩೧: ಯರವ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡಿದಲ್ಲದೆ ಬಲವಂತವಾಗಿ ಮತ್ತೊಬ್ಬನ ಜೊತೆ ವಿವಾಹ ಮಾಡಿಸಿದ ಪ್ರಕರಣ ಸಂಬAಧಪಟ್ಟAತೆ ಹಾಗೂ ಬಾಲಕಿಯ ವಯಸ್ಸಿನ ಪ್ರಮಾಣ ಪತ್ರವನ್ನು ತಪ್ಪಾಗಿ ನೀಡಿದ ಆರೋಪದಡಿ ಮಡಿಕೇರಿ ಮೆಡಿಕಲ್ ಕಾಲೇಜಿನ ಫೋರೆನ್ಸಿಕ್ ವೈದ್ಯ, ಲೈಂಗಿಕ ಕಿರುಕುಳ ನೀಡಿದ ತೋಟ ಮಾಲೀಕ, ಪೊನ್ನಂಪೇಟೆ ಶಿಶು ಕಲ್ಯಾಣಾಧಿಕಾರಿ, ಗೋಣಿಕೊಪ್ಪ ಮೆಡಿಕಲ್ ಆಫೀಸರ್ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಶ್ರೀಮಂಗಲ ಠಾಣೆಯಲ್ಲಿ ಹತ್ತಾರು ಸೆಕ್ಷನ್ಗಳನ್ನು ಒಳಗೊಂಡ ಎಫ್.ಐ.ಆರ್ ದಾಖಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯ ದೂರಿನನ್ವಯ ವೀರಾಜಪೇಟೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಸ್ಥಳೀಯ ಪೊಲೀಸರು ಹೆಚ್ಚಿನ ಸಾಕ್ಷö್ಯಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ವಿವರ: ೨೦೨೫ರ ಫೆಬ್ರವರಿ ತಿಂಗಳಲ್ಲಿ ಸಂತ್ರಸ್ತೆ ಹೆಸರಿನಲ್ಲಿ ಪೊನ್ನಂಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರವೊಂದು ಬರುತ್ತದೆ. ಆ ದೂರಿನ ಪತ್ರದಲ್ಲಿ ತನಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ತೋಟದ ಮಾಲೀಕರು, ರಘು ಎಂಬಾತನ ಜೊತೆ ಬಾಲ್ಯವಿವಾಹ ಮಾಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿರುತ್ತದೆ. ಆದರೆ ಇಲಾಖೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ ಪರಿಣಾಮ ಸಂತ್ರಸ್ತೆಯ ಹೆಸರಿನಲ್ಲಿ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿö್ಮ ಚೌಧರಿ ಅವರಿಗೆ ತಾ. ೨೭-೦೩-೨೦೨೫ರಂದು ಈ ಬಗ್ಗೆ ಮನವಿ ಪತ್ರ ಬರೆಯಲಾಗುತ್ತದೆ. ಪತ್ರದ ಮೂಲಕ ಬಂದಿದ್ದ ದೂರನ್ನು ಓದಿದ ಡಾ. ನಾಗಲಕ್ಷಿö್ಮ ಚೌಧರಿ ಅವರು ತಕ್ಷಣ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರವನ್ನು ರವಾನಿಸುತ್ತಾರೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಮಡಿಕೇರಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಾ. ೧೮-೦೬-೨೦೨೫ರಲ್ಲಿ ತಕ್ಷಣ ಕ್ರಮ ಜರುಗಿಸುವಂತೆ ಆದೇಶ ಪತ್ರ ಬರುತ್ತದೆ. ಪ್ರಕರಣದ ಬಗ್ಗೆ ಏನು ಮಾಹಿತಿಯಿಲ್ಲದ ಈ ಇಲಾಖಾ ಅಧಿಕಾರಿಗಳು, ಇದರ ಬೆನ್ನಹಿಂದೆ ಬಿದ್ದು ಮಾಹಿತಿ ಕಲೆಹಾಕಿ ಸಂತ್ರಸ್ತೆ ಯುವತಿಯನ್ನು ಭೇಟಿ ಮಾಡಿ ಪ್ರಕರಣದ ಸತ್ಯಾಸತ್ಯತೆ ಅರಿಯುತ್ತಾರೆ. ಸಮಾಲೋಚನೆ ನಡೆಸುವ ವೇಳೆ ಸಂತ್ರಸ್ತೆ ಹೇಳಿದ ಹೇಳಿಕೆಯನ್ನು ಇಲಾಖೆಯ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ತುಳಸಿ ಅವರು ದಾಖಲಿಸಿಕೊಳ್ಳುತ್ತಾರೆ. ಆಕೆಯ ಎಲ್ಲಾ ಹೇಳಿಕೆಗಳನ್ನು ದಾಖಲಿಸಿಕೊಂಡು ತಕ್ಷಣ ತಮ್ಮ ಕಚೇರಿಯಿಂದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಮತ್ತು ಶ್ರೀಮಂಗಲ ಠಾಣೆಗೆ ಈ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆ ತಾ. ೨೮-೦೮-೨೦೨೫ರಲ್ಲಿ ಕೋರುತ್ತಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಏನಿದು ಲೈಂಗಿಕ ಕಿರುಕುಳ ಪ್ರಕರಣ: ಸಂತ್ರಸ್ತೆ ಹೇಳಿದ್ದೇನು?
೨೦೨೩-೨೪ನೇ ಸಾಲಿನಲ್ಲಿ ಸಂತ್ರಸ್ತೆ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡುತ್ತಿದ್ದು, ಆಕೆಗೆ ೧೭ ವರ್ಷ ವಯಸ್ಸಾಗಿತ್ತು. ಆಕೆ ತಂದೆ ಕಡ್ಡಿ, ತಾಯಿ ಕಾವೇರಿ, ಮಾವ ರಘು ಅಲಿಯಾಸ್ ಅಣ್ಣು ಹಾಗೂ ಸಹೋದರಿಯರೊಂದಿಗೆ ಬಲ್ಯಮಂಡೂರು ಗ್ರಾಮದ ಸೃಜನ್ ಎಂಬವರ ತೋಟದಲ್ಲಿ ವಾಸಿಸುತ್ತಿದ್ದಳು. ಈ ಸಂದರ್ಭದಲ್ಲೇ ಮಾವ ಅಣ್ಣು ಅವರನ್ನು ಪ್ರೀತಿಸುತ್ತಿದ್ದುದ್ದಾಗಿ ಹೇಳಿದ್ದಾಳೆ.
ಮಾಲೀಕ ಸೃಜನ್ ನಿರಂತರವಾಗಿ ತನಗೆ ಮತ್ತು ತನ್ನ ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ಯುವತಿ ಮಹಿಳಾ ಅಧಿಕಾರಿಗಳು ಸಮಾಲೋಚನೆ ನಡೆಸಿದ ವೇಳೆ ಹೇಳಿಕೆ ನೀಡಿದ್ದು, ಆ ಪ್ರಕಾರವೇ ಪ್ರಕರಣ ದಾಖಲಿಸಲಾಗಿದೆ. ಸೃಜನ್ ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಓದಲು ಕೂಡ ಏಕಾಗ್ರತೆ ಬರುತ್ತಿರಲಿಲ್ಲ ಎಂದು ಆಕೆ ಸಮಾಲೋಚನೆ ವೇಳೆ ತಿಳಿಸಿದ್ದಾಳೆ. ಅಲ್ಲದೆ ತನ್ನ ಎಲ್ಲಾ ದಾಖಲಾತಿಗಳು ಮಾಲೀಕರ ಬಳಿಯೇ ಇದ್ದು ಅದನ್ನು ಅವರು ಕೊಡಲು ಹಿಂದೇಟು ಹಾಕುತ್ತಿದ್ದರು ಎಂದು ಆಕೆಯ ಹೇಳಿಕೆಯಲ್ಲಿ ಉಲ್ಲೇಖಗೊಂಡಿದೆ. ಇದೇ ಸಂದರ್ಭದಲ್ಲಿ ತಾನು ಪ್ರೀತಿಸುತ್ತಿದ್ದ ಮಾವ ಅಣ್ಣು ಅವರೊಂದಿಗೆ ತೋಟದ ಮಾಲೀಕರು ಡಿಸೆಂಬರ್ ೨೦೨೪ರಲ್ಲಿ ದೇವಾಲಯವೊಂದರಲ್ಲಿ ತನಗೆ ವಿವಾಹ ಮಾಡಿಸಿದ್ದರೆಂದು ಸಂತ್ರಸ್ತೆ ತಿಳಿಸಿದ್ದಾಳೆ.
ತಾನು ೩ ತಿಂಗಳ ಗರ್ಭಿಣಿಯಾದ ಬಳಿಕ ಇದೀಗ ತನ್ನನ್ನು ಹಾಗೂ ತನ್ನ ಪತಿಯನ್ನು ಮಾಲೀಕರು ತೋಟದ ಲೈನ್ಮನೆಯಿಂದ ಹೊರಹಾಕಿದ್ದು, ಈಗ ಮತ್ತೊಬ್ಬರ ಆಶ್ರಯದಲ್ಲಿರುವುದಾಗಿ ಆಕೆ ತಿಳಿಸಿದ್ದಾಳೆ. ತನಗೆ ಬಾಲ್ಯ ವಿವಾಹ ಮಾಡಿಸಿದ ವಿಷಯದಲ್ಲಿ ತೋಟ ಮಾಲೀಕರೊಂದಿಗೆ ತನ್ನ ತಂದೆ-ತಾಯಿ ಕೂಡ ಶಾಮೀಲಾಗಿದ್ದು, ಇತ್ತೀಚೆಗೆ ತಂದೆ-ತಾಯಿ ಬೇರೆಯವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾಳೆ.
ರಾಜ್ಯ ಮಹಿಳಾ ಆಯೋಗಕ್ಕೆ ಬರೆದ ಪತ್ರದಲ್ಲಿ ತಾನು ಜೀತದಾಳಿನಂತೆ ಬದುಕುತ್ತಿದ್ದು, ಪುಟ್ಟ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದು ತನ್ನ ಗಂಡನೂ ಕೂಡ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದಾಳೆ.
ಸುಳ್ಳು ವಯಸ್ಸಿನ ಸರ್ಟಿಫಿಕೇಟ್ ನೀಡಿದ ವೈದ್ಯ
ಸಂತ್ರಸ್ತೆ ಯುವತಿಯ ಪ್ರಕಾರ ಆಕೆಯ ಶಾಲಾ ದಾಖಲಾತಿಯಲ್ಲಿ ಆಕೆಯ ಜನ್ಮ ದಿನಾಂಕ ೧೪.೦೬.೨೦೦೭. ಆದರೆ ಮಡಿಕೇರಿಯ ಫೋರೆನ್ಸಿಕ್ ಮೆಡಿಸಿನ್ ವೈದ್ಯ ರವಿ ಕುಮಾರ್ ಎಂಬವರು ಈಕೆಗೆ ೨೨ ರಿಂದ ೨೫ ವರ್ಷ ಇರಬಹುದೆಂದು ಇದೇ ಆಗಸ್ಟ್ ೧೮ರಂದು ವರದಿ ಕೊಟ್ಟಿದ್ದಾರೆ. ಆಗ ಮೇಲಿನ ಪ್ರಕರಣ ದಾಖಲಾಗಿರಲಿಲ್ಲ. ಆದರೆ ದೂರಿನ ಪತ್ರ ಪೊನ್ನಂಪೇಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಂದಿತ್ತು. ಇದರ ಬಳಿಕವಷ್ಟೇ ಮಡಿಕೇರಿಯಲ್ಲಿ ವೈದ್ಯ ರವಿಕುಮಾರ್ ಸಂತ್ರಸ್ತೆಗೆ ೨೨ ರಿಂದ ೨೫ ವರ್ಷವಿರಬಹುದೆಂದು ಪ್ರಮಾಣ ಪತ್ರ ನೀಡಿದ್ದಾರೆ. ಯಾರೂ ಕೇಳದೆಯೇ ಯಾಕೆ ಅವರು ವಯಸ್ಸು ಪ್ರಮಾಣ ಪತ್ರ ನೀಡಿದ್ದಾರೆ ಎಂಬುದು ಕೂಡ ನಿಗೂಢ. ಅಲ್ಲದೆ ವಯಸ್ಸಿನ ದೃಢೀಕರಣ ಪತ್ರವನ್ನು ದಂತ ವೈದ್ಯರು, ಮಕ್ಕಳ ವೈದ್ಯರು ಮತ್ತು ಮೂಳೆ ಮತ್ತು ಕೀಲುಗಳ ವೈದ್ಯರು ಒಟ್ಟಾಗಿ ಪರಿಶೀಲಿಸಿ ವೈಜ್ಞಾನಿಕವಾಗಿ ನೀಡಬಹುದೇ ವಿನಃ ಫೋರೆನ್ಸಿಕ್ ಸೈನ್ಸ್ನ ವೈದ್ಯರು ನೀಡಲು ಯಾವುದೇ ಅಧಿಕಾರವಿಲ್ಲ ಎನ್ನಲಾಗಿದೆ.
ಯಾರ ಯಾರ ಮೇಲೆ ಪ್ರಕರಣ?
ಸಂತ್ರಸ್ತೆ ಕೊಟ್ಟ ದೂರಿನನ್ವಯ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯನ್ನು ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾದ ಆಕೆ ಗಂಡ ಅಣ್ಣು ಅಲಿಯಾಸ್ ರಘು, ತೋಟದ ಮಾಲೀಕ ಸೃಜನ್, ಸಂತ್ರಸ್ತೆಯ ತಂದೆ ಕಡ್ಡಿ, ತಾಯಿ ಕಾವೇರಿ, ಅರ್ಜಿ ಬಂದರೂ ಪರಿಶೀಲಿಸದ ಪೊನ್ನಂಪೇಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ, ಅಪ್ರಾಪ್ತ ಬಾಲಕಿಗೆ ಹೆರಿಗೆ ಮಾಡಿಸಿ ವರದಿ ಮಾಡದ್ದಕ್ಕಾಗಿ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ತಪ್ಪು ವಯಸ್ಸಿನ ದೃಢೀಕರಣ ಪತ್ರ ನೀಡಿದ ಮಡಿಕೇರಿಯ ಮೆಡಿಕಲ್ ಕಾಲೇಜು ಫೋರೆನ್ಸಿಕ್ ಸೈನ್ಸ್ ವೈದ್ಯ ರವಿ ಕುಮಾರ್ ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ಐಟಿಡಿಪಿ ಇಲಾಖೆಯ ಅಧಿಕಾರಿಗಳು ಬಾಲ ಕಾರ್ಮಿಕ ಕಾಯ್ದೆಯಡಿ ಕೂಡ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಸಂತ್ರಸ್ತೆ ಮದುವೆಯಾದ ದೇವಸ್ಥಾನದ ಆಡಳಿತ ಮಂಡಳಿಯ ಮೇಲೂ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.
ಬಾಲ್ಯವಿವಾಹ ತಡೆ ಕಾಯ್ದೆ, ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಮಡಿಕೇರಿಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ವೀರಾಜಪೇಟೆಯಲ್ಲಿ ಕಾರ್ಯನಿರ್ವಹಣೆ)ದಲ್ಲಿ ಮೊಕದ್ದಮೆ ದಾಖಲಾಗಿದೆ.