ಪೊನ್ನಂಪೇಟೆ: ಪಟ್ಟಣದ ೧೦ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಇಲ್ಲಿನ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ದೇವಾಲಯದ ಮುಖ್ಯ ಅರ್ಚಕ ಪಂಚಾಕ್ಷರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೊಳೇರ ದಯಾ ಚಂಗಪ್ಪ ಅವರ ಮುಂದಾಳತ್ವದಲ್ಲಿ ಸಾಮೂಹಿಕ ಗಣಪತಿ ಹೋಮ ನೆರವೇರಿಸಲಾಯಿತು. ನಂತರ ಗಣಪತಿ ಮೂರ್ತಿಗೆ ವಿಶೇಷ ಅಲಂಕಾರವನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು.

ಈ ಬಾರಿ ಪೊನ್ನಂಪೇಟೆ ಪಟ್ಟಣದ ವಿವಿಧ ೧೦ ಸಮಿತಿಗಳು ಗಣಪತಿ ಪ್ರತಿಷ್ಠಾಪನೆ ಮಾಡಿದ್ದು, ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕ ಸಂಘ, ಶಿವ ಕಾಲೋನಿಯ ಶ್ರೀ ಶಿವ ಯುವಕ ಸಂಘ, ಮಹಾತ್ಮಗಾಂಧಿ ನಗರದ ಯುವಶಕ್ತಿ ಯುವಕ ಸಂಘ, ವಿಘ್ನೇಶ್ವರ ವಾಹನ ಚಾಲಕ ಹಾಗೂ ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಜೋಡುಬೀಟಿ ವಿನಾಯಕ ಯುವಕರ ಬಳಗ, ಕುಂದ ರಸ್ತೆಯ ಗಜಾನನ ಗೆಳೆಯರ ಬಳಗ, ಜನತಾ ಕಾಲೋನಿಯ ಜನತಾ ವಿನಾಯಕ ಬಳಗ, ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಸಮಿತಿಯವರು ಗಣೇಶ ಮೂರ್ತಿಗಳನ್ನು ತಮ್ಮ ತಮ್ಮ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದರು.

ಬಸವೇಶ್ವರ ದೇವಾಲಯದಲ್ಲಿ ಇರಿಸಿದ್ದ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ವಿವಿಧ ಹೂವುಗಳಿಂದ ಅಲಂಕೃತಗೊAಡಿದ್ದ ಮಂಟಪಗಳಲ್ಲಿ ಮೂರ್ತಿಯನ್ನು ವಾಲಗ, ಬ್ಯಾಂಡ್ ಸೆಟ್, ಚಂಡೆ, ಮದ್ದಳೆಯೊಂದಿಗೆ ದೇವಾಲಯಕ್ಕೆ ಪ್ರದಕ್ಷಣೆ ಹಾಕಿ, ಮೆರವಣಿಗೆಯೊಂದಿಗೆ ತಮ್ಮ ಬಡಾವಣೆಗೆ ತೆರಳಿ ಪ್ರತಿಷ್ಠಾಪನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಬೆಳಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು. ಪೊನ್ನಂಪೇಟೆಯಲ್ಲಿಗೌರಿ ಗಣೇಶ ವಿಸರ್ಜನೆ ಕಾರ್ಯಕ್ರಮ ಸೆಪ್ಟೆಂಬರ್ ೪ರಂದು ನಡೆಯಲಿದೆ.